ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Central Lok Sabha: ಹಳಬರು– ಹೊಸಬರ ಕದನದ ‘ಕೇಂದ್ರ’

Published 18 ಏಪ್ರಿಲ್ 2024, 23:18 IST
Last Updated 18 ಏಪ್ರಿಲ್ 2024, 23:18 IST
ಅಕ್ಷರ ಗಾತ್ರ

ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧದ ಸುತ್ತ ವ್ಯಾಪಿಸಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ ಅವಧಿಗೆ ವಿಜಯಪತಾಕೆ ಹಾರಿಸುವ ತವಕದಲ್ಲಿ ಬಿಜೆಪಿ ಇದ್ದರೆ, ಗೆಲುವನ್ನು ಕಸಿದುಕೊಂಡು ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೆಣಸುತ್ತಿದೆ.

‘ಹ್ಯಾಟ್ರಿಕ್‌’ ಅವಧಿಯ ಸಂಸದ ಬಿಜೆಪಿಯ ಪಿ.ಸಿ. ಮೋಹನ್‌ ಗೆಲುವಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಹೊಸಮುಖ ಮನ್ಸೂರ್‌ ಅಲಿ ಖಾನ್‌ ಮೊದಲ ಪ್ರಯತ್ನದಲ್ಲೇ ವಿಜಯಮಾಲೆಯನ್ನು ಕಿತ್ತುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಹಳಬರು ಮತ್ತು ಹೊಸಬರ ನೇರ ಹಣಾಹಣಿಯಿಂದಾಗಿ ಬೆಂಗಳೂರು ಕೇಂದ್ರ ತುರುಸಿನ ಸ್ಪರ್ಧೆಯ ಕಣವಾಗಿದೆ.

2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ನಡೆದಿರುವ ಮೂರು ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಇಲ್ಲಿ ಗೆಲುವು ಸಾಧಿಸಿದೆ. 2009ರಲ್ಲಿ ಎಚ್‌.ಟಿ. ಸಾಂಗ್ಲಿಯಾನ ಕಾಂಗ್ರೆಸ್‌ನಿಂದ ಇಲ್ಲಿ ಕಣಕ್ಕಿಳಿದು ಸೋತಿದ್ದರು. ನಂತರದ ಎರಡೂ ಚುನಾವಣೆಗಳಲ್ಲಿ ರಿಜ್ವಾನ್‌ ಅರ್ಷದ್‌ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ‘ಗ್ಯಾರಂಟಿ’ಗಳ ಪ್ರಭಾವ ಈ ಬಾರಿ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಮನ್ಸೂರ್‌ ಅಲಿ ಖಾನ್‌ ಇದ್ದಾರೆ.

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಅವರಲ್ಲಿ ಕೆ.ಜೆ. ಜಾರ್ಜ್‌, ಜಮೀರ್‌ ಅಹಮದ್ ಖಾನ್‌ ಮತ್ತು ದಿನೇಶ್‌ ಗುಂಡೂರಾವ್‌ ಸಚಿವರಾಗಿದ್ದಾರೆ. ಎನ್‌.ಎ. ಹ್ಯಾರಿಸ್‌ ಬಿಡಿಎ ಅಧ್ಯಕ್ಷರಾಗಿದ್ದಾರೆ. ಈ ಎಲ್ಲರ ಪ್ರಭಾವ ಗೆಲುವಿನ ದಡ ಮುಟ್ಟಿಸಬಹುದು ಎಂಬುದು ಕಾಂಗ್ರೆಸ್‌ನ ನಿರೀಕ್ಷೆ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಅಲ್ಪಸಂಖ್ಯಾತ ಸಮುದಾಯದ ಏಕೈಕ ಅಭ್ಯರ್ಥಿಯಾಗಿರುವ ಮನ್ಸೂರ್‌ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಕೂಡ ಇವರ ಹೆಗಲೇರಿದೆ.

ಹಿಂದಿನ ಎಲ್ಲ ಚುನಾವಣೆಗಳಲ್ಲೂ ಪ್ರಾಬಲ್ಯ ಮೆರೆದಿರುವ ಬಿಜೆಪಿ, ಈ ಬಾರಿಯೂ ಗೆಲುವು ದಕ್ಕಿಸಿಕೊಳ್ಳಲು ಕಸರತ್ತು ನಡೆಸಿದೆ. ಮೂರು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದರೂ, ಹಿಂದಿನ ಚುನಾವಣೆಗಳಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರು ‘ಕಮಲ’ಕ್ಕೆ ಮುನ್ನಡೆ ನೀಡಬಹುದು ಎಂಬ ಆಶಾವಾದ ಬಿಜೆಪಿಯಲ್ಲಿದೆ.

ಬಹು ಧರ್ಮೀಯರು ಮತ್ತು ಬಹು ಭಾಷಿಕರು ನೆಲೆಸಿರುವ, ವ್ಯಾಪಾರ ವಹಿವಾಟು ದೊಡ್ಡ ಪ್ರಮಾಣದಲ್ಲಿ ನಡೆಯುವ ಈ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಲೇಬೇಕು ಎಂದು ಬಿಜೆಪಿ ಶತಾಯಗತಾಯ ಪ್ರಯತ್ನ ಹಾಕುತ್ತಿದೆ. 15 ವರ್ಷಗಳ ಅವಧಿಯಲ್ಲಿ ಎಲ್ಲ ಪಕ್ಷಗಳ ನಾಯಕರು, ಕಾರ್ಯಕರ್ತರ ಜತೆಗೂ ಉತ್ತಮ ಒಡನಾಟ ಇರಿಸಿಕೊಂಡಿದ್ದು ಈ ಚುನಾವಣೆಯಲ್ಲೂ ನೆರವಿಗೆ ಬರಬಹುದು ಎಂಬುದು ಮೋಹನ್‌ ಅವರ ನಿರೀಕ್ಷೆ.

ಬೆಂಗಳೂರು ಕೇಂದ್ರದಲ್ಲಿ ದಾಖಲೆಯ ನಾಲ್ಕನೇ ಅವಧಿಗೆ ಬಿಜೆಪಿಯ ನಾಗಾಲೋಟ ಮುಂದುವರಿಯುವುದೊ? ‘ಗ್ಯಾರಂಟಿ’ಗಳ ಬಲದಲ್ಲಿ ಕಾಂಗ್ರೆಸ್‌ ಚೊಚ್ಚಲ ಜಯಭೇರಿ ಬಾರಿಸುವುದೊ? ಎಂಬ ಕುತೂಹಲ ಗರಿಗೆದರಿದೆ.

ಮನ್ಸೂರ್‌ ಅಲಿ ಖಾನ್‌
ಮನ್ಸೂರ್‌ ಅಲಿ ಖಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT