ಶನಿವಾರ, ನವೆಂಬರ್ 28, 2020
19 °C
ಕೈಕೊಟ್ಟು ಹೋದ ಪುಟ್ಟಣ್ಣ ಮಣಿಸಲು ದೇವೇಗೌಡ, ಕುಮಾರಸ್ವಾಮಿ ಪಟ್ಟು

ಬೆಂಗಳೂರು ಶಿಕ್ಷಕರ ಕ್ಷೇತ್ರ | ಪ್ರತಿಷ್ಠೆಯ ಕಣ: ವ್ಯಕ್ತಿಗತ ವರ್ಚಸ್ಸೇ ಪಣ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಧಾನಿ ಮತ್ತು ಸುತ್ತ ವ್ಯಾಪಿಸಿಕೊಂಡಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮತ್ತೆ ನೇರ ಹಣಾಹಣಿ ನಡೆಯುತ್ತಿದೆ. ಜೆಡಿಎಸ್‌ ಅಭ್ಯರ್ಥಿಯನ್ನೇ ಕಿತ್ತುಕೊಂಡಿರುವ ಬಿಜೆಪಿ, ಕ್ಷೇತ್ರವನ್ನೂ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಬಲ ಪಟ್ಟುಗಳನ್ನು ಹಾಕುತ್ತಿದೆ. ಪಕ್ಷದ ವರಿಷ್ಠರ ಕುಟುಂಬದ ಪ್ರತಿಷ್ಠೆಯನ್ನೇ ಪಣಕ್ಕಿರಿಸಿರುವ ಜೆಡಿಎಸ್‌, ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸಲು ಯತ್ನಿಸುತ್ತಿದೆ.

ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸತತವಾಗಿ ಮೂರು ಬಾರಿ ಜಯಭೇರಿ ಬಾರಿಸಿದ್ದ ಪುಟ್ಟಣ್ಣ ಈಗ ಬಿಜೆಪಿ ಅಭ್ಯರ್ಥಿ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್‌, ಪುಟ್ಟಣ್ಣ ಅವರಿಗೆ ಸೋಲಿನ ‘ರುಚಿ’ ತೋರಿಸುವ ಉಮೇದಿನಲ್ಲಿದೆ. ದಶಕಗಳ ಕಾಲದಿಂದಲೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗದ ಕಾಂಗ್ರೆಸ್‌, ಈ ಬಾರಿಯೂ ಹೊಸ ಮುಖ ಪ್ರವೀಣ್‌ ಪೀಟರ್‌ ಅವರನ್ನು ಕಣಕ್ಕಿಳಿಸಿದೆ.

ಜೆಡಿಯು ಅಭ್ಯರ್ಥಿಯಾಗಿ ಚಂದ್ರಶೇಖರ ಸ್ಪರ್ಧಿಸಿದ್ದಾರೆ. ಐವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು, ‘ರಂಗನಾಥ’ ಎಂಬ ಹೆಸರಿನವರೇ ಮೂವರಿದ್ದಾರೆ. ಇದರಿಂದ ಜೆಡಿಎಸ್‌ ಅಭ್ಯರ್ಥಿ ಎ.ಪಿ. ರಂಗನಾಥ ಅವರ ಮತ ಗಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೂ ಕಾಣುತ್ತಿದೆ. ಚಂದ್ರು ಮಾಸ್ಟರ್‌ ಮತ್ತು ಎಂ.ಎನ್‌. ರವಿಶಂಕರ್‌ ಎಂಬ ಪಕ್ಷೇತರ ಅಭ್ಯರ್ಥಿಗಳೂ ಇದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈ ಕ್ಷೇತ್ರ ವಿಸ್ತರಿಸಿಕೊಂಡಿದೆ. ಶೇಕಡ 80ರಷ್ಟು ಮತದಾರರು ಬೆಂಗಳೂರು ನಗರ ಜಿಲ್ಲೆಯಲ್ಲೇ ಇದ್ದಾರೆ. ಜನತಾ ಪರಿವಾರ ಮತ್ತು ಬಿಜೆಪಿ ನಡುವಿನ ಹೋರಾಟದ ಕಣವಾಗಿದ್ದ ಕ್ಷೇತ್ರ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ– ಜೆಡಿಎಸ್‌ ನಡುವಿನ ಪೈಪೋಟಿಯ ಅಖಾಡವಾಗಿದೆ.

ನೇರ ಹಣಾಹಣಿ: 2002ಕ್ಕೂ ಮೊದಲು ಕ್ಷೇತ್ರ ಬಿಜೆಪಿ ಕೈಯಲ್ಲಿ ಇತ್ತು. 2002ರ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಕೆ. ನರಹರಿ ಅವರನ್ನು ಸೋಲಿಸಿದ್ದ ಪುಟ್ಟಣ್ಣ, ಕ್ಷೇತ್ರದಲ್ಲಿ ಜೆಡಿಎಸ್‌ ಬೇರೂರಲು ನೆರವಾಗಿದ್ದರು. 2008 ಮತ್ತು 2014ರ ಚುನಾವಣೆಯಲ್ಲೂ ಪುಟ್ಟಣ್ಣ ಗೆಲುವಿನೊಂದಿಗೆ ಕ್ಷೇತ್ರ ಜೆಡಿಎಸ್‌ ಬಳಿಯೇ ಉಳಿಯಿತು.

18 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಪುಟ್ಟಣ್ಣ,  ಶಿಕ್ಷಕರ ಜತೆ  ವೈಯಕ್ತಿಕ ಸಂಪರ್ಕ ಸಾಧಿಸಿಕೊಂಡಿದ್ದಾರೆ. ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಕುರಿತ ಹೋರಾಟದಲ್ಲೂ ಭಾಗಿಯಾಗಿದ್ದಾರೆ. ಅದರ ಜತೆಗೆ ಈಗ ಆಡಳಿತಾರೂಢ ಪಕ್ಷದ ಬೆಂಬಲವೂ ದಕ್ಕಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸೇರಿದಂತೆ ಹಲವು ನಾಯಕರು ನೇರವಾಗಿ ಅಖಾಡಕ್ಕೆ ಇಳಿದಿದ್ದು, ಶಿಕ್ಷಕರ ಬೆಂಬಲ ಖಾತರಿಪಡಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಶಿಕ್ಷಕ ಸಂಘಟನೆಗಳ ಬಲವೂ ಈಗ ಪುಟ್ಟಣ್ಣ ಅವರ ‘ಶಕ್ತಿ’ಯನ್ನು ಮತ್ತಷ್ಟು ಹೆಚ್ಚಿಸಿದೆ.

ರಂಗನಾಥ ಒಂದು ವರ್ಷದಿಂದ ಈಚೆಗೆ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಭಾಗಿಯಾಗಿ ಚುನಾವಣಾ ಪೂರ್ವಸಿದ್ಧತೆ ನಡೆಸಿದ್ದಾರೆ. ವೈಯಕ್ತಿಕ ಬಲಕ್ಕಿಂತಲೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ‘ವರ್ಚಸ್ಸು’ ಅವರ ಮತ ಗಳಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಕುಮಾರಸ್ವಾಮಿ ಖುದ್ದಾಗಿ ಶಿಕ್ಷಕರನ್ನು ಸಂಪರ್ಕಿಸಿ ಮತ ಯಾಚಿಸುತ್ತಿದ್ದು, ರಂಗನಾಥ ಅವರನ್ನು ಗೆಲುವಿನ ದಡ ಮುಟ್ಟಿಸಿ, ಪಕ್ಷಕ್ಕೆ ಕೈಕೊಟ್ಟು ಹೋದ ಪುಟ್ಟಣ್ಣ ಅವರಿಗೆ ‘ಪಾಠ’ ಕಲಿಸುವ ಹಂಬಲದಲ್ಲಿದ್ದಾರೆ.

ಬಿಜೆಪಿ– ಜೆಡಿಎಸ್‌ ನಡುವಿನ ಪೈಪೋಟಿಯಷ್ಟೇ ಪ್ರಬಲವಾಗಿ ಪುಟ್ಟಣ್ಣ ಮತ್ತು ದೇವೇಗೌಡರ ಕುಟುಂಬದ ನಡುವಿನ ಹೋರಾಟದ ಕಣವಾಗಿಯೂ ಬೆಂಗಳೂರು ಕ್ಷೇತ್ರ ಕಾಣಿಸುತ್ತಿದೆ. ಬಿಜೆಪಿಗೆ 14 ಶಾಸಕರು, ಮೂವರು ಸಂಸದರ ಬಲವಿದೆ. ಜೆಡಿಎಸ್‌ ಐವರು ಶಾಸಕರ ಬೆಂಬಲ ಹೊಂದಿದೆ. ಕಾಂಗ್ರೆಸ್‌ 12 ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿದ್ದರೂ, ಚುನಾವಣಾ ಕಣದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ.

ಪುಟ್ಟಣ್ಣ ಮತ್ತು ರಂಗನಾಥ ಇಬ್ಬರೂ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿದ್ದವರು. ಪುಟ್ಟಣ್ಣ 18 ವರ್ಷಗಳ ಕೆಲಸದ ಪಟ್ಟಿ ಹಿಡಿದು ಮತ ಯಾಚಿಸುತ್ತಿದ್ದಾರೆ. ‘ಒಮ್ಮೆ ಅವಕಾಶ ಕೊಟ್ಟು ನೋಡಿ’ ಎಂದು ರಂಗನಾಥ ಶಿಕ್ಷಕರ ಮನವೊಲಿಕೆಗೆ ಇಳಿದಿದ್ದಾರೆ. ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಎರಡೂ ಪಕ್ಷಗಳ ನಾಯಕರ ಪಾಲಿಗೂ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

***

ಅಭ್ಯರ್ಥಿಗಳ ಸಂದರ್ಶನ

***

* ಈ ಕ್ಷೇತ್ರದಲ್ಲಿ ಇತ್ತೀಚೆಗೆ ಕಾಂಗ್ರೆಸ್‌ ಗೆದ್ದೇ ಇಲ್ಲ. ನಿಮ್ಮ ಗೆಲುವು ಸಾಧ್ಯವೇ?

ಈ ಕ್ಷೇತ್ರದಲ್ಲಿ ಅರ್ಹರಲ್ಲದವರನ್ನೂ ಮತದಾರರನ್ನಾಗಿ ಮಾಡಲಾಗಿತ್ತು. ಶಿಕ್ಷಕ ಮತದಾರರಿಗೂ ಹಣ, ಹೆಂಡದ ಆಮಿಷ ಒಡ್ಡುವ ಪ್ರಯತ್ನ ನಡೆದಿತ್ತು. ಇದಕ್ಕೆಲ್ಲ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ನಿಜವಾದ ಶಿಕ್ಷಕರೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವುದರಿಂದ ನನ್ನ ಗೆಲುವು ನಿಶ್ಚಿತ.

* ಇದು ನಿಮಗೆ ಅನುಕೂಲಕರ ಎಂದು ಹೇಗೆ ನಿರೀಕ್ಷೆ ಮಾಡುತ್ತೀರಿ?

ಶಿಕ್ಷಕಿಯ ಮಗನಾಗಿ ಶಿಕ್ಷಕರ ಸಮಸ್ಯೆಗಳನ್ನು ಬಲ್ಲೆ. ಅವರ ಸಮಸ್ಯೆಗಳ ಪರಿಹಾರ ಹಾಗೂ ಶಿಕ್ಷಣದ ಸುಧಾರಣೆ ಕುರಿತ ಚಿಂತನೆಗಳನ್ನು ಮತದಾರರ ಮುಂದಿಟ್ಟಿದ್ದೇನೆ. ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ ಸೇರಿದಂತೆ ಶಿಕ್ಷಕರ ಜೀವನಮಟ್ಟ ಸುಧಾರಣೆಗೆ ಕಾಂಗ್ರೆಸ್‌ನ ಕೊಡುಗೆಗಳೇನು ಹಾಗೂ ಈಗಿನ ಆಡಳಿತದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ತುಲನೆ ಮಾಡುವ ಅವಕಾಶ ಅವರಿಗೂ ಸಿಕ್ಕಿದೆ. ಇವು ನನಗೆ ಸಹಕಾರಿ.

* ಶಿಕ್ಷಕರು ನಿಮ್ಮಿಂದ ಏನು ನಿರೀಕ್ಷಿಸಬಹುದು?

ಕೋವಿಡ್‌ ನಂತರದಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಬ್ಬರಿಗೂ ಅನ್ಯಾಯ ಆಗದಂತೆ ಶಿಕ್ಷಣ ವ್ಯವಸ್ಥೆಗೆ ಮರುಹುಟ್ಟು ನೀಡಬೇಕಿದೆ. ಖಾಸಗಿ ಶಾಲೆಯ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅವರಿಗೆ ವಿಮೆ ಹಾಗೂ ಸೇವಾ ಭದ್ರತೆ, ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಬೇಕಿದೆ.

* ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನಿಮ್ಮ ಕನಸುಗಳೇನು?

ತಂತ್ರಜ್ಞಾನ ಬಳಸಿ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಹೊಸ ದಿಸೆ ಕಲ್ಪಿಸಬೇಕಿದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವುದಕ್ಕೆ ಪೈಪೋಟಿ ಹೆಚ್ಚು. ನಮ್ಮಲ್ಲೂ ಇಂತಹದ್ದೇ ವ್ಯವಸ್ಥೆ ಕಟ್ಟಬೇಕಿದೆ.

* ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆಯೇ ತಕರಾರು ಇದೆಯಲ್ಲ?

ನಾನು  ಪಿಯುಸಿವರೆಗೆ ಕಲಿತಿದ್ದರಲ್ಲಿ ಮುಚ್ಚುಮರೆ ಏನಿಲ್ಲ. ಬಡತನದಿಂದಾಗಿ ಶಿಕ್ಷಣ ಮೊಟಕಾಯಿತು. ನನ್ನ
ಉಮೇದುವಾರಿಕೆಯನ್ನು ಆಯೋಗವೇ ಒಪ್ಪಿದೆ.

-ಪ್ರವೀಣ್‌ ಪೀಟರ್‌, ಕಾಂಗ್ರೆಸ್‌

***

ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವುದೇ ಗುರಿ

* ವಕೀಲರಾಗಿದ್ದವರು ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವುದೇಕೆ ?

ನಾನು ವಿದ್ಯಾರ್ಥಿ ನಾಯಕನಾಗಿದ್ದವನು. ಕಾಲೇಜು ದಿನಗಳಿಂದಲೇ ಹೋರಾಟದಲ್ಲಿ ನಿರತನಾಗಿದ್ದೇನೆ. ವರ್ಷದಿಂದ ಹೆಚ್ಚು ಸಕ್ರಿಯನಾಗಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದ ವೇಳೆ ಉಪನ್ಯಾಸಕರು, ಅಧ್ಯಾಪಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ.

* ಶಿಕ್ಷಕರು ನಿಮಗೇಕೆ ಮತ ಹಾಕಬೇಕು ?

ಅನುದಾನರಹಿತ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಲು, ಸರ್ಕಾರದ ಎಲ್ಲ ಸೌಲಭ್ಯ ದೊರಕಿಸಿ ಕೊಡಲು ಹೋರಾಡುತ್ತೇನೆ. ವಕೀಲನಾಗಿರುವುದರಿಂದ ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತೇನೆ.

* ವಕೀಲರಾಗಿರುವ ನೀವು ಈಗಲೂ ಕಾನೂನು ಹೋರಾಟ ನಡೆಸಬಹುದಲ್ಲ

ಅಧಿಕಾರ ಇದ್ದಾಗ ಹೋರಾಟ ನಡೆಸುವುದಕ್ಕೂ, ಇಲ್ಲದಾಗ ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸದನದಲ್ಲಿ ಶಿಕ್ಷಕರ ಪರ ಮಾತನಾಡುವವರ ಅವಶ್ಯಕತೆ ಹೆಚ್ಚಿದೆ.

* ಶಿಕ್ಷಕರಿಗೆ ಜೆಡಿಎಸ್‌ ಕೊಡುಗೆಯೇನು ?

ಶೈಕ್ಷಣಿಕ ಕ್ಷೇತ್ರಕ್ಕೆ ರಾಜ್ಯದಲ್ಲಿ ಜೆಡಿಎಸ್‌ ಬಿಟ್ಟರೆ ಬೇರೆ ಪಕ್ಷದವರ ಕೊಡುಗೆ ಹೆಚ್ಚು ಇಲ್ಲ. ದೇವೇಗೌಡರು ಮುಖ್ಯಮಂತ್ರಿ, ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ 1.40 ಲಕ್ಷ ಶಿಕ್ಷಕರ ನೇಮಕ, ಮಹಿಳೆಯರಿಗೆ ಶೇ 50 ಮೀಸಲಾತಿ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ  49 ಸಾವಿರ ಶಿಕ್ಷಕ–ಉಪನ್ಯಾಸಕರ ನೇಮಕಾತಿ ಮಾಡಲಾಯಿತು.

* ಎಷ್ಟೋ ಶಿಕ್ಷಕರಿಗೆ ರಂಗನಾಥ್ ಅವರ ಪರಿಚಯವೇ ಇಲ್ಲ ಎಂಬ ಮಾತಿದೆ?

ಶಿಕ್ಷಕರಿಗೆ ಜೆಡಿಎಸ್‌ ಕೊಡುಗೆ ಏನೆಂದು ಎಲ್ಲರಿಗೂ ಗೊತ್ತು. ಒಂದು ವರ್ಷದಿಂದ ಸತತವಾಗಿ ಓಡಾಡಿ ಎಲ್ಲ ಶಿಕ್ಷಕರನ್ನೂ ಭೇಟಿ ಮಾಡಿದ್ದೇನೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಶಿಕ್ಷಕರ ಪರವಾಗಿ 14 ಹೋರಾಟಗಳನ್ನು ಮಾಡಿದ್ದೇನೆ. ಮೂರು ಬಾರಿ ಗೆದ್ದವರೊಬ್ಬರು ‘ಡಿ’ ದರ್ಜೆ ನೌಕರರು, ಗುಮಾಸ್ತರನ್ನೆಲ್ಲ ಶಿಕ್ಷಕರು ಎಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಇಂತಹ 5000 ಬೋಗಸ್‌ ಮತಗಳನ್ನು ಪಟ್ಟಿಯಿಂದ ತೆಗೆಸಿದ್ದೇನೆ. ಇದು ಫಲಿತಾಂಶದಲ್ಲಿ ವ್ಯತ್ಯಾಸ ಮಾಡಲಿದೆ.

-ಎ.ಪಿ.ರಂಗನಾಥ್‌, ಜೆಡಿಎಸ್‌

***

ಚುನಾವಣೆ ಒಂದು ಕಡೆಗೇ ನಡೆಯುತ್ತಿದೆ

* ಜೆಡಿಎಸ್‌ ತೊರೆದು ಪಕ್ಷಕ್ಕೆ ದ್ರೋಹ ಮಾಡಿದ್ದೀರಿ ಎಂಬ ಆರೋಪ ಇದೆ, ಗೆಲುವು ಸಾಧ್ಯವೇ?

ಕಳೆದ ಬಾರಿ ಬಿ ಫಾರಂ  ಕೊಟ್ಟ ನಾಯಕರು ಎಲ್ಲಾ ಶಾಸಕರನ್ನು ಕರೆದುಕೊಂಡು ಶ್ರೀಲಂಕಾಕ್ಕೆ ಹೋಗಿದ್ದರು. ಶಿಕ್ಷಕರು ವ್ಯಕ್ತಿಗತವಾಗಿ ನನ್ನನ್ನು ಗುರುತಿಸಿದ್ದಾರೆ. ಈಗಲೂ ಅವರೇ ಚುನಾವಣೆ ನಡೆಸುತ್ತಿದ್ದಾರೆ. ಬಿಜೆಪಿ ಸೇರಿರುವುದು ಆನೆಬಲ ಬಂದಂತಾಗಿದೆ. ಚುನಾವಣೆ ಒಂದು ಕಡೆಗೇ ನಡೆಯುತ್ತಿದೆ. ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುವೆ. ‍

* ನಿಮ್ಮ ಕುಟುಂಬದ 10 ಜನರಿಗೆ ಕ್ಲಾಸ್‌ ಒನ್ ಅಧಿಕಾರಿ ಹುದ್ದೆ ಕೊಡಿಸಿದ್ದಾರಂತಲ್ಲ?

ಕೃಷ್ಣ ಅವರು ಕೆಪಿಎಸ್‌ಸಿ ಅಧ್ಯಕ್ಷರಿದ್ದಾಗ ಇವರೇ ಎಲ್ಲರನ್ನೂ ಪಾಸ್ ಮಾಡಿಸುತ್ತಿದ್ದರು ಎಂದಾದರೆ ಅದು ವಂಚನೆ ಅಲ್ಲವೇ? ಮುಖ್ಯಮಂತ್ರಿ ಆಗಿದ್ದವರು, ಪ್ರಧಾನಿ ಆಗಿದ್ದವರು ಹೀಗೆ ಮಾತನಾಡುವುದೇ? ಅವರ ಕುಟುಂಬದಲ್ಲೂ ಅಧಿಕಾರಿಗಳಿದ್ದಾರೆ. ಅವರಿಗೆಲ್ಲಾ ಪ್ರಭಾವ
ಬಳಸಿ ಕೆಲಸ ಕೊಡಿಸಿದ್ದಾರೆ ಎಂದು ಅರ್ಥವೇ? ನಮ್ಮ ಕುಟುಂಬದ ಯಾರಿಗೆ ಕೆಲಸ ಕೊಡಿಸಿದ್ದಾರೆ, ಪಟ್ಟಿ ಕೊಡಲಿ.

* 5 ಸಾವಿರ ಬೋಗಸ್ ಮತದಾರರನ್ನು ಸೇರ್ಪಡೆ ಮಾಡಿಸಿದ್ದೀರಿ ಎಂಬ ಆರೋಪ ಇದೆಯಲ್ಲ?

ಅದಕ್ಕೂ ನನಗೂ ಸಂಬಂಧ ಇಲ್ಲ. ಆರೋಪ ಮಾಡುವವರು ವೃತ್ತಿನಿರತ ವಕೀಲರಲ್ಲದ ಕಾರಣ ಅವರಿಗೆ ಅವೆಲ್ಲ ಅರ್ಥವಾಗುವುದಿಲ್ಲ. ಸುಮ್ಮನೆ ಆರೋಪ ಮಾಡದೆ ಕ್ರಿಮಿನಲ್ ಕೇಸ್ ದಾಖಲಿಸಲಿ. ನಾನೂ ಬೆಂಬಲ ನೀಡುತ್ತೇನೆ. ಸತ್ಯಾಂಶ ಜನರಿಗೆ ತಿಳಿಯಲಿ.

* ಮೂರು ಅವಧಿಯ ಕೊಡುಗೆ ಏನು, ಮತ್ತೆ ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

ಯಾವುದೇ ಪಕ್ಷದ ಸರ್ಕಾರ ಇದ್ದರೂ ಶಿಕ್ಷಕರ ಪರವಾಗಿ ಮುನ್ನುಗ್ಗಿ ಕೆಲಸ ಮಾಡಿದ್ದೇನೆ. ಹಾಗಾಗಿಯೇ ಅವರಯ ಮೂರು ಬಾರಿ  ಗೆಲ್ಲಿಸಿದ್ದಾರೆ. ಮುಖ್ಯಮಂತ್ರಿ ಅವರ ಮನವೊಲಿಸಿ ಅಥವಾ ಹೋರಾಟದ ಮೂಲಕ ಎಲ್ಲಾ ಶಿಕ್ಷಕರಿಗೂ ಕೋವಿಡ್ ವಿಶೇಷ ಪ್ಯಾಕೇಜ್ ಕೊಡಿಸುತ್ತೇನೆ. ಬಡ್ತಿ ಶಿಕ್ಷಕರ ಸಂಬಳ ಗೊಂದಲ ಸೇರಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ
ಬದ್ಧನಾಗಿದ್ದೇನೆ.

-ಪುಟ್ಟಣ್ಣ, ಬಿಜೆಪಿ

***

ಸಂದರ್ಶನ: ಪ್ರವೀಣ್‌ ಕುಮಾರ್‌ ಪಿ.ವಿ, ಗುರು ಪಿ.ಎಸ್‌, ವಿಜಯಕುಮಾರ್ ಎಸ್‌.ಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು