ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು: ಅತಿ ವೇಗದ ರೈಲು ಸಾಗಲು ಹಳಿ ಸಜ್ಜು

ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಲಿದೆ ಹೈಸ್ಪೀಡ್ ಟ್ರೈನ್
Last Updated 31 ಅಕ್ಟೋಬರ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು–ಬೆಂಗಳೂರು ನಡುವೆ ಅತಿ ವೇಗದಲ್ಲಿ ರೈಲುಗಳು ಸಂಚರಿಸಲು ವೇದಿಕೆ ಸಜ್ಜಾಗಿದೆ. ಹಳಿಗಳ ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ರೈಲ್ವೆ ಸಚಿವ ಪೀಯೂಷ್ ಗೋಯಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

‘ಹಳಿಯ ನಿರ್ವಹಣಾ ಕಾರ್ಯ ಪೂರ್ಣಗೊಂಡಿದ್ದು, ಅತಿ ವೇಗದಲ್ಲಿ ರೈಲು ಚಲಾಯಿಸಲು ಹಳಿಯು ಸಮರ್ಥವಾಗಿದೆ. ಹಳಿಯ ಮೇಲೆ ಸಾಗಿದ ರೈಲಿನಲ್ಲಿ ನೀರು ತುಂಬಿದ ಲೋಟವನ್ನು ಇಡಲಾಗಿತ್ತು. ಅತಿ ವೇಗದಲ್ಲಿ ರೈಲು ಸಾಗಿದರೂ ಲೋಟದಿಂದ ಒಂದೇ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಅಂದರೆ, ಹಳಿಯು ಅಷ್ಟು ಸಮರ್ಥವಾಗಿದೆ ಮತ್ತು ರೈಲು ಸರಾಗವಾಗಿ ಚಲಿಸಲು ಅನುಕೂಲಕರವಾಗಿದೆ’ ಎಂದು ಟ್ವೀಟ್‌ ಮಾಡಿರುವ ಗೋಯಲ್, ಇದರ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

‘ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ರೈಲುಗಳನ್ನು ಚಲಾಯಿಸಲು ಈ ಹಳಿಗಳು ಸಮರ್ಥವಾಗಿವೆ. ₹75 ಕೋಟಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 130 ಕಿ.ಮೀ. ಉದ್ದದ ಮಾರ್ಗ ಇದು. ಒಂದು ವರ್ಷದಿಂದ ಪರೀಕ್ಷೆ ಮತ್ತು ನಿರ್ವಹಣಾ ಕಾರ್ಯ ನಡೆಯುತ್ತಿದೆ. ಇದರಲ್ಲಿ 40 ಕಿ.ಮೀ. ಉದ್ದದ ಹಳಿಯನ್ನು ಸಂಪೂರ್ಣ ನವೀಕರಣಗೊಳಿಸಲಾಗಿದೆ. 0.7 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಕಲ್ಲುಗಳನ್ನು ಅಳವಡಿಸಲಾಗಿದೆ. 40 ಕಿ.ಮೀ. ಉದ್ದದವರೆಗೆ ರೈಲಿನ ಹಳಿಯ ಬದಿಯಲ್ಲಿನ ಕಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಹನ್ನೆರಡು ನಿಲ್ದಾಣಗಳ ಬಳಿಯ ಹಳಿಗಳ ನವೀಕರಣ ಕಾರ್ಯವನ್ನೂ ಪೂರ್ಣಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಸದ್ಯ ವೇಗದಲ್ಲಿ ಸಾಗಬಲ್ಲ ನಾಲ್ಕು ರೈಲುಗಳು ಈ ಹಳಿಯಲ್ಲಿ ಸಂಚರಿಸುತ್ತಿವೆ. ಹೊಸ ರೈಲುಗಳು ಪರಿಚಯವಾದ ನಂತರ ಅನುಮತಿ ನೀಡಲಾದ ಗರಿಷ್ಠ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ನವೆಂಬರ್‌ ಅಂತ್ಯದ ವೇಳೆಗೆ ಹೊಸ ರೈಲುಗಳ ಸೇವೆ ಆರಂಭವಾಗುವ ಸಾಧ್ಯತೆ ಇದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT