ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಬೇಡ: ಐಐಎಸ್ಸಿ

ಐಐಎಸ್ಸಿ ವಿಜ್ಞಾನಿಗಳ ಅಧ್ಯಯನ ವರದಿ ಶಿಫಾರಸು
Last Updated 11 ಸೆಪ್ಟೆಂಬರ್ 2020, 2:46 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳ ಅಧ್ಯಯನವು ಶಿಫಾರಸು ಮಾಡಿದೆ.

ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ಘಟಕದ ಸಹಾಯಕ ಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮ ಹಾಗೂ ಸಂಶೋಧನಾ ವಿದ್ಯಾರ್ಥಿಗಳಾದ ಹೇಮಂತಿನಿ ಅಲ್ಲಿರಾಣಿ ಮತ್ತು ಹರ್ಷ ವಜ್ಜರಪು ಅವರ ತಂಡವು ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದೆ.

ಈಗಿನಂತೆಯೇ ಉದ್ಯಾನದೊಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಹಾಗೂ ಉದ್ಯಾನದೊಳಗೆ ವಾಹನ ಸಂಚಾರವನ್ನು ನಿಷೇಧಿಸುವ ಸನ್ನಿವೇಶಗಳನ್ನು ವಿಜ್ಞಾನಿಗಳ ತಂಡ ತುಲನಾತ್ಮಕವಾಗಿ ವಿಶ್ಲೇಷಿಸಿದೆ. ವಾಹನ ಸಂಚಾರ ನಿಷೇಧಿಸಿದರೆ ಹಾಗೂ ನಿಷೇಧಿಸದೇ ಇದ್ದರೆ ಕಬ್ಬನ್‌ ಉದ್ಯಾನದ ಒಳಗಿನ ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ವಾಹನಗಳು ಸಂಚರಿಸುತ್ತವೆ ಎಂಬ ಅನುಪಾತವನ್ನು ಹೋಲಿಸಿ ನೋಡಿದೆ. ಅದರ ಪ್ರಕಾರ, ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಿದರೆ ಬೆಂಗಳೂರು ಮಹಾನಗರ ವ್ಯಾಪ್ತಿಯ ರಸ್ತೆಜಾಲದಲ್ಲಿ ವಾಹನ ಸಂಚಾರದ ಒಟ್ಟು ಕಿಲೋಮೀಟರ್‌ (ವಿಕೆಟಿ) ಪ್ರಮಾಣವು ಶೇ 0.44ರಷ್ಟು ಇಳಿಕೆ ಆಗಲಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

‘ಉದ್ಯಾನದಲ್ಲಿ ಈಗಿನಂತೆಯೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಮಹಾನಗರ ವ್ಯಾಪ್ತಿಯಲ್ಲಿ ದೈನಂದಿನ ವಾಹನ ಸಂಚಾರದ ಒಟ್ಟು ಪ್ರಮಾಣ 320.8 ಲಕ್ಷ ಕಿ.ಮೀ ಆಗಲಿದೆ. ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಿದರೆ ಈ ಪ್ರಮಾಣ 319.4ಲಕ್ಷ ಕಿ.ಮೀಗೆ ಇಳಿಕೆಯಾಗಲಿದೆ. ಇದಕ್ಕೆ ಮುಖ್ಯ ಕಾರಣ ವಾಹನ ಬಳಸುವವರು ಸಾಗುವ ಮಾರ್ಗವನ್ನು ಬದಲಾಯಿಸುವುದು. ಇದರಿಂದ ನಗರದಲ್ಲಿ ವಾಹನ ಸಂಚಾರದ ಒಟ್ಟು ದೂರ 1.4 ಲಕ್ಷ ಕಿ.ಮೀಗಳಷ್ಟು ಇಳಿಕೆಯಾಗುತ್ತದೆ’ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

‘ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ, ಕೆಲವು ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಇದೇ ಮಾರ್ಗವನ್ನು ಬಳಸುತ್ತಾರೆ. ಅವರು ಹೆಚ್ಚು ದೂರದ ಮಾರ್ಗವನ್ನು ಬಳಸಲು ಇದು ಕಾರಣವಾಗುತ್ತದೆ. ಇದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುವ ದೈನಂದಿನ ಪ್ರಮಾಣವೂ 1,400 ಕೆ.ಜಿಗಳಷ್ಟು ಹೆಚ್ಚುತ್ತದೆ. ವಾತಾವರಣ ಸೇರುವ ದೂಳಿನ ಕಣಗಳ (ಪಾರ್ಟಿಕ್ಯುಲೇಟ್ ಮ್ಯಾಟರ್‌) ಪ್ರಮಾಣವೂ ಶೇ 0.68ರಷ್ಟು ಕಡಿಮೆಯಾಗಲಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

ವಿಜ್ಞಾನಿಗಳ ತಂಡವು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ಮಂಜುಳಾ, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ಹಾಗೂ ಸಂಚಾರ ಪೊಲೀಸ್‌ ಜಂಟಿ ಕಮಿಷನರ್‌ ರವಿಕಾಂತೇ ಗೌಡ ಅವರಿಗೂಅಧ್ಯಯನ ವರದಿಯನ್ನು ಸಲ್ಲಿಸಿದೆ.

ಅಧ್ಯಯನದ ಪ್ರಮುಖ ಶಿಫಾರಸುಗಳು

* ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು

* ವಾಣಿಜ್ಯ ಕೇಂದ್ರ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ಸೈಕಲ್‌ ಬಳಕೆ, ನಡೆದು ಹೋಗುವುದನ್ನು ಉತ್ತೇಜಿಸಬೇಕು

* ಕಬ್ಬನ್‌ ಉದ್ಯಾನದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನಗಳ ಒತ್ತಡ ಕಡಿಮೆಗೊಳಿಸಲು ಏಕಮುಖ ಸಂಚಾರ, ಜಂಕ್ಷನ್‌ಗಳ ಅಭಿವೃದ್ಧಿ, ಟ್ರಾಫಿಕ್ ಸಿಗ್ನಗಳ ಸಮಯ ಮರುಹೊಂದಾಣಿಯಂತಹ ಕ್ರಮ ಅನುಸರಿಸಬೇಕು

* ಕಬ್ಬನ್ ಉದ್ಯಾನದ ಒಳಗಿನ ಕೆಲವು ಸಂಸ್ಥೆಗಳ ಸದಸ್ಯರ ಬಳಕೆಗಾಗಿ ಪಾದಚಾರಿ ಮಾರ್ಗಗಳನ್ನು, ಸೈಕಲ್‌ ಪಥಗಳನ್ನು ಅಭಿವೃದ್ಧಿಪಡಿಸಬೇಕು

ಅಂಕಿ ಅಂಶ

3062.43 ಟನ್‌ - ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ನಿತ್ಯ ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ

3052.73 ಟನ್‌ - ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಿದರೆ ನಿತ್ಯ ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT