ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಗೆಲುವಿನ ದಾಖಲೆ ಬರೆದ ಪಿ.ಸಿ. ಮೋಹನ್‌

Published 5 ಜೂನ್ 2024, 0:41 IST
Last Updated 5 ಜೂನ್ 2024, 0:41 IST
ಅಕ್ಷರ ಗಾತ್ರ

ಬೆಂಗಳೂರು: ಮೂವರು ಪ್ರಭಾವಿ ಸಚಿವರು ಮತ್ತು ‘ಗ್ಯಾರಂಟಿ’ ಯೋಜನೆಗಳ ಬಲದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳುವ ಕಾಂಗ್ರೆಸ್‌ ಪ್ರಯತ್ನ ವಿಫಲವಾಗಿದೆ. ಸತತ ನಾಲ್ಕನೇ ಬಾರಿ ಗೆಲುವು ದಾಖಲಿಸುವ ಮೂಲಕ ಬಿಜೆಪಿಯ ಪಿ.ಸಿ. ಮೋಹನ್‌, ದಾಖಲೆ ಬರೆದಿದ್ದಾರೆ.

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ 2009, 2014 ಮತ್ತು 2019ರ ಚುನಾವಣೆಗಳಲ್ಲಿ ಮೋಹನ್‌ ಜಯಭೇರಿ ಬಾರಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಗೆಲುವಿನ ಸಮೀಪ ಬಂದು ಮುಗ್ಗರಿಸಿದ್ದರು. ಈ ಬಾರಿಯೂ ಸತತ ಹಾವು ಏಣಿ ಆಟದ ಬಳಿಕ ಕೊನೆಯ ಸುತ್ತುಗಳಲ್ಲಿ ಮೇಲುಗೈ ಸಾಧಿಸಿ ಮೋಹನ್‌, ನಾಲ್ಕನೇ ಬಾರಿ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಆಡಳಿತದ ಶಕ್ತಿ ಕೇಂದ್ರದ ಸುತ್ತ ವ್ಯಾಪಿಸಿರುವ ಈ ಕ್ಷೇತ್ರದಲ್ಲಿ ಗೆಲುವಿಗಾಗಿ ಬೆವರು ಹರಿಸಿದ್ದ ಕಾಂಗ್ರೆಸ್‌ನ ಮನ್ಸೂರ್‌ ಅಲಿ ಖಾನ್‌, 32 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ರಾಜ್ಯದಿಂದ ಅಲ್ಪಸಂಖ್ಯಾತರೊಬ್ಬರನ್ನು ಲೋಕಸಭೆಗೆ ಕಳುಹಿಸುವ ಕಾಂಗ್ರೆಸ್‌ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ.

ಬೆಂಗಳೂರು ಕೇಂದ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರಿದ್ದರೆ, ಬಿಜೆಪಿಯ ಮೂವರು ಶಾಸಕರಿದ್ದಾರೆ. ಕಾಂಗ್ರೆಸ್‌ ಶಾಸಕರಲ್ಲಿ ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌ ಮತ್ತು ಜಮೀರ್‌ ಅಹಮ್ಮದ್ ಖಾನ್‌ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂವರೂ ಸಚಿವರ ಪ್ರಭಾವ ಮತ್ತು ‘ಗ್ಯಾರಂಟಿ’ ಯೋಜನೆಗಳ ಕಾರಣದಿಂದ ಗೆಲುವು ಸಾಧಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಮಾಡಿತ್ತು.

ಅಲ್ಪಸಂಖ್ಯಾತ ಮತದಾರರು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಎಚ್ಚರ ವಹಿಸಿದ್ದ ‘ಕೈ’ ಪಡೆ, ಕ್ಷೇತ್ರವನ್ನು ‘ಕಮಲ’ದ ತೆಕ್ಕೆಯಿಂದ ಕಿತ್ತುಕೊಳ್ಳುವ ವಿಶ್ವಾಸದಲ್ಲಿತ್ತು. ರಾಜ್ಯದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಏಕೈಕ ಕ್ಷೇತ್ರವೂ ಇದಾಗಿತ್ತು. ಇದರಿಂದಾಗಿ ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣವೂ ಜೋರಾಗಿತ್ತು. ಇಲ್ಲಿ ‘ಗ್ಯಾರಂಟಿ’ಗಳಿಗಿಂತಲೂ ಹೆಚ್ಚಾಗಿ ಧರ್ಮವೇ ನಿರ್ಣಾಯಕ ಪಾತ್ರ ವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನ ದಡ ಮುಟ್ಟಿಸಿದಂತಿದೆ.

ಮಹದೇವಪುರವೇ ಆಸರೆ:

ಸಚಿವರಾದ ಕೆ.ಜೆ. ಜಾರ್ಜ್‌ ಪ್ರತಿನಿಧಿಸುವ ಸರ್ವಜ್ಞನಗರ (74,242), ಜಮೀರ್‌ ಅಹಮ್ಮದ್ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ (42,953) ತುಸು ದೊಡ್ಡ ಮೊತ್ತದ ಮುನ್ನಡೆ ಕಾಂಗ್ರೆಸ್‌ಗೆ ದೊರಕಿದೆ. ಎನ್‌.ಎ. ಹ್ಯಾರಿಸ್‌ ಪ್ರತಿನಿಧಿಸುವ ಶಾಂತಿನಗರ (20,338) ಮತ್ತು ರಿಜ್ವಾನ್‌ ಅರ್ಷದ್‌ ಪ್ರತಿನಿಧಿಸುವ ಶಿವಾಜಿನಗರದಲ್ಲೂ (27,510) ಕಾಂಗ್ರೆಸ್‌ಗೆ ಅಲ್ಪ ಪ್ರಮಾಣದ ಮುನ್ನಡೆ ದೊರಕಿದೆ. ಆದರೆ, ಸಚಿವ ದಿನೇಶ್ ಗುಂಡೂರಾವ್‌ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ 23 ಸಾವಿರ ಮತಗಳಷ್ಟು ಮುನ್ನಡೆ ಪಡೆದಿದೆ.

ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಪೈಕಿ ಎಸ್‌. ರಘು ಪ್ರತಿನಿಧಿಸುವ ಸಿ.ವಿ. ರಾಮನ್‌ ನಗರ (20,114), ಎಸ್‌. ಸುರೇಶ್‌ ಕುಮಾರ್‌ ಪ್ರತಿನಿಧಿಸುವ ರಾಜಾಜಿನಗರದಲ್ಲಿ (39,429) ಬಿಜೆಪಿ ಅಭ್ಯರ್ಥಿಗೆ ಅಲ್ಪ ಪ್ರಮಾಣದ ಮುನ್ನಡೆ ದೊರಕಿದ್ದರೆ, ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರದಲ್ಲಿನ ದೊರಕಿರುವ 1.14 ಲಕ್ಷ ಮತಗಳ ಭಾರಿ ಮುನ್ನಡೆಯೇ ಮೋಹನ್‌ ಅವರನ್ನು ಗೆಲುವಿನ ದಡ ತಲುಪಿಸಿದೆ. ಉತ್ತರ ಭಾರತೀಯರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಬಿಜೆಪಿ ಗೆಲುವಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT