ಮಂಗಳವಾರ, ಫೆಬ್ರವರಿ 25, 2020
19 °C
ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೆರವಣಿಗೆ l ಅತ್ತಿಬೆಲೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ನಗರದಲ್ಲೂ ಬಂದ್‌ಗೆ ಸಿಗದ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ಗೆ ನಗರದ ಜನರಿಂದ ಬೆಂಬಲ ದೊರೆಯಲಿಲ್ಲ.

ಶಾಲಾ– ಕಾಲೇಜುಗಳು ಎಂದಿನಂತೆ ನಡೆದವು. ಅಂಗಡಿಗಳು ತೆರೆದಿದ್ದವು. ನಗರ ಸಾರಿಗೆ ಹಾಗೂ ದೂರದ ಊರುಗಳಿಗೆ ಹೋಗುವ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಿದವು. ಆಟೊ, ಕ್ಯಾಬ್‌ಗಳೂ ಓಡಾಡಿದವು. ಸರ್ಕಾರಿ ಕಚೇರಿಗಳು, ಆರೋಗ್ಯ ಕೇಂದ್ರಗಳೂ ಅಡೆತಡೆಯಿಲ್ಲದೆ ಕೆಲಸ ಮಾಡಿದವು.

ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆನಂದ ರಾವ್ ವೃತ್ತದಲ್ಲಿ ಹೋಟೆಲ್‌ಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ನಡೆಯಿತು. ಈ ವೇಳೆ ಬಂದ್ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ‌ ನಡೆಯಿತು.

ದೊಮ್ಮಲೂರು ಹಾಗೂ ಹೊರವಲಯದ ಅತ್ತಿಬೆಲೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮೂರು ದಶಕಗಳಿಂದ ದೂಳು ಹಿಡಿಯುತ್ತಿರುವ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬಂದ್‌ ಬಗ್ಗೆ ಕನ್ನಡಪರ ಸಂಘಟನೆಗಳಲ್ಲೇ ಒಮ್ಮತ ಏರ್ಪಡದೇ ಇದ್ದದ್ದರಿಂದ  ಕೆಲ ಸಂಘಟನೆಗಳು ದೂರ ಉಳಿದವು. ವಾಟಾಳ್ ನಾಗರಾಜ್‌ ನೇತೃತ್ವದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಬಂದ್‌ಬೆಂಬಲಿಸುವುದಿಲ್ಲ ಎಂದು ಬುಧವಾರವೇ ಸ್ಟಷ್ಟಪಡಿಸಿದ್ದವು.

ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ಅಂಬೇಡ್ಕರ್‌ ಸೇನೆ ಮಾತ್ರ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ಪಡೆದಿದ್ದವು. ಬೆಳಿಗ್ಗೆ 11.30ಕ್ಕೆ ನಗರ ರೈಲು ನಿಲ್ದಾಣದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೆರವಣಿಗೆ ಆರಂಭಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂತ್ಯಗೊಳಿಸಲಾಯಿತು. ಇದನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡಲಿಲ್ಲ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ: ಬಂದ್‌ನಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಬಂದ್ ಆಗಬಹುದು ಎಂದು ಯೋಚನೆಯಿಂದ ನೂರಾರು ಪ್ರಯಾಣಿಕರು ಮುಂಜಾನೆ 3 ಕ್ಕೆ ವಿಮಾನನಿಲ್ದಾಣದ ಒಳಾಂಗಣದ ತಪಾಸಣಾ ಕೊಠಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ನಂತರ ವಿಮಾನನಿಲ್ದಾಣ ಒಳಾಂಗಣದ ಸಭಾಂಗಣದಲ್ಲಿ ಜಮಾಯಿಸಿದ್ದರು. ಹಲವರು ಕುರ್ಚಿಗಳಿಲ್ಲದೆ ಹತ್ತಾರು ತಾಸು ಕಾಯುವಂತಾಯಿತು.

ದೂರವಾಣಿಯಲ್ಲಿ ಮಾತನಾಡಿದ ಪ್ರಯಾಣಿಕ ನರೇಂದ್ರ, ‘ಹಿಂದೊಮ್ಮೆ ಕರ್ನಾಟಕ ಬಂದ್ ನಡೆದಾಗ ಒಂದು ಬಾರಿ ಪ್ರತಿಭಟನೆ ವೇಳೆ ಸಿಲುಕಿ ವಿಮಾನನಿಲ್ದಾಣಕ್ಕೆ ಸಕಾಲದಲ್ಲಿ ತಲುಪದೆ ಪ್ರಯಾಣ ರದ್ದಾಗಿತ್ತು. ಮತ್ತೆ ಈ ರೀತಿ ಆದರೆ ಕಷ್ಟ ಎಂದು ಭಾವಿಸಿ ಬೆಳಗಿನ ಜಾವ 3 ಗಂಟೆಗೇ ಬಂದು ಕುಳಿತುಕೊಂಡಿದ್ದೇನೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲ, ಗುರುವಾರ ಮಧ್ಯಾಹ್ನ 3ಕ್ಕೆ ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದೇನೆ’ ಎಂದು ಹೇಳಿದರು.

ಪುರಭವನದ ಬಳಿ ನೃತ್ಯ: ಬಂದ್ ಸಮಯದಲ್ಲಿ ಪುರಭವನದ ಬಳಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಸರಿಸಿ ಒಳಗೆ ನುಗ್ಗಿದ ವ್ಯಕ್ತಿಯೊಬ್ಬರು ಭರ್ಜರಿ ಸ್ಟೆಪ್ಸ್ ಹಾಕಿ ಸಾರ್ವಜನಿಕರನ್ನು ರಂಜಿಸಿದ ಪ್ರಸಂಗವೂ ನಡೆಯಿತು.

ಪುರಭವನದ ಬಳಿ ಎರಡು ಕೆಎಸ್‍ಆರ್‌ಪಿ ತುಕಡಿ ಹಾಗೂ ಬ್ಯಾರಿಕೇಡ್ ಹಾಕಲಾಗಿತ್ತು. ಬ್ಯಾರಿಕೇಡ್ ಒಳಗೆ ನುಗ್ಗಿದ ವ್ಯಕ್ತಿ ಬಿಸಿಲನ್ನು ಲೆಕ್ಕಿಸದೆ ನೃತ್ಯ ಮಾಡಿದರು. ಅವರನ್ನು ಅಲ್ಲಿಂದ ಕಳುಹಿಸಲು ಪೊಲೀಸರು ಮುಂದಾದಾಗ ಮುಖ್ಯಮಂತ್ರಿಗೆ ಕರೆ ಮಾಡುವುದಾಗಿ ಎಚ್ಚರಿಸಿದರು.

180 ಮಂದಿ ವಶಕ್ಕೆ: ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್‌ಗಳೂ ಸೇರಿ 180 ಮಂದಿಯನ್ನು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದು ಸಂಜೆ ಬಳಿಕ ಬಿಡುಗಡೆ ಮಾಡಿದರು.

ನಸುಕಿನ 4 ಗಂಟೆಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬುಧವಾರ ರಾತ್ರಿಯಿಂದಲೇ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಈ ಹಿಂದಿನ ಕಾವೇರಿ ಹೋರಾಟ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾದವರು ಹಾಗೂ ಕ್ರಿಮಿನಲ್‌ ಹಿನ್ನೆಲೆ ಇರುವವರನ್ನು ವಶಕ್ಕೆ ಪಡೆದಿದ್ದರು.

ಬಂದ್‌ ಬೇಡ; ಕೆಲಸ ಬೇಕು: ಬಂದ್‌ಗೆ ವಿರೋಧ ವ್ಯಕ್ತಪಡಿಸಿದ ಕನ್ನಡ ಸಂಘಟನೆಯೊಂದರ ಕಾರ್ಯಕರ್ತರು ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಕರ್ತವ್ಯನಿರತರಾಗಿದ್ದ ಚಾಲಕರು ಹಾಗೂ ಮನೆಗಳಿಂದ ಹೊರ ಬಂದಿದ್ದ ಸಾರ್ವಜನಿಕರನ್ನು ಅಭಿನಂದಿಸಿ ಗುಲಾಬಿ ಹೂಗಳನ್ನು ನೀಡುತ್ತಿದ್ದುದು ಕಂಡುಬಂತು.

ಈ ಕಾರ್ಯಕರ್ತರ ಗುಂ‍ಪು ‘ನಮಗೆ ಬಂದ್‌ ಬೇಡ, ಕೆಲಸ ಬೇಕು’ ಎಂಬ ಘೋಷಣೆ ಕೂಗುತ್ತಿದ್ದರು. ಮೆಟ್ರೊ ನಿಲ್ದಾಣಗಳ ಮುಂದೆಯೂ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು