ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಗಸ್ತು ಬಲಪಡಿಸಲು, ಸುರಕ್ಷತೆ ಹೆಚ್ಚಿಸಲು ‘ಇ–ಬೀಟ್’ ಶಿಸ್ತು

ನಗರದ ಸುರಕ್ಷತಾ ವ್ಯವಸ್ಥೆಗೆ ಬಲ ತುಂಬಿದ ‘ಸುಬಾಹು’ l ಜಿಪಿಎಸ್, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಕೆ
Last Updated 12 ಸೆಪ್ಟೆಂಬರ್ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ತಡೆಯುವ ಉದ್ದೇಶದಿಂದ ನಿಗದಿಪಡಿಸುವ ಸ್ಥಳಗಳಲ್ಲಿ ಗಸ್ತು ತಿರುಗದೇ ನಿರ್ಲಕ್ಷ್ಯ ವಹಿಸುವ ಪೊಲೀಸರ ವರ್ತನೆಗೆ ಲಗಾಮು ಹಾಕಲು ಹಾಗೂ ಸಾರ್ವಜನಿಕರ ಸುರಕ್ಷತೆ ಹೆಚ್ಚಿಸಲು ನಗರದಲ್ಲಿ ‘ಇ–ಬೀಟ್’ ವ್ಯವಸ್ಥೆ ರೂಪಿಸಲಾಗಿದೆ. ಗಸ್ತು ಕಾರ್ಯವನ್ನು ಪೊಲೀಸ್‌ ಸಿಬ್ಬಂದಿ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಲು ಈ ವ್ಯವಸ್ಥೆ ನೆರವಾಗುತ್ತಿದೆ.

‘ಠಾಣೆ ವತಿಯಿಂದಲೇ ನಿಗದಿಪಡಿಸುವ ‘ಗಸ್ತು ಸ್ಥಳ’ಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಗಸ್ತು ಪುಸ್ತಕವಿದ್ದರೂ, 15 ದಿನ ಅಥವಾ ತಿಂಗಳಿಗೊಮ್ಮೆ ಬಂದು ಸಹಿ ಮಾಡಿ ಹೋಗುತ್ತಾರೆ. ಇದರಿಂದಾಗಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ’ ಎಂಬ ಸಾರ್ವಜನಿಕರ ಆರೋಪದಿಂದ ಮುಕ್ತರಾಗಲು ಬೆಂಗಳೂರು ಪೊಲೀಸ್ ಕಮಿಷನರೇಟ್, ‘ಇ–ಬೀಟ್’ ಜಾರಿಗೆ ತಂದಿದೆ. ಇದಕ್ಕೆ ‘ಸುಬಾಹು ಇ–ಬೀಟ್’ ಎಂದು ಹೆಸರಿಸಲಾಗಿದೆ.

ನಗರದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ ಹಾಗೂ ವೈಟ್‌ಫೀಲ್ಡ್ ವಿಭಾಗಗಳಲ್ಲಿ ತಲಾ ಒಂದೊಂದು ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ವ್ಯವಸ್ಥೆ ಯಶಸ್ಸು ಕಂಡಿದೆ. ಇದೇ ಕಾರಣಕ್ಕೆ ಉತ್ತರ ವಿಭಾಗದಲ್ಲಿ ‘ಇ–ಬೀಟ್’ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿದ್ದು, ಸಾರ್ವಜನಿಕರೂ ಈ ವ್ಯವಸ್ಥೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊಸ ತಂತ್ರಜ್ಞಾನ ಹಾಗೂ ಆ್ಯಪ್ ಆಧರಿತ ವಾದ ‘ಇ–ಬೀಟ್’, ಗಸ್ತು ತಿರುಗುವ ಪ್ರತಿಯೊಬ್ಬ ಸಿಬ್ಬಂದಿಯ ಕೆಲಸದ ವೈಖರಿಯನ್ನು ದಾಖಲಿಸಿಟ್ಟುಕೊಳ್ಳುತ್ತದೆ. ನಿಗದಿತ ಗಸ್ತು ಸ್ಥಳಕ್ಕೆ ಸಿಬ್ಬಂದಿ ಹೋಗಿದ್ದರೆ ? ಎಷ್ಟು ಗಂಟೆಗೆ ಹೋಗಿದ್ದರು ? ಎಷ್ಟು ಸಮಯ ಸ್ಥಳದಲ್ಲಿದ್ದರು ? ಯಾರನ್ನು ಮಾತನಾಡಿಸಿದರು ? ಫೋಟೊ ಏನಾದರೂ ಅಪ್‌ಲೋಡ್ ಮಾಡಿದ್ದಾರೆಯೇ? ಹೀಗೆ... ನಾನಾ ಪ್ರಶ್ನೆಗಳಿಗೆ ‘ಇ–ಬೀಟ್’ ಉತ್ತರ ನೀಡುತ್ತದೆ.

ನಿಗದಿತ ಗಸ್ತು ಸ್ಥಳಕ್ಕೆ ಹೋಗದೆ, ಹೋಗಿರು ವುದಾಗಿ ಸುಳ್ಳು ಹೇಳುವ ಸಿಬ್ಬಂದಿಯನ್ನು ಪತ್ತೆ ಹಚ್ಚಲು ಇ–ಬೀಟ್ ನೆರವಾಗಿದೆ. ವ್ಯವಸ್ಥೆಯಿಂದ ಸಿಗುವ ಪುರಾವೆಗಳನ್ನು ಆಧರಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಪುರಾವೆ ಲಭ್ಯವಾಗುವ ಭಯದಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ತಮಗೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಗಸ್ತು ಕಾರ್ಯವನ್ನು ಚಾಚೂತಪ್ಪದೇ ನಡೆಸುತ್ತಿದ್ದಾರೆ.

‘ಗಸ್ತು ಸ್ಥಳವನ್ನು ಗುರುತಿಸಿ, ಅಲ್ಲಿ ಪುಸ್ತಕ ಇರಿಸುವ ವ್ಯವಸ್ಥೆ ಇತ್ತು. ಗಸ್ತು ತಿರುಗುವ ಸಿಬ್ಬಂದಿ ಪುಸ್ತಕದಲ್ಲಿ ಸಹಿ ಮಾಡಿ ಬರಬೇಕಿತ್ತು. ಮನಸ್ಸಿಗೆ ಬಂದಾಗಷ್ಟೇ ಬಹುತೇಕ ಸಿಬ್ಬಂದಿ ಸ್ಥಳಕ್ಕೆ ಹೋಗಿ ಬರುತ್ತಿದ್ದರು. ಕೆಲವರು ತಿಂಗಳಿಗೊಮ್ಮೆ ಸಹಿ ಮಾಡುವುದಕ್ಕಷ್ಟೇ ಸ್ಥಳಕ್ಕೆ ಹೋಗುತ್ತಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಯಾವುದೇ ಪುರಾವೆ ಸಿಗುತ್ತಿರಲಿಲ್ಲ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.

‘ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಒಳಗೊಂಡ ‘ಇ–ಬೀಟ್’ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು, ಪ್ರತಿಯೊಬ್ಬ ಸಿಬ್ಬಂದಿಯ ಗಸ್ತಿನ ಬಗ್ಗೆ ಖಚಿತ ಮಾಹಿತಿ ನೀಡಲಿದೆ. ಯಾರಾದರೂ ಸುಳ್ಳು ಹೇಳಿದರೆ, ಅಂಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಪುರಾವೆ ಒದಗಿಸಲಿದೆ. ನಮ್ಮ ವಿಭಾಗದಲ್ಲಿ 2,000 ಗಸ್ತು ಸ್ಥಳಗಳನ್ನು ಗುರುತಿಸಲಾಗಿದೆ. ಠಾಣೆವಾರು ಗಸ್ತು ತಿರುಗಿದ ಸಿಬ್ಬಂದಿಗಳ ಮಾಹಿತಿ ಕ್ಷಣ ಮಾತ್ರದಲ್ಲಿ ನನಗೆ ಬರುತ್ತದೆ’ ಎಂದೂ ತಿಳಿಸಿದರು.

‘ಗಸ್ತು ತಿರುಗದೇ ಸಿಕ್ಕಿಬೀಳುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಅವರ ಉತ್ತರ ಸಮರ್ಪಕವಾಗಿರದಿದ್ದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

‘ಕ್ಯೂ ಆರ್‌’ ಕೋಡ್‌ನಿಂದ ಆರಂಭ: ಗಸ್ತು ಸ್ಥಳದಲ್ಲಿರುವ ಪುಸ್ತಕದಲ್ಲಿ ಸಹಿ ಮಾಡಿ ಬರುವ ಹಳೇ ವ್ಯವಸ್ಥೆಯನ್ನು ಬದಲಾಯಿಸಲು ಪೊಲೀಸ್ ಇಲಾಖೆಯಲ್ಲಿ ಚಿಂತನೆ ಆರಂಭವಾಗಿತ್ತು. ಇದರ ಫಲವಾಗಿ ‘ಸುಬಾಹು ಇ–ಬೀಟ್’ ಹುಟ್ಟಿಕೊಂಡಿತು.

‘ಸುಬಾಹು ಇ–ಬೀಟ್’ ಆ್ಯಪ್ ಸಿದ್ಧಪಡಿಸಿ, ಕೆಲ ಠಾಣೆ ವ್ಯಾಪ್ತಿಯ ಸಿಬ್ಬಂದಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಸಲಾಗಿತ್ತು. ಗಸ್ತು ಸ್ಥಳಕ್ಕೆ ಹೋಗುತ್ತಿದ್ದ ಸಿಬ್ಬಂದಿ, ಅಲ್ಲಿರುತ್ತಿದ್ದ ‘ಕ್ಯೂಆರ್‌’ ಕೋಡ್‌ ಅನ್ನು ಆ್ಯಪ್‌ನಲ್ಲಿ ಸ್ಕ್ಯಾನ್ ಮಾಡುತ್ತಿದ್ದರು. ಸ್ಥಳಕ್ಕೆ ಹೋದ ಮಾಹಿತಿ, ಠಾಣಾಧಿಕಾರಿ ಮೊಬೈಲ್‌ಗೆ ಬರುತ್ತಿತ್ತು. ಇದರಲ್ಲೂ ಕೆಲ ನ್ಯೂನ್ಯತೆ ಗಳು ಕಂಡುಬಂದವು. ಹೀಗಾಗಿ, ಕೆಲ ಸುಧಾರಣೆ ಮಾಡಿ ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಇ–ಬೀಟ್’ ವ್ಯವಸ್ಥೆ ರೂಪಿಸಲಾಗಿದೆ. ಇದು, ಗಸ್ತಿನ ಮೇಲ್ವಿಚಾರಣೆಯ ಶೇ 100ರಷ್ಟು ಫಲಿತಾಂಶ ನೀಡುತ್ತಿದೆ‘.

‘ಬೆಂಗಳೂರಿನ ವಿಜಯನಗರ ಠಾಣೆಯಲ್ಲಿ ಮೊದಲ ಬಾರಿಗೆ ‘ಸುಬಾಹು ಇ–ಬೀಟ್’ ಪರಿಚಯಿಸಲಾಗಿತ್ತು. ಅದಾದ ನಂತರ, ನಗರದ ಪ್ರತಿ ವಿಭಾಗದ ಒಂದೊಂದು ಠಾಣೆಯಲ್ಲಿ ‘ಇ–ಬೀಟ್’ ಶುರುವಾಯಿತು. ಚಾಮರಾಜನಗರ, ತುಮಕೂರು, ದಾವಣಗೆರೆ, ಕೊಡಗು ಜಿಲ್ಲೆಯಲ್ಲೂ ಪ್ರಾಯೋಗಿಕ ವ್ಯವಸ್ಥೆ ಜಾರಿಯಾಯಿತು. ಅಲ್ಲಿಯೂ ಉತ್ತಮ ಸ್ಪಂದನೆ ಸಿಕ್ಕಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.

‘ನಮ್ಮ ಸಿಬ್ಬಂದಿ ಕೆಲಸದ ಮೇಲೆ ಕಣ್ಣಿಡಲು ಹಾಗೂ ಗಸ್ತಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ‘ಇ–ಬೀಟ್’ ಸಹಕಾರಿ. ಪ್ರತಿಯೊಬ್ಬ ಸಿಬ್ಬಂದಿಗೂ ಇಂತಿಷ್ಟು ಗಸ್ತು ಸ್ಥಳಗಳನ್ನು ನಿಗದಿಪಡಿಸಲಾಗುವುದು. ಅವರು ಸ್ಥಳಕ್ಕೆ ಹೋಗಿ ಬಂದ ಮಾಹಿತಿ ದಾಖಲಾಗುತ್ತದೆ. ಫೋಟೊ ಅಪ್‌ಲೋಡ್‌ ಮಾಡಲು ಸಹ ಅವಕಾಶವಿದೆ’ ಎಂದು ತಿಳಿಸಿದರು.

ಅಪರಾಧ ತಡೆಗೆ ಅಸ್ತ್ರ: ‘ನಿತ್ಯವೂ ಪೊಲೀಸರು ಗಸ್ತು ತಿರುಗಿದರೆ, ಅಪರಾಧ ಕೃತ್ಯ ಎಸಗುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗುತ್ತದೆ. ಪೊಲೀಸರು ಬಂದು ಹೋಗುತ್ತಾರೆಂಬುದು ತಿಳಿದರೆ, ಬಹುತೇಕರು ಕೃತ್ಯ ಎಸಗುವುದರಿಂದ ಹಿಂದೆ ಸರಿಯುತ್ತಾರೆ’ ಎಂದೂ ಅಧಿಕಾರಿ ಹೇಳಿದರು.

‘ಕಳ್ಳತನ ತಡೆಗೂ ಆ್ಯಪ್ ಬಳಕೆ’

‘ನಗರದ ಮನೆಗಳಲ್ಲಿ ನಡೆಯುವ ಕಳ್ಳತನ ತಡೆಗೂ ‘ಸುಬಾಹು ಸಿಟಿಜನ್’ ಆ್ಯಪ್ ಬಳಸಿಕೊಳ್ಳಲು ಚಿಂತನೆ ನಡೆದಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಸದ್ಯ ಪೊಲೀಸರಷ್ಟೇ ಆ್ಯಪ್‌ ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ‘ಸುಬಾಹು ಸಿಟಿಜನ್’ ಆ್ಯಪ್ ಬಳಸಲಾಗುವುದು. ಸಾರ್ವಜನಿಕರು, ಯಾವುದಾದರೂ ಕೆಲಸಕ್ಕಾಗಿ ಮನೆ ಬಿಟ್ಟು ಹೋಗುವಾಗ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಬಹುದು. ಅಂಥ ಮನೆಗಳ ಬಳಿ ಹೋಗಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಇದರಿಂದ ಕಳ್ಳತನ ತಡೆಯಬಹುದು’ ಎಂದೂ ತಿಳಿಸಿದರು.

‘ಪೊಲೀಸರ ಗಸ್ತಿನ ಮೇಲೆ ಮಾತ್ರ ಕಣ್ಣಿಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ವಿಸ್ತರಿಸಿ, ಮತ್ತಷ್ಟು ಆಯ್ಕೆಗಳನ್ನು ಸೇರಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ನಡೆದಿದೆ’ ಎಂದು ಅಧಿಕಾರಿ ವಿವರಿಸಿದರು.

‘10 ನಿಮಿಷ ಮಾತುಕತೆ ಕಡ್ಡಾಯ’

‘ವೃದ್ಧರು, ಒಂಟಿ ಮಹಿಳೆಯರು ಹಾಗೂ ಅಸುರಕ್ಷತೆ ಭಾವ ಕಾಡುವ ವ್ಯಕ್ತಿಗಳ ಬಗ್ಗೆ ಠಾಣೆವಾರು ನೋಂದಣಿ ಆರಂಭಿಸಲಾಗಿದೆ. ಅಂಥವರ ಮನೆಗಳ ಜಿಪಿಎಸ್ ಟ್ರ್ಯಾಕಿಂಗ್‌ ಅನ್ನು ‘ಇ–ಬೀಟ್’ ವ್ಯವಸ್ಥೆಗೆ ಅಳವಡಿಸಲಾಗುವುದು’ ಎಂದು ಬೆಂಗಳೂರು ಪೊಲೀಸ್ ಕಮಾಂಡೊ ಕೇಂದ್ರದ ಡಿಸಿಪಿ ಇಶಾ ಪಂತ್ ಹೇಳಿದರು. ‘ಪ್ರತಿಯೊಂದು ಜಿಪಿಎಸ್ ಸ್ಥಳಗಳಿಗೆ ಸಿಬ್ಬಂದಿ ಹೋಗಿ ಬರಬೇಕು. ಸ್ಥಳದಲ್ಲಿದ್ದವರ ಜೊತೆ 10 ನಿಮಿಷ ಕಡ್ಡಾಯವಾಗಿ ಮಾತನಾಡಿ ಸಮಸ್ಯೆ ಆಲಿಸಬೇಕು. ಆ ರೀತಿ ಮಾಡಿದರೆ ಮಾತ್ರ ಗಸ್ತು ಹೋಗಿದ್ದು ಖಚಿತವಾಗುತ್ತದೆ. ಇಲ್ಲದಿದ್ದರೆ, ಗಸ್ತು ಹೋಗಿಲ್ಲವೆಂದು ನಮೂದಾಗುತ್ತದೆ’ ಎಂದೂ ತಿಳಿಸಿದರು.

‘ನಿತ್ಯವೂ ಪೊಲೀಸರನ್ನು ನೋಡುತ್ತಿದ್ದೇವೆ’

‘ಮನೆ ಬಳಿ ಗಸ್ತು ಸ್ಥಳವಿದ್ದರೂ ಪೊಲೀಸರು ಬರುತ್ತಿರಲಿಲ್ಲ. ‘ಇ–ಬೀಟ್’ ಬಂದಾಗಿನಿಂದ ಪೊಲೀಸರು ತಪ್ಪದೇ ಬಂದು ಹೋಗುತ್ತಿದ್ದಾರೆ. ಅವರನ್ನು ನಿತ್ಯವೂ ನೋಡುತ್ತಿದ್ದು, ಏನಾದರೂ ಸಮಸ್ಯೆ ಇದ್ದರೆ ದಾಖಲಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಮಲ್ಲೇಶ್ವರದ ನಿವಾಸಿ ರಾಮಚಂದ್ರ ಹೇಳಿದರು.

ಜಾಲಹಳ್ಳಿ ನಿವಾಸಿ ಎಸ್. ವೀರೇಶ್, ‘ನಮ್ಮದು ಆಭರಣ ಮಳಿಗೆ ಇದ್ದು, ಸಮೀಪದಲ್ಲೇ ಗಸ್ತು ಸ್ಥಳ ನಿಗದಿಪಡಿಸಲಾಗಿದೆ. ಈ ಹಿಂದೆ 15 ದಿನಕ್ಕೊಮ್ಮೆ ಸಿಬ್ಬಂದಿ ಸ್ಥಳಕ್ಕೆ ಬಂದು ಹೋಗುತ್ತಿದ್ದರು. ಇದನ್ನು ಪ್ರಶ್ನಿಸಿದರೆ, ನಿತ್ಯವೂ ಬಂದು ಹೋಗುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದರು. ಇದೀಗ ‘ಇ–ಬೀಟ್’ ಬಂದಿದೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ, ಪುರಾವೆ ಸಮೇತ ಸಿಬ್ಬಂದಿ ಸಿಕ್ಕಿಬೀಳುತ್ತಿದ್ದಾರೆ’ ಎಂದರು.


ನಗರದ ಠಾಣೆಗಳ ವಿವರ

166: ನಗರದಲ್ಲಿರುವ ಒಟ್ಟು ಠಾಣೆಗಳು

7: ಒಟ್ಟು ವಿಭಾಗಗಳು

111: ಕಾನೂನು ಮತ್ತು ಸುವ್ಯವಸ್ಥೆ

44: ಸಂಚಾರ ಠಾಣೆಗಳು

8: ಸೆನ್‌ ಠಾಣೆಗಳು

1: ಸೈಬರ್ ಮುಖ್ಯ ಠಾಣೆ

2: ಮಹಿಳಾ ಠಾಣೆಗಳು


ಕಾನೂನು ಸುವ್ಯವಸ್ಥೆ ಕಾಪಾಡಿ ಅಪರಾಧಗಳನ್ನು ನಿಯಂತ್ರಿಸಲು ‘ಇ–ಬೀಟ್’ ಸಹಕಾರಿ. ನಗರದ ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ವಿಸ್ತರಿಸಲು ಚಿಂತನೆ ನಡೆದಿದೆ
- ಕಮಲ್ ಪಂತ್, ಬೆಂಗಳೂರು ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT