ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂವರು ಸಾಧಕರಿಗೆ ಎಸ್‌ವಿಎನ್‌ ಪ್ರಶಸ್ತಿ ಪ್ರದಾನ

ಸಂಗೀತದಿಂದ ಮನೋವಿಕಾಸ, ಮಾನಸಿಕ ಶಾಂತಿ: ಸಿ.ಸೋಮಶೇಖರ್‌
Published 17 ಮಾರ್ಚ್ 2024, 21:30 IST
Last Updated 17 ಮಾರ್ಚ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ಶ್ರೀರಾಮಸೇನಾ ಮಂಡಳಿ ಟ್ರಸ್ಟ್‌ ಆಯೋಜಿಸಿದ್ದ ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಸ್ಮರಣಾ ಸಂಗೀತೋತ್ಸವದಲ್ಲಿ ಸಂಗೀತ ಕ್ಷೇತ್ರದ ಮೂವರು ಸಾಧಕರಿಗೆ ಎಸ್‌ವಿಎನ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಟಿ.ಎಚ್‌.ವಿನಾಯಕರಾಮ್‌ ಹಾಗೂ ರುದ್ರಪಟ್ಟಣಂ ಸಹೋದರರಾದ ಆರ್‌.ಎನ್‌.ತ್ಯಾಗರಾಜನ್‌ ಹಾಗೂ ಆರ್‌.ಎನ್‌.ತಾರಾನಾಥನ್‌ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ, ‘ಸಂಗೀತದಿಂದ ಮನೋವಿಕಾಸ, ಮಾನಸಿಕ ಶಾಂತಿ, ಮನರಂಜನೆ ದೊರೆಯುತ್ತದೆ. ಸಂಗೀತವು ಕಲೆ ಹಾಗೂ ವಿಜ್ಞಾನವೂ ಹೌದು’ ಎಂದು ಹೇಳಿದರು.

‘ಮೂವರು ಸಂಗೀತ ತಪಸ್ವಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ರುದ್ರಪಟ್ಟಣಂ ಅನೇಕ ಸಂಗೀತ ಸಾಧಕರನ್ನು ರಾಷ್ಟ್ರಕ್ಕೆ ನೀಡಿದೆ. ಸಂಗೀತ ಕ್ಷೇತ್ರದ ಸಾಧಕರಿಗೆ ಜನ್ಮನೀಡುವ ಭೂಮಿ ಅದು’ ಎಂದು ಹೇಳಿದರು.

‘ನಾರಾಯಣ ಸ್ವಾಮಿ ಅವರು ತಮ್ಮ 14ನೇ ವಯಸ್ಸಿನಲ್ಲೇ ಶ್ರೀರಾಮಸೇನಾ ಮಂಡಳಿ ಸ್ಥಾಪಿಸಿ ಅದರ ಮೂಲಕ ನಾಡಿಗೆ ಅನೇಕ ಸಂಗೀತ ದಿಗ್ಗಜರನ್ನು ಪರಿಚಯಿಸಿದ್ದರು. ಈ ಮಂಡಳಿಗೆ ರಾಷ್ಟ್ರಪತಿ ಸೇರಿದಂತೆ ಅನೇಕರು ಭೇಟಿ ನೀಡಿದ್ದರು’ ಎಂದು ಸ್ಮರಿಸಿದರು.

‘ರಾಮಪ್ರಸಾದ್‌ ಅವರು ಏಕಾಂಗಿಯಾಗಿ ತಂದೆಯವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಸಿಎಂಆರ್‌ ವಿಶ್ವವಿದ್ಯಾಲಯದ ಮುಖ್ಯಸ್ಥ ಕೆ.ಸಿ.ರಾಮಮೂರ್ತಿ ಮಾತನಾಡಿ, ‘ಮಂಡಳಿಯ ಕೆಲಸವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಎಸ್‌ವಿಎನ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಪುತ್ರ ಸಾಗುತ್ತಿದ್ದಾರೆ. ರಾಮಪ್ರಸಾದ್‌ ಅವರಿಗೆ ಸಂಗೀತ ಕ್ಷೇತ್ರದ ಮೇಲೆ ಅಗಾಧವಾದ ಆಸಕ್ತಿ ಹಾಗೂ ಒಲವು’ ಎಂದು ಹೇಳಿದರು.

ಟ್ರಸ್ಟಿ ಶಿವರಾಮಯ್ಯ ಮಾತನಾಡಿ, ‘ಮಂಡಳಿಯಿಂದ 2001ರಿಂದ ಇಲ್ಲಿವರೆಗೆ ಎಂ.ಎಸ್‌.ಸುಬ್ಬುಲಕ್ಷ್ಮಿ ಸೇರಿದಂತೆ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ’ ಎಂದು ಹೇಳಿದರು. ಟ್ರಸ್ಟ್‌ ಅಧ್ಯಕ್ಷ ಎ.ರವೀಂದ್ರ ಹಾಜರಿದ್ದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಸಂಗೀತ ಕಾರ್ಯಕ್ರಮಗಳು ನಡೆದವು. ಅನುರಾಧಾ ಮಧುಸೂದನ್ ತಂಡದಿಂದ ವೀಣಾವಾದನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT