ಮಂಗಳವಾರ, ಅಕ್ಟೋಬರ್ 27, 2020
19 °C

'ಜನಪದ ಸಾಹಿತ್ಯ ಸ್ತ್ರೀಕೇಂದ್ರಿತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಜನಪದ ಸಾಹಿತ್ಯದಲ್ಲಿ ಕೌಟುಂಬಿಕ ನೆಲೆಗಟ್ಟಿನಲ್ಲಿರುವ ಸಂಬಂಧಗಳ ಅನಾವರಣ ಮಾಡಲಾಗಿದೆ. ಈ ಸಾಹಿತ್ಯ ಮಹಿಳಾ ಸ್ಥಾನಮಾನಗಳನ್ನು ಕಟ್ಟಿಕೊಡುವ ಮೂಲಕ ಸ್ತ್ರೀ ಕೇಂದ್ರಿತವಾಗಿದೆ' ಎಂದು ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ನಂಜಯ್ಯ ಹೊಂಗನೂರು ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ 'ಜನಪದ ಸಾಹಿತ್ಯ ಮತ್ತು ಸಾಮಾಜಿಕ ಸಂವೇದನೆ' ಕುರಿತು ಆನ್‍ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಕುಟುಂಬಗಳಲ್ಲಿ ಕಾಣಸಿಗುವ ಬಂಧುತ್ವ, ಹಿರಿಮೆ, ಸಾಮರಸ್ಯ ಹಾಗೂ ಹೆಣ್ಣಿನ ಸ್ಥಾನಮಾನಗಳು ಜನಪದ ಕಥೆಗಳಲ್ಲಿ ಸೊಗಸಾಗಿ ಮೂಡಿಬರುತ್ತವೆ. ಆದರೆ, ಇಂದಿನ ಆಧುನಿಕ ಕೌಟುಂಬಿಕ ವ್ಯವಸ್ಥೆಯಲ್ಲಿ ಅಜ್ಜ-ಅಜ್ಜಿಯರಿಂದ ಆಲಿಸಿಕೊಳ್ಳಬೇಕಾದ ಜನಪದ ಕಥೆಗಳು ಮರೆಯಾಗುತ್ತಿವೆ' ಎಂದರು.

'ಜನಪದ ಸಾಹಿತ್ಯ ಹಾಗೂ ಶ್ರಮ ಸಂವೇದನೆ' ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಚೆಲುವರಾಜು,'ಶ್ರಮ ಸಂವೇದನೆಯಲ್ಲಿ ಮಾನವನ ತೊಡಗುವಿಕೆ ಇಳಿಮುಖವಾಗುತ್ತಿದೆ. ದುಡಿಯುವ ವರ್ಗಕ್ಕೂ ಜನಪದ ಸಾಹಿತ್ಯಕ್ಕೂ ಅಂತರವಿದೆ. ಅಲೆಮಾರಿ ಹಾಗೂ ತಳವರ್ಗದ ಸಮುದಾಯಗಳಿಂದ ಜನಪದ ಸಾಹಿತ್ಯದ ಶ್ರಮ ಸಂವೇದನೆ ಕಾಣಬಹುದು. ದುಡಿಯುವ ವರ್ಗ ಬೇರೆಡೆಗೆ ಕೇಂದ್ರಿತವಾದರೆ, ಬೆವರು ಹರಿಸುವವರಲ್ಲಿ ಜನಪದ ಕೇಂದ್ರಿತವಾಗಿರುತ್ತದೆ' ಎಂದರು.

ಚಿಕ್ಕಮಗಳೂರಿನ ಸರ್ಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಆರ್.ಎ.ಪುಷ್ಪಭಾರತಿ, 'ಜನಪದ ಸಾಹಿತ್ಯದಲ್ಲಿ ಜನರ ಹಸಿವು, ನೋವು, ಸಂಕಟಗಳು ಹಾಗೂ ಅಸಹಾಯಕತೆಯನ್ನು ವಿಡಂಬನೆ ರೂಪದಲ್ಲಿ ಹೊರಹಾಕಿರುವುದನ್ನು ಕಾಣಬಹುದು. ಅದರ ತೀವ್ರತೆಯನ್ನು ಪದಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಈ ರೀತಿಯ ನೋವಿನ ಸ್ಫೋಟಗಳು ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ' ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು