ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗುತ್ತಿದೆ ಅಂತರ್ಜಲ ಮಟ್ಟ!

ಬೆಂಗಳೂರಿಗೆ 2021ರ ವೇಳೆಗೆ 217 ದಶಕೋಟಿ ಲೀಟರ್ ನೀರಿನ ಕೊರತೆ
Last Updated 13 ನವೆಂಬರ್ 2019, 23:38 IST
ಅಕ್ಷರ ಗಾತ್ರ

ನವದೆಹಲಿ: 2021ರ ವೇಳೆಗೆ ಬೆಂಗಳೂರು ನಗರದ ಅಗತ್ಯ ನೀರಿನ ಒಟ್ಟು ಬೇಡಿಕೆಯಲ್ಲಿ ಅಂದಾಜು 217 ದಶಲಕ್ಷ ಘನ ಮೀಟರ್‌ನಷ್ಟು (217 ದಶಕೋಟಿ ಲೀಟರ್) ಕೊರತೆ ಉಂಟಾಗಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ತಜ್ಞರ ಸಮಿತಿಯ ವರದಿ ತಿಳಿಸಿದೆ.

2041ರ ವೇಳೆಗೆ ಕೊರತೆಯ ಪ್ರಮಾಣವು 518 ದಶಲಕ್ಷ ಘನ ಮೀಟರ್ (518 ದಶಕೋಟಿ ಲೀಟರ್)ಗೆ ಹೆಚ್ಚಲಿದೆ ಎಂಬ ಆತಂಕಕಾರಿ ವಿಷಯವನ್ನೂ ಈ ವರದಿ ಒಳಗೊಂಡಿದೆ.

ನೀತಿ ಆಯೋಗವು ಕಳೆದ ವರ್ಷ (2018ರಲ್ಲಿ) ಬಿಡುಗಡೆ ಮಾಡಿರುವ ಸಂಯೋಜಿತ ಜಲ ನಿರ್ವಹಣಾ ಸೂಚ್ಯಂಕದ ಪ್ರಕಾರ, ದೇಶದ 24 ನಗರಗಳಲ್ಲಿ ಅಂತರ್ಜಲ ಮಟ್ಟವು ಭಾರಿ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆ ಎಂಬ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಒಳಗೊಂಡಂತೆ ಈ ಎಲ್ಲ ನಗರಗಳ ಅಂತರ್ಜಲದ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಹಸಿರು ಪೀಠವು ತಜ್ಞರ ಸಮಿತಿಗೆ ಸೂಚಿಸಿತ್ತು.

ಶೇ 100ಕ್ಕಿಂತ ಅಧಿಕ ಪ್ರಮಾಣದಲ್ಲಿ ಅಂತರ್ಜಲ ಬಳಸುತ್ತಿರುವ ದೇಶದ ಪ್ರಮುಖ 12 ನಗರಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ತಜ್ಞರ ವರದಿಯ ಪ್ರಕಾರ ಉದ್ಯಾನ ನಗರಿಯ ಅಂತರ್ಜಲ ಬಳಕೆಯ ಪ್ರಮಾಣ ಶೇ 141.

ಅದೃಷ್ಟವಶಾತ್‌ ಈ ಪಟ್ಟಿಯಲ್ಲಿ ರಾಜ್ಯದ ರಾಜಧಾನಿಯು ಕೊನೆಯ ಸ್ಥಾನದಲ್ಲಿದೆ. ಪಂಜಾಬ್‌ನ ಜಲಂಧರ್‌ ನಗರದ ಸದ್ಯದ ಅಂತರ್ಜಲ ಅವಲಂಬನೆಯ ಪ್ರಮಾಣ ಶೇ 472.

ಈ ನಗರಗಳ ಅಂತರ್ಜಲದ ಅವಲಂಬನೆಯ ಪ್ರಮಾಣ ಹೆಚ್ಚುತ್ತ ಸಾಗಿದಂತೆ ಬಳಕೆಯೂ ಹೆಚ್ಚುವುದು ಒಂದೆಡೆಯಾದರೆ, ಲಭ್ಯತೆಯ ಕೊರತೆಯೂ ಎದುರಾಗಲಿದೆ. ಅಂತರ್ಜಲದ ಅಧಿಕ ಪ್ರಮಾಣದ ಬಳಕೆಯ ಪರಿಣಾಮವಾಗಿ 2021ರ ವೇಳೆಗೆ ಬೆಂಗಳೂರಿನ ಜನತೆ ಶೇ 94ರಷ್ಟು ಮಳೆಯ ನೀರನ್ನೇ ಆಶ್ರಯಿಸುವ ಅನಿವಾರ್ಯತೆ ಎದುರಾಗಲಿದೆ ಎಂಬ ಅಂಶ ವರದಿಯಲ್ಲಿದೆ.

ನೀತಿ ಆಯೋಗದ ಸೂಚ್ಯಂಕದ ಪ್ರಕಾರ ಬೆಂಗಳೂರಿನ ಜನರ ಅಂತರ್ಜಲದ ಬಳಕೆಯ ಪ್ರಮಾಣವು 146 ದಶಲಕ್ಷ ಘನ ಮೀಟರ್‌ (146 ದಶಕೋಟಿ ಲೀಟರ್‌) ಆಗಿದೆ.

ಈ ಅವಧಿಯಿಂದ 2041ರವರೆಗೆ ಬೆಂಗಳೂರಿನ ಅಂತರ್ಜಲದ ಪ್ರಮಾಣ 36 ದಶಲಕ್ಷ ಘನ ಮೀಟರ್‌ (36 ದಶಕೋಟಿ ಲೀಟರ್‌)ಗೆ ತಗ್ಗಲಿದೆ. ಹಾಗಾಗಿ ಅಂತರ್ಜಲದ ಬಳಕೆ ಮತ್ತು ಅವಲಂಬನೆಯ ಪ್ರಮಾಣವನ್ನು ಈಗಿನಿಂದಲೇ ಕಡಿತಗೊಳಿಸುವ ಅಗತ್ಯವಿದೆ ಎಂಬುದು ತಜ್ಞರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT