ಶನಿವಾರ, ಏಪ್ರಿಲ್ 1, 2023
30 °C
ಸ್ವಚ್ಛತೆ ಕಾಪಾಡಲು ಸೂಚನೆ: ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ

ಶಿಶುವಿಹಾರ ನಾಳೆಯಿಂದ ಆರಂಭ: ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ನಗರದಲ್ಲಿ ಶಿಶುವಿಹಾರ ಮತ್ತು ಆಟದ ಮನೆಯ ಕೇಂದ್ರಗಳನ್ನು ಇದೇ 8ರಿಂದ (ಸೋಮವಾರ) ಪುನರಾರಂಭಿಸುವ ಕುರಿತ ಮಾರ್ಗಸೂಚಿಗಳ ಸುತ್ತೋಲೆಯನ್ನು ಬಿಬಿಎಂಪಿ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಪತ್ತೆ ದರ ಶೇ 2ಕ್ಕಿಂತ ಕಡಿಮೆ ಇರುವ ವಾರ್ಡ್‌ಗಳಲ್ಲಿ ಮಾತ್ರ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಸೋಂಕು ನಿವಾರಕ ದ್ರಾವಣಗಳನ್ನು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತ ಸ್ಥಳದಲ್ಲಿರಿಸಬೇಕು. ಆಕಸ್ಮಿಕವಾಗಿ ಸೇವಿಸಿದರೆ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಶಿಕ್ಷಕರು ಮತ್ತು ಸಿಬ್ಬಂದಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೇಂದ್ರಗಳನ್ನು ತೆರೆಯುವ ಬಗ್ಗೆ ವಲಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಕೇಂದ್ರಗಳಿಗೆ ಹಾಜರಾಗಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ಪೋಷಕರು ಸಹ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ತಿಳಿಸಲಾಗಿದೆ.

ಮೊದಲ ಹಂತದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಕೇಂದ್ರಗಳನ್ನು ತೆರೆಯಬೇಕು. ಮಕ್ಕಳಿಗೆ ಕಾಯಿಲೆಯ ಲಕ್ಷಣಗಳಿದ್ದರೆ ಕೇಂದ್ರಕ್ಕೆ ಕರೆತರದಂತೆ ಪೋಷಕರಿಗೆ ಸೂಚಿಸಬೇಕು. ಮಗುವಿನ ಕುಟುಂಬದಲ್ಲಿ ಯಾರಿಗಾದರೂ ಕೋವಿಡ್‌ ದೃಢಪಟ್ಟರೆ ಮತ್ತು ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಅಥವಾ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರೆ ಮಕ್ಕಳನ್ನು ಶಿಶುವಿಹಾರ ಕೇಂದ್ರ ಮತ್ತು ಆಟದ ಮನೆಗಳಿಗೆ ಕರೆತರಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಕ್ಕಳನ್ನು 1 ಮೀ. ಅಂತರದಲ್ಲಿ ಕೂರಿಸುವ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಲ್ಲಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಬರಲು ಸೂಚಿಸಬೇಕು. ಮೊದಲ ದಿನ ಕೇಂದ್ರಗಳನ್ನು ಅಲಂಕರಿಸಿ ಹಬ್ಬದ ವಾತಾವರಣ ಇರುವಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಆರಂಭದ ದಿನದ 72 ಗಂಟೆ ಮೊದಲು ಕಡ್ಡಾಯವಾಗಿ ಆರ್‌ಟಿಪಿಸಿರ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೇಂದ್ರಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಂದರ್ಶಕರಿಗೆ ಪ್ರವೇಶ ನಿರ್ಬಂಧಿಸಬೇಕು ಎಂದು ಸೂಚಿಸಲಾಗಿದೆ.

ಎಲ್ಲ ವಲಯ ಆರೋಗ್ಯಾಧಿಕಾರಿಗಳು ಪಾಲಿಕೆ ವ್ಯಾಪ್ತಿಯಲ್ಲಿನ ಶಿಶು ವಿಹಾರ ಮತ್ತು ಆಟದ ಮನೆಯ ಕೇಂದ್ರಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು