ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಉತ್ತಮ ದಾಂಪತ್ಯಕ್ಕಾಗಿ ಗುಂಡುಗಳನ್ನು ಮಣ್ಣಲ್ಲಿ ಹೂತಿಟ್ಟ ಮಹಿಳೆ: ನಂತರ ಫಜೀತಿ

Last Updated 23 ಡಿಸೆಂಬರ್ 2021, 4:19 IST
ಅಕ್ಷರ ಗಾತ್ರ

ಬೆಂಗಳೂರು:ಮನೆಯಲ್ಲಿ ಜೀವಂತ ಗುಂಡುಗಳು ಇರುವುದರಿಂದಲೇ ಮಗನ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತಿದೆ ಎಂದು ಭಾವಿಸಿ, ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್‌ವೊಬ್ಬರ ಪತ್ನಿ, ಅವುಗಳನ್ನು ಜಕ್ಕೂರು ವಾಯುನೆಲೆ ಬಳಿಯ ಹೋಟೆಲ್‌ವೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ಹುದುಗಿಸಿಟ್ಟಿದ್ದಾರೆ.

‘ಇದೇ 17ರಂದುಹೋಟೆಲ್‌ನ ಸ್ವಚ್ಛತಾ ಸಿಬ್ಬಂದಿ ಕೆಲಸ ಮಾಡುವಾಗ ಮದ್ದು ಗುಂಡುಗಳು ಪತ್ತೆಯಾಗಿದ್ದವು. ಈ ಸಂಬಂಧ ಹೋಟೆಲ್‌ ಮಾಲೀಕ ಶ್ರೀನಿವಾಸ್‌ ಎಂಬುವರು ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವು ಸಿಂಗಲ್‌ ಬ್ಯಾರಲ್‌ ಗನ್‌ಗೆ ಬಳಸುವ ಮದ್ದುಗುಂಡುಗಳು ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳದವರು ಸ್ಥಳಕ್ಕೆ ಹೋಗಿ ತಪಾಸಣೆ ನಡೆಸಿದಾಗ ಹತ್ತಿರದಲ್ಲೇ ಮತ್ತೊಂದು ಗುಂಡು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದ್ದರು. ಹೋಟೆಲ್‌ ಸಿಬ್ಬಂದಿಯನ್ನೂ ವಿಚಾರಿಸಿದ್ದರು. ಮಹಿಳೆಯೊಬ್ಬರು ಸ್ಥಳಕ್ಕೆ ಭೇಟಿ ನೀಡಿರುವ ಮಾಹಿತಿ ಸಿಕ್ಕಿತ್ತು. ಕಾರಿನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅವರು ಯಲಹಂಕದಲ್ಲಿ ವಾಸಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಮನೆಗೆ ಬೀಗ ಹಾಕಲಾಗಿತ್ತು’ ಎಂದು ವಿವರಿಸಿದ್ದಾರೆ.

‘ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ ಮಹಿಳೆಯು ಕೊಡಿಗೆಹಳ್ಳಿಯಲ್ಲಿ ಇರುವ ವಿಷಯ ಗೊತ್ತಾಗಿತ್ತು. ಅವರನ್ನು ವಿಚಾರಿಸಿದಾಗ ಗುಂಡುಗಳನ್ನು ಹೂತಿಟ್ಟಿದ್ದನ್ನು ಒಪ್ಪಿಕೊಂಡಿದ್ದರು’ ಎಂದಿದ್ದಾರೆ.

‘ಮಹಿಳೆಯ ಪತಿ ಸೇನೆಯಿಂದ ನಿವೃತ್ತರಾದ ನಂತರ ಮದ್ದುಗುಂಡುಗಳ ಸಮೇತ ರೈಫಲ್‌ ಖರೀದಿಸಿದ್ದರು. ಹೋದ ವರ್ಷ ವ್ಯಕ್ತಿಯೊಬ್ಬರಿಗೆ ರೈಫಲ್‌ ಮಾರಿದ್ದರು. ಆದರೆ ಗುಂಡುಗಳು ಮನೆಯಲ್ಲೇ ಇದ್ದವು. ಅವುಗಳನ್ನು ಮನೆಯಿಂದ ಹೊರಹಾಕಿದರೆ ಮಗನ ಸಂಸಾರ ಸರಿಹೋಗಬಹುದೆಂದು ಭಾವಿಸಿ ಮಹಿಳೆಯು ಅವುಗಳನ್ನು ಹೋಟೆಲ್‌ಗೆ ತಂದು ನಿಲುಗಡೆ ಪ್ರದೇಶದಲ್ಲಿ ಹೂತಿಟ್ಟಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT