ಬೆಂಗಳೂರು: ‘ನಗರದ ಸೌಂದರ್ಯ ಹೆಚ್ಚಿಸಬೇಕಾದರೆ ರಸ್ತೆ ಬದಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗೋಪಾಲ್ ರಾಮನಾರಾಯಣ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಹಿ ಸೇವಾ 2024’ ಅಭಿಯಾನದಲ್ಲಿ ಕಪ್ಪು ಚುಕ್ಕೆಗಳ (ಕಸ ಸುರಿಯುವ ಸ್ಥಳ ಬ್ಲ್ಯಾಕ್ ಸ್ಪಾಟ್) ಸೌಂದರ್ಯೀಕರಣ ಹಾಗೂ ಸ್ವಚ್ಛತೆಯ ಕುರಿತು ಅವರು ಮಾತನಾಡಿದರು.
ನಗರದಲ್ಲಿ ಹಲವರು, ಮನೆಗೆ ಬರುವ ಆಟೊ ಟಿಪ್ಪರ್‌ಗಳಿಗೆ ಕಸ ನೀಡದೆ ರಸ್ತೆ ಬದಿ ಕಸ ಬಿಸಾಡುತ್ತಿದ್ದಾರೆ. ಅದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಯಾರೂ ರಸ್ತೆ ಬದಿ ಕಸ ಬಿಸಾಡದಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಡಾಲರ್ಸ್ ಕಾಲೊನಿಯ 4, 5 ಮತ್ತು 3ನೇ ಅಡ್ಡರಸ್ತೆಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಹಸಿಕಸ– ಒಣಕಸ ಬೇರ್ಪಡಿಸುವಿಕೆ ಬಗ್ಗೆ ಅರಿವು ಮೂಡಿಸಲಾಯಿತು.
ಬಹುಮಾನ: ಶಾಲಾ ಮಕ್ಕಳಿಗೆ ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 40 ಮಕ್ಕಳು ಭಾಗವಹಿಸಿದ್ದು, 15 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.