ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,301 ಕ್ಷೇಮ ಕೇಂದ್ರ ಸ್ಥಾಪನೆ

ಆಯುಷ್ಮಾನ್‌ ಭಾರತ್‌: 2022ಕ್ಕೆ 1.5ಲಕ್ಷ ಎಚ್‌ಡಬ್ಲ್ಯುಸಿ ಸ್ಥಾಪನೆ ಗುರಿ
Last Updated 24 ಫೆಬ್ರುವರಿ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಆಯುಷ್ಮಾನ್‌ ಭಾರತ್‌ ಯೋಜನೆಯಡಿ 2022ರ ಅಂತ್ಯದ ವೇಳೆಗೆ ದೇಶದಲ್ಲಿ ಒಟ್ಟು 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು (ಎಚ್‌ಡಬ್ಲ್ಯುಸಿ) ಸ್ಥಾಪಿಸುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ 2020ರ ಅಂತ್ಯದೊಳಗೆ ಹೆಚ್ಚುವರಿಯಾಗಿ 3,301 ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ’ ಎಂದು ಕೇಂದ್ರಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,‘ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಆರೋಗ್ಯ ಉಪಕೇಂದ್ರಗಳನ್ನು ಎಚ್‌ಡಬ್ಲ್ಯುಸಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಧುಮೇಹ, ರಕ್ತದೊತ್ತಡ, ಕ್ಷಯರೋಗ ಹಾಗೂ ಇತರ ಮಾರಕ ಕಾಯಿಲೆಗಳನ್ನು ನಿಯಂತ್ರಿಸಲು ಈ ಕೇಂದ್ರಗಳು ಸಹಕಾರಿ. ರಾಜ್ಯದಲ್ಲಿ ಸದ್ಯ 1,930 ಎಚ್‌ಡಬ್ಲ್ಯುಸಿಗಳು ಕಾರ್ಯನಿರ್ವಹಿಸುತ್ತಿವೆ’ ಎಂದರು.

‘ರೋಗಿಗಳ ಆರೋಗ್ಯ ದೃಷ್ಟಿಯಿಂದ ತಿಂಗಳಲ್ಲಿ 10 ದಿನ ಯೋಗ ತರಬೇತಿ ನೀಡಲು ಪ್ರತಿ ಕೇಂದ್ರದಲ್ಲೂ ತರಬೇತುದಾರರನ್ನು ನಿಯೋಜಿಸಲಾಗಿದೆ. ಎಚ್‌ಡಬ್ಲ್ಯುಸಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿದೆ.ಕೇಂದ್ರಗಳಿಗೆ ನಿತ್ಯ ಭೇಟಿ ನೀಡುವ ಹೊರರೋಗಿಗಳ ಸರಾಸರಿ ಸಂಖ್ಯೆ 15ರಿಂದ 30ಕ್ಕೆ ಹೆಚ್ಚಳ ಕಂಡಿದೆ’ ಎಂದು ವಿವರಿಸಿದರು.

ಬಿಎಸ್ಸಿ ನರ್ಸಿಂಗ್‌ ಪದವೀಧರರ ಆಯ್ಕೆ: ‘ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಗೆಬಹುಕೌಶಲ ತರಬೇತಿ ನೀಡಲಾಗುತ್ತಿದೆ. ಇಲ್ಲಿವರೆಗೆ 1,547 ಬಿಎಸ್ಸಿ ನರ್ಸಿಂಗ್ ಪದವೀಧರರನ್ನು ಮಧ್ಯಮ ಹಂತದ ಆರೋಗ್ಯ ಪೂರೈಕೆದಾರರಾಗಿ (ಎಂಎಲ್‌ಎಚ್‌ಪಿ) ಆಯ್ಕೆ ಮಾಡಿಕೊಂಡಿದ್ದು, 970 ಮಂದಿಗೆ ತರಬೇತಿ ನೀಡಲಾಗಿದೆ. 2020ರಿಂದ ಬಿಎಸ್ಸಿ ಪದವೀಧರರನ್ನು ಎಚ್‌ಡಬ್ಲ್ಯುಸಿಗಳಿಗೆ ನೇರ ನೇಮಕ ಮಾಡಲಾಗುವುದು’ ಎಂದರು.

ಸೇವೆಗಳ ಹೆಚ್ಚಳ: ಎಚ್‌ಡಬ್ಲ್ಯುಸಿಗಳಲ್ಲಿ ಸಿಗುತ್ತಿರುವ ಏಳು ಆರೋಗ್ಯ ಸೇವೆಗಳನ್ನು ಶೀಘ್ರವೇ 12ಕ್ಕೆ ಹೆಚ್ಚಿಸಲಾಗುವುದು. ಹೆಚ್ಚುವರಿಯಾಗಿ ಬಾಯಿ ಆರೋಗ್ಯ ಆರೈಕೆ, ಕಣ್ಣು ಹಾಗೂ ಕಿವಿ ಸಮಸ್ಯೆಗಳು, ಅಪಘಾತ ಹಾಗೂ ಸುಟ್ಟಗಾಯದ ಚಿಕಿತ್ಸೆ, ಮನೋರೋಗ ಚಿಕಿತ್ಸೆ, ರೋಗ ಉಪಶಮನ, ಆಹಾರದ ಗುಣಮಟ್ಟ ಪರಿಶೀಲನೆ ಹಾಗೂ ವೃದ್ಧರ ಚಿಕಿತ್ಸೆಗಳನ್ನು ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಕ್ಷಯರೋಗ ನಿವಾರಣೆಯಲ್ಲಿ ಪ್ರಗತಿ

‘ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಪ್ರತಿವರ್ಷ 8 ಲಕ್ಷ ಸಂಭಾವ್ಯ ಕ್ಷಯರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ಕನಿಷ್ಠ 80 ಸಾವಿರ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಿಕಾಸ್ ಶೀಲ್ ಮಾಹಿತಿ ನೀಡಿದರು.

‘ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಇಲ್ಲ’

‘ಆಶಾ ಕಾರ್ಯಕರ್ತೆಯರನ್ನು ಪೂರ್ಣಾವಧಿಗೆ ನೇಮಿಸಿಲ್ಲ. ಅವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸರ್ಕಾರ ವೇತನ ನಿಗದಿ ಮಾಡಿಲ್ಲ. ಇಲಾಖೆಯಿಂದ ಅವರಿಗೆ ಹೆಚ್ಚಿನ ಕೆಲಸದ ಒತ್ತಡವೂ ಇಲ್ಲ. ಅವರ ಗೌರವಧನ ಹೆಚ್ಚಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದುವಿಕಾಸ್ ಶೀಲ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT