ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಯಾರಿಂದಲೂ ಜಾತ್ಯತೀತತೆ ಪಾಠ ಕಲಿಯಬೇಕಿಲ್ಲ

ರಂಗಾಯಣದ ವಾಚ್‌ಡಾಗ್‌ ಆಗಿರುತ್ತೇನೆ: ಅಡ್ಡಂಡ ಕಾರ್ಯಪ್ಪ
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮೈಸೂರು ರಂಗಾಯಣದ ಅಸ್ಮಿತೆ ಎನಿಸಿರುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವ ಫೆ.14ರಿಂದ 19ರವರೆಗೆ ನಡೆಯಲಿದೆ. ‘ಗಾಂಧಿ ಪಥ’ ಶೀರ್ಷಿಕೆಯಡಿ ಈ ಬಾರಿಯ ಉತ್ಸವ ನಡೆಯಲಿದ್ದು, ಅದರ ರೂಪುರೇಷೆಗಳನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಟಿಪ್ಪು ಬಗ್ಗೆ ನೀಡಿದ ಹೇಳಿಕೆಯೊಂದರಿಂದಾಗಿ, ಅವರ ಸಾರಥ್ಯದ ಈ ಉತ್ಸವಕ್ಕೆ ಕೇಳಿ ಬರುತ್ತಿರುವ ವಿರೋಧದ ದನಿಗೂ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.

* ಈ ಸಲದ ಬಹುರೂಪಿ ಹೇಗೆ ಭಿನ್ನ?

ಈ ಹಿಂದೆ ನಾಟಕೋತ್ಸವದ ಥೀಮ್‌ ಆಯ್ಕೆ ಮಾಡಿಕೊಂಡಾಗ, ಅದು ಸೆಮಿನಾರ್‌ಗೆ ಮಾತ್ರ ಸೀಮಿತ ಆಗುತ್ತಿತ್ತು. ಆದರೆ ಈ ಬಾರಿ ಆಯ್ಕೆ ಮಾಡಿಕೊಂಡ ವಿಷಯವನ್ನು ಸಮರ್ಥವಾಗಿ ಜನರಿಗೆ ಮುಟ್ಟಿಸಲು ನಿರ್ಧರಿಸಿದ್ದೇವೆ. ಗಾಂಧಿ ಜನ್ಮದಿನದ 150ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಯುವಜನರಿಗೆ ಗಾಂಧಿ ತತ್ವಗಳನ್ನು ತಲುಪಿಸಬೇಕು; ‘ಬಹುರೂಪಿ’ಗಿಂತಲೂ ಹೆಚ್ಚಾಗಿ ಎಲ್ಲೆಲ್ಲೂ ‘ಗಾಂಧಿ’ಯೇ ಕಾಣಬೇಕು ಎಂಬುದು ಆಶಯ.

* ಗಾಂಧಿ ಪಥದ ಬಹುರೂಪಿ ಹೇಗಿರುತ್ತದೆ? ‘ಗಾಂಧಿ ಪಥ’ವೇ ಏಕೆ?

ಇಡೀ ವಾತಾವರಣ ಗಾಂಧಿಮಯ ಆಗಿರುತ್ತದೆ. ಗಾಂಧಿ ಬಗ್ಗೆ, ಅವರ ತತ್ವಗಳ ಬಗ್ಗೆ ಗೌರವ ಮೂಡಿಸುವ ಪ್ರಯತ್ನವಿದು. ನಾವೀಗ ಬಹುರೂಪಿಯ ಮೂಲಕ ಪೂಜಿಸಲು ಹೊರಟಿರುವುದು ಗಾಂಧಿಯನ್ನಲ್ಲ; ಗಾಂಧಿ ತತ್ವಗಳನ್ನು. ಅದನ್ನು ನಾಟಕಗಳ ಆಯ್ಕೆಯಲ್ಲಿ, ಚಲನಚಿತ್ರೋತ್ಸವದ ಮೂಲಕ ಬಲವಾಗಿ ಹೇಳುತ್ತಿದ್ದೇವೆ.

ನಾನೊಬ್ಬ ಬಲಪಂಥೀಯ ವಿಚಾರಧಾರೆಯ ವ್ಯಕ್ತಿಯಾದರೂ ನಾನು ಗಾಂಧಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ. ನನ್ನ ಸಿದ್ಧಾಂತ ವೈಯಕ್ತಿಕವಾದುದು. ಅದನ್ನು ಇದಕ್ಕೆ ಅನ್ವಯಿಸಬೇಕಿಲ್ಲ. ಮನುಷ್ಯರನ್ನು ಪ್ರೀತಿಸಬಲ್ಲೆ ಎಂಬ ಸಿದ್ಧಾಂತದವನು ನಾನು.ಯಾಕೆ ಬಲಪಂಥದಲ್ಲಿರುವವರು ಗಾಂಧಿಯನ್ನು ಸ್ವೀಕಾರ ಮಾಡಬಾರದಾ? ಅಂಬೇಡ್ಕರ್‌ ಬಗ್ಗೆ ಒಲವಿರಬಾರದಾ? ಗಾಂಧೀಜಿಯನ್ನು ಇವರು ಮಾತ್ರ ಹೇಳಬೇಕು ಎಂದು ಯಾರಿಗಾದರೂ ಬರೆದು ಕೊಟ್ಟಿದ್ದಾರಾ? ಸ್ವಾತಂತ್ರ್ಯ ಸಿಕ್ಕಾಗ ಆ ರೀತಿ ಏನಾದರೂ ಕರಾರು ಆಗಿದೆಯಾ?

* ‘ರಾಷ್ಟ್ರಪಿತನಿಂದ ರಾಷ್ಟ್ರಪಥದತ್ತ...’ ಎಂಬ ಪರಿಕಲ್ಪನೆ ಏನಿದು?

ಗಾಂಧಿಯನ್ನಿಟ್ಟುಕೊಂಡು, ಪಂಥಗಳನ್ನು ಮೀರಿ ಪಥದತ್ತ ಸಾಗುವುದು. ಯಾವುದೇ ‘ಇಸಂ’ಗಳಿಗೆ ಒಳಗಾಗಬಾರದು. ಎಲ್ಲರನ್ನು ಎಲ್ಲರೂ ಸ್ವೀಕರಿಸಬೇಕು. ಎಲ್ಲ ಸಿದ್ಧಾಂತಗಳೂ ಮನುಷ್ಯ ಪ್ರೀತಿಯನ್ನೇ ಸಾರಿರುವುದು.

* 'ಬಹುರೂಪಿ'ಯಿಂದ ದೂರ ಉಳಿಯುವ ಮಾತು ಕೆಲ ರಂಗಕರ್ಮಿಗಳಿಂದ ಕೇಳಿಬರುತ್ತಿದೆಯಲ್ಲ?

ಟಿಪ್ಪು ಮೈಸೂರಿನಲ್ಲಿ ಸಹ್ಯವಾಗಿರಬಹುದು. ಆದರೆ, ಕೊಡಗಿನಲ್ಲಿ ಅಸಹ್ಯ. ನಾನು ಕೊಡಗಿನವನು. ಹಾಗಾಗಿ, ಕಾರ್ಯಕ್ರಮವೊಂದರಲ್ಲಿ ನಾನೊಂದು ಮಾತು ಹೇಳಿದೆ. ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ರಂಗಾಯಣಕ್ಕೆ ಎಳೆದು ತರುವ ಅಗತ್ಯವಿಲ್ಲ. ಬಹುರೂಪಿಯನ್ನು ಬಹಿಷ್ಕರಿಸಬೇಕು ಎಂಬುದು ಸರಿಯಲ್ಲ. ರಂಗಾಯಣದ ವಾಚ್‌ಡಾಗ್‌ ಆಗಿರುತ್ತೇನೆ.

* ಟಿಪ್ಪುವಿನಿಂದ ಬಲವಂತದಿಂದ ಮತಾಂತರಗೊಂಡ ಕುಟುಂಬದ ಕುಡಿ, ಅಡ್ಡಂಡ ಕಾರ್ಯಪ್ಪ ಆಗಿಯೇ ಉಳಿದದ್ದು ಹೇಗೆ?

ಅಜ್ಜ ಮತಾಂತರಗೊಳ್ಳುವ ಮುನ್ನವೇ ಜನಿಸಿದ್ದ ಮಕ್ಕಳ ಸಂತತಿಯವರು ನಾವು. ವಾಪಸ್‌ ಬಂದ ಅಜ್ಜನ ಮಕ್ಕಳ ಸಂತತಿಯವರಲ್ಲ. ನನ್ನ ಐದನೇ ತಲೆಮಾರಿನ ಅಜ್ಜನನ್ನು; ನನ್ನೊಬ್ಬನ ಅಜ್ಜ ಅಷ್ಟೇ ಅಲ್ಲ, ಕೊಡಗಿನ ಅನೇಕ ಜನರನ್ನು ಬಲವಂತವಾಗಿ ಮತಾಂತರ ಮಾಡಲಾಗಿತ್ತು. ವಾಪಸ್‌ ಬಂದ ಅವರು ಪ್ರತ್ಯೇಕವಾಗಿ ಉಳಿಯಬೇಕಾಯಿತು. ಹೀಗಾಗಿಯೇ, ಟಿಪ್ಪು ಕೊಡಗಿನವರಿಗೆ ಅಸಹ್ಯ; ಮೈಸೂರಿನವರಿಗೆ ಹೆಮ್ಮೆ ಎಂದು ನಾನು ಹೇಳಿದ್ದು. ಆದರೆ, ಅದನ್ನು ತಿರುಚುವ ಪ್ರಯತ್ನ ಮಾಡಲಾಯಿತು.

ಒಂದು ನೆನಪಿರಲಿ. ಒಬ್ಬ ಕೊಡವನಾಗಿ ನಾನು ಟಿಪ್ಪುನನ್ನು ದೂರಿದ್ದೇನೆಯೇ ಹೊರತು ಅಲ್ಪಸಂಖ್ಯಾತರನ್ನಲ್ಲ.ಅಡ್ಡಂಡ ಕುಟುಂಬದ ಮುತ್ತಜ್ಜ ಅಯ್ಯಪ್ಪ ಅವರಿಗೆ ಆಲಿ ಎಂಬ ಸ್ನೇಹಿತ ಇದ್ದ. ಅಜ್ಜ ತೀರಿಕೊಂಡ ಸುದ್ದಿ ಕೇಳಿ ಆಲಿ ಕೂಡ ತೀರಿಕೊಳ್ಳುತ್ತಾರೆ. ಅಂಥ ಜೀವದ ಗೆಳೆಯರವರು. ಹೀಗಾಗಿ ನಮ್ಮ ಕುಟುಂಬದ ವಾರ್ಷಿಕ ಹಬ್ಬದಲ್ಲಿ ಆಲಿಗಾಗಿ ಕೋಳಿ ಕೊಯ್ಯುವ ಸಂಪ್ರದಾಯವೂ ನಡೆದುಬಂದಿದೆ. ಇವತ್ತಿಗೂ ನನಗೆ ಬೆಳಿಗ್ಗೆ ತಿಂಡಿ, ರಾತ್ರಿ ಊಟ ಕೊಡುವವನು ಮುಸ್ಲಿಂ ವ್ಯಕ್ತಿ. ಇಂಥ ಸೆಕ್ಯುಲರ್‌ ಕುಟುಂಬದಿಂದ ಬಂದ ನನಗೆಂಥ ಜಾತ್ಯಿತೀತತೆಯ ಪಾಠ ಹೇಳುವುದು?

*ನೀವು ಹಾಕಿಕೊಂಡ ಕಾರ್ಯಯೋಜನೆಗಳನ್ನು ಪೂರ್ತಿಗೊಳಿಸುವುದಕ್ಕೆ ಹೇಗೆ ಸಜ್ಜಾಗಿದ್ದೀರಿ?

ನಾನು ಈ ಸ್ಥಾನಕ್ಕೆ ಸುಮ್ಮನೇ ಬಂದಿಲ್ಲ. ಯಾವುದೇ ರಾಜಕೀಯ ಪಕ್ಷದ ಕೆಲಸಗಾರ ಎಂದು ನನ್ನನ್ನು ಇಲ್ಲಿ ತಂದು ಕೂರಿಸಿಲ್ಲ. ನಾನು 40 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಕ್ಕಾಗಿ ನನಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಅದೂ ಕಾಂಗ್ರೆಸ್‌ ಸರ್ಕಾರ! ಬಿಜೆಪಿ ಸರ್ಕಾರ ಕೊಟ್ಟಿದ್ದರೆ ’ಪಡ್ಕೊಂಡ’ ಎಂದು ಹೇಳಬಹುದಿತ್ತು. ನನ್ನ ಮನೆಗೆ ‘ರಂಗಭೂಮಿ’ ಎಂದು ಹೆಸರಿಟ್ಟುಕೊಂಡವನು. ನನ್ನ ರಂಗಭೂಮಿಯ ದುಡಿಮೆಯಿಂದ ದಕ್ಕಿದ ಅನುಭವದಿಂದ ನಾನು ರಂಗಾಯಣವನ್ನು ಕಟ್ಟಲು ಬಂದಿದ್ದೇನೆ. ಆ ನಿಟ್ಟಿನಲ್ಲಿ ಗಾಂಧಿಪಥ ನನಗೆ ಸಿಕ್ಕ ಮೊದಲ ಹೆಜ್ಜೆ.

ನನ್ನ ಸಿದ್ಧಾಂತ ಬೇರೆ ಇರಬಹುದು. ಆದರೆ, ರಂಗಾಯಣವೇ ಬೇರೆ. ಬಿ.ವಿ. ಕಾರಂತರು ಕಟ್ಟಿದ ಈ ಸಂಸ್ಥೆಯಲ್ಲಿ ನಾನು ಕುಳಿತಿದ್ದು, ಬದ್ಧತೆಯಿಂದ ಕೆಲಸ ಮಾಡುವುದಕ್ಕಾಗಿ ಬಂದಿದ್ದೇನೆ. ನನ್ನನ್ನು ಟೀಕಿಸುವವರಿಗೆ ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೋ, ನನಗೂ ಅಂಥದೇ ಸ್ವಾತಂತ್ರ್ಯವಿದೆ. ಅವರ ಟೀಕೆಯನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ. ಇಲ್ಲಿ ‘ನಮಸ್ತೆ ಸದಾ ವತ್ಸಲೆ’ ಪ್ರಾರ್ಥನೆ ಹಾಡುವುದಿಲ್ಲ. ಬಿಜೆಪಿಯ ತಾವರೆ ಹೂವಿನ ಧ್ವಜ ಕಟ್ಟಿಲ್ಲ. ಈ ಗೇಟ್‌ನೊಳಗೆ ರಂಗಾಯಣದ ಚಟುವಟಿಕೆಗಳು ಮಾತ್ರ ನಡೆಯುತ್ತವೆ. ಆದರೆ, ಕೆಲವರು ವಿವಾದ ಸೃಷ್ಟಿಸುವುದಕ್ಕಾಗಿ ಹಾತೊರೆಯುತ್ತಿದ್ದಾರೆ. ಅದಕ್ಕೆ ಹೆದರಿ ಓಡಿಹೋಗಲಾರೆ. ನಾನು ಬಂದಿರುವುದು ಸಂಘರ್ಷಕ್ಕಲ್ಲ; ಸಮನ್ವಯತೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT