ಬೆಂಗಳೂರು: ನಿಲ್ದಾಣಗಳ ಬಳಿ ನಿಂತಿರುತ್ತಿದ್ದ ಚಾಲಕರನ್ನು ಪರಿಚಯ ಮಾಡಿಕೊಂಡು ಅವರಿಗೆ ಮದ್ಯ ಕುಡಿಸಿ ಆಟೊ ಕದ್ದೊಯ್ಯುತ್ತಿದ್ದ ಆರೋಪಿ ವಿಷ್ಣುನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ವಿಷ್ಣು, ಕೆಂಗೇರಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದ. ಈತನನ್ನು ಬಂಧಿಸಿ, 2 ಆಟೊ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.
‘ಎಂಟನೇ ಮೈಲಿ ಬಳಿ ಚಾಲಕ ವಿಜಯ್‌ಕುಮಾರ್ ಅವರನ್ನು ಅಗಸ್ಟ್ 17ರಂದು ಪರಿಚಯ ಮಾಡಿಕೊಂಡಿದ್ದ ಆರೋಪಿ, ಸ್ನೇಹ ಬೆಳೆಸಿದ್ದ. ನಂತರ, ಮದ್ಯ ಕುಡಿಯೋಣವೆಂದು ಆಟೊ ಸಮೇತ ಕರೆದೊಯ್ದಿದ್ದ. ಇಬ್ಬರೂ ಸೇರಿ ಮದ್ಯ ಕುಡಿದಿದ್ದರು. ಆರೋಪಿಯೇ ಮದ್ಯದ ಬಿಲ್ ಪಾವತಿಸಿದ್ದ.’
‘ಪಾನಮತ್ತನಾಗಿದ್ದ ವಿಜಯ್‌ಕುಮಾರ್ ಅವರನ್ನು ಜಾಗವೊಂದರಲ್ಲಿ ಮಲಗಿಸಿದ್ದ. ನಂತರ, ಅವರ ಆಟೊ ಸಮೇತ ಪರಾರಿಯಾಗಿದ್ದ. ವಿಜಯ್‌ಕುಮಾರ್ ಅವರು ಮರುದಿನ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.