ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೈಕೆ ಮರೆತ ಶಿಲ್ಪೋದ್ಯಾನ... ಅಧ್ವಾನ

ಬನಶಂಕರಿ ಶಿಲ್ಪೋದ್ಯಾನ: ದೇಶಕ್ಕೇ ಪ್ರಥಮವೆಂಬ ಹೆಗ್ಗಳಿಕೆಯಿಂದ ಆರಂಭ l ವಾರ್ಷಿಕ ₹74 ಲಕ್ಷ ‌ನಿರ್ವಹಣೆ ವೆಚ್ಚ
Last Updated 2 ಫೆಬ್ರುವರಿ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲಿನ ಶಿಲ್ಪಗಳು ಪೀಠ ಕಳೆದುಕೊಂಡು ನೆಲಕ್ಕುರುಳಿವೆ, ಮಳೆ ನೀರಿನ ಮಹತ್ವ ಸಾರುವ ಮಕ್ಕಳ ಮಣ್ಣಿನ ಮೂರ್ತಿಗಳು ಕೈ, ಕಾಲು, ಭುಜಗಳನ್ನು ಕಳೆದುಕೊಂಡಿವೆ, ಆಲಂಕಾರಿಕ ಗಿಡಗಳು ಒಣಗಿವೆ, ಹುಲ್ಲಿನಹಾಸು ಕಳೆಗುಂದಿದೆ, ಬಯಲು ರಂಗಮಂದಿರದಲ್ಲಿ ಕೂರಲೂ ಸಾಧ್ಯವಿಲ್ಲ...

ದೇಶದ ಪ್ರಥಮ ಶಿಲ್ಪಗಳ ಉದ್ಯಾನ ಎಂದು 11 ವರ್ಷದ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಶಿಲ್ಪೋದ್ಯಾನದ ಸ್ಥಿತಿ
ಇದು. ಈ ಸ್ಥಿತಿಯ ಶಿಲ್ಪೋದ್ಯಾನಕ್ಕೆ ವರ್ಷಕ್ಕೆ ₹74.64 ಲಕ್ಷವನ್ನು ನಿರ್ವಹಣೆಗೆ ನೀಡಲಾಗಿದೆ.

ಶಿಲ್ಪೋದ್ಯಾನ ಎಂಬ ಹೆಸರಿಗೇ ತದ್ವಿರುದ್ಧವಾಗಿದೆ ಇಲ್ಲಿನ ಪರಿಸ್ಥಿತಿ. ಉದ್ಯಾನದಲ್ಲಿದ್ದ 30 ಶಿಲ್ಪಗಳ ನಿರ್ವಹಣೆಯ ಹೊಣೆಯನ್ನು ಹೊತ್ತ ಬಿಡಿಎ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹಾಳುಬಿದ್ದಿವೆ. ಹಾಳಾಗಿರುವ ಶಿಲ್ಪಗಳನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಕೆಲವು ಶಿಲ್ಪಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಮೂರು ಕೊಳವೆಬಾವಿ ಇದ್ದರೂ ಗಿಡ, ಹುಲ್ಲುಹಾಸಿಗೆ ನೀರಿಲ್ಲ. ಬಯಲುರಂಗಮಂದಿರವನ್ನೂ ನಿರ್ವಹಣೆ ಮಾಡಿಲ್ಲ. ಮಳೆನೀರು ಸಂಗ್ರಹಕ್ಕೆ ಮಾಡಲಾದ ಕಾಲುವೆ ಹಾಗೂ ಕುಂಟೆ ನೀರಿಲ್ಲದೆ ಉದ್ಯಾನದ ತ್ಯಾಜ್ಯದ ಗುಂಡಿಯಾಗಿದೆ. ವಾಯು ವಿಹಾರಿಗಳಿಗಾಗಿ ನಿರ್ಮಿಸಿರುವ ಶೌಚಾಲಯ ಗಬ್ಬು ನಾರುತ್ತಿದೆ.

ಬಿಡಿಎ ಬನಶಂಕರಿ 6ನೇ ಹಂತ 1ನಬ್ಲಾಕ್‌ನಲ್ಲಿರುವ ಶಿಲ್ಪೋದ್ಯಾನವನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಉದ್ಘಾಟಿಸಿದ್ದರು‘8 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಸುಮಾರು ₹4 ಕೋಟಿ ವೆಚ್ಚ ಮಾಡಲಾಗಿತ್ತು. ಒಂದು ವರ್ಷ ಉದ್ಯಾನ ಸುಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

‘ಶಿಲ್ಪೋದ್ಯಾನ ಮೂಲೋದ್ದೇಶವನ್ನು ಕಳೆದುಕೊಂಡು, ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಬಿಡಿಎ ಅಧಿಕಾರಿ
ಗಳು ಇತ್ತ ಗಮನಹರಿಸಬೇಕು’ ಎಂದು ಬನಶಂಕರಿ ಆರನೇ ಹಂತ, ಬಿಡಿಎ ಬಡಾವಣೆ, ಒಂದನೇ ಬ್ಲಾಕ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಿ.ಎನ್‌. ಅಪ್ಪಯ್ಯ ಆಗ್ರಹಿಸಿದರು.

₹2.71 ಕೋಟಿ ವೆಚ್ಚ: ಶಿಲ್ಪೋದ್ಯಾನ ನಿರ್ವಹಣೆಗೆ ಬಿಡಿಎ ಮಾಡಿರುವ ವೆಚ್ಚದಮಾಹಿತಿಯನ್ನು ವಕೀಲರಾದ ಎಂ.ಬಾಲ
ಕೃಷ್ಣ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದಾರೆ. ಅದರಂತೆ 10 ವರ್ಷಗಳಲ್ಲಿ ₹2.71 ಕೋಟಿ ವೆಚ್ಚ ಮಾಡಲಾಗಿದೆ. ಕೆಲವು ವರ್ಷ ಅನುದಾನ ನೀಡಲಾಗಿಲ್ಲ. ಸಾಮಾನ್ಯವಾಗಿ ಉದ್ಘಟನೆಯಾದ ಮೂರು ವರ್ಷ ನಿರ್ವಹಣೆ ಶುಲ್ಕ ನೀಡುವಂತಿಲ್ಲ. ಆದರೂ ಈಶಿಲ್ಪೋದ್ಯಾನಕ್ಕೆ ಅದನ್ನೂ ನೀಡಿರುವು ದು ಈ ಮಾಹಿತಿಯಿಂದ ಸ್ಪಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT