ಭಾನುವಾರ, ಮೇ 9, 2021
19 °C
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಸಂಭ್ರಮ * ಪೋಷಕರು–ಬೋಧಕರನ್ನು ಸ್ಮರಿಸಿದ ರ‍್ಯಾಂಕ್ ವಿಜೇತರು

ಬೆಂಗಳೂರು ವಿವಿ ಘಟಿಕೋತ್ಸವ: ಪರಿಶ್ರಮದ ಬಂಡವಾಳಕ್ಕೆ ‘ಪದಕದ’ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶ್ರಮ, ಶ್ರದ್ಧೆ ಮತ್ತು ಆಸಕ್ತಿಯನ್ನು ಬಂಡವಾಳವಾಗಿ ಹೂಡಿದ ಅನೇಕ ವಿದ್ಯಾರ್ಥಿಗಳು ‘ಚಿನ್ನದ ಪದಕ’ದ ಲಾಭ ಪಡೆದರು. ಹಲವು ತಿಂಗಳುಗಳ ವಿಳಂಬದ ನಂತರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವವು ವಿದ್ಯಾರ್ಥಿಗಳ ಸಂಭ್ರಮಕ್ಕೆ ವೇದಿಕೆಯಾಯಿತು.

ಕಶ್ಯಪ್‌, ನರೇಶ್‌ಗೆ 6 ಚಿನ್ನದ ಪದಕ


ಎಂ.ಎಸ್. ಕಶ್ಯಪ್‌ ವಾಸುದೇವನ್

ನಗರದ ಯುವಿಸಿಇ ಕಾಲೇಜಿನ ಬಿಇ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಎಂ.ಎಸ್. ಕಶ್ಯಪ್‌ ವಾಸುದೇವನ್, ಆರು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆದಿದ್ದಾರೆ.

ಸದ್ಯ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಜಿಯೊ ಟೆಕ್ನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅವರಿಗೆ, ಪ್ರಾಧ್ಯಾಪಕರಾಗುವ ಕನಸಿದೆ. 

ಎಂಎಸ್‌ಸಿ ರಸಾಯನ ವಿಜ್ಞಾನ ವಿಭಾಗದಲ್ಲಿ 6 ಚಿನ್ನದ ಪದಕ, ಎರಡು ನಗದು ಪುರಸ್ಕಾರ ಪಡೆದಿರುವ ಕೆ.ಎಸ್. ನರೇಶ್‌, ಸದ್ಯ, ಮೈಸೂರಿನ ಆಹಾರ ತಂತ್ರಜ್ಞಾನ ಸಂಸ್ಥೆಯಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಕೆಲಸ ಸಿಕ್ಕಿದರೂ ಅದನ್ನು ಬಿಟ್ಟು, ಅಧ್ಯಯನಕ್ಕೆ ಮರಳಿರುವ ಅವರು, ಪ್ರೊಫೆಸರ್ ಆಗುವ ಕನಸು ಹೊಂದಿದ್ದಾರೆ.

ಸಿದ್ದಿ ಸಮುದಾಯದ ವಿದ್ಯಾರ್ಥಿನಿಗೆ ‘ಚಿನ್ನದ ಗರಿಮೆ’


ಕಾಂಚನ ಲಕ್ಷ್ಮಣ್ ಸಿದ್ದಿ

ಸ್ನಾತಕೋತ್ತರ ಪದವಿಯ ‘ತತ್ವಶಾಸ್ತ್ರ’ ವಿಭಾಗದಲ್ಲಿ ಕಾಂಚನ ಲಕ್ಷ್ಮಣ್ ಸಿದ್ದಿ ಚಿನ್ನದ ಪದಕ ಪಡೆದಿದ್ದಾರೆ. ಈ ಸಮುದಾಯದ ವಿದ್ಯಾರ್ಥಿಗಳ ಪೈಕಿ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿನಿ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಂಚನಾ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ತತ್ವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಅವರು, ಈಗ ಪಿಎಚ್‌ಡಿ ಮಾಡಲು ನಿರ್ಧರಿಸಿದ್ದಾರೆ. ತತ್ವಶಾಸ್ತ್ರದಲ್ಲಿ ಪಿಎಚ್.ಡಿ ಮಾಡಲು ನಿರ್ಧರಿಸಿರುವ ಅವರು, ಪ್ರಾಧ್ಯಾಪಕಿಯಾಗಬೇಕು ಎಂಬ ಕನಸು ಹೊತ್ತಿದ್ದಾರೆ.

‘ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡುವುದೇ ನನ್ನ ಮುಖ್ಯ ಗುರಿಯಾಗಿತ್ತು. ಚೆನ್ನಾಗಿ ಅಭ್ಯಾಸ ಮಾಡಿದ್ದೆ. ರ‍್ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ’ ಎಂದರು.

ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಗೆ ನಾಲ್ಕು ಚಿನ್ನದ ಪದಕ

ರಾಮನಗರದ ಎಂ.ಕಾವ್ಯಾ ಸ್ನಾತಕೋತ್ತರ ಪದವಿಯ ಕನ್ನಡ ಸಾಹಿತ್ಯ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಮತ್ತು ಒಂದು ನಗದು ಪುರಸ್ಕಾರ ಪಡೆದಿದ್ದಾರೆ. ಸದ್ಯ, ರಾಮನಗರದ ಶಾರದಾ ಶಿಕ್ಷಣ ಕಾಲೇಜಿನಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಅವರು, ಪ್ರಾಧ್ಯಾಪಕರಾಗುವ ಗುರಿ ಹೊಂದಿದ್ದಾರೆ.

ಬೇಸರ: ಕೋವಿಡ್‌ ಕಾರಣದಿಂದ ಹೆಚ್ಚು ಜನರು ಸಭಾಂಗಣದಲ್ಲಿ ಸೇರಲು ನಿರ್ಬಂಧ ವಿಧಿಸಲಾಗಿತ್ತು. ಅಂತರ ಪಾಲನೆಗೆ ಆದ್ಯತೆ ನೀಡಲಾಗಿತ್ತು.

ಪೋಷಕರು ಮತ್ತು ಸ್ನೇಹಿತರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಇರದ ಕಾರಣ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿನಿಗೆ ಐದು ಚಿನ್ನದ ಪದಕ


ರಹಮತುನ್ನೀಸಾ

ನಗರದ ಫ್ರೇಜರ್‌ಟೌನ್‌ನಲ್ಲಿರುವ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಓದಿದ್ದ ವಿದ್ಯಾರ್ಥಿನಿ ರಹಮತುನ್ನೀಸಾ ಐದು ಚಿನ್ನದ ಪದಕ, ಮೂರು ನಗದು ಪುರಸ್ಕಾರ ಸೇರಿದಂತೆ ಒಟ್ಟು ಎಂಟು ಬಹುಮಾನಗಳಿಗೆ ಪಾತ್ರರಾಗಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ರಹಮತುನ್ನೀಸಾ ಸರ್ಕಾರಿ ಶಾಲಾ–ಕಾಲೇಜುಗಳಲ್ಲಿಯೇ ವ್ಯಾಸಂಗ ಮಾಡಿದ್ದಾರೆ.

‘ನಾವು ಐದು ಜನ ಮಕ್ಕಳು. ಮೂವರು ಸಹೋದರಿಯರು, ಒಬ್ಬ ಅಣ್ಣ ಇದ್ದಾರೆ. ಹೆಣ್ಣುಮಕ್ಕಳೂ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ತಂದೆಯ ಆಸೆಯಾಗಿತ್ತು. ಅದರಂತೆ ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸಿದರು. ನಮ್ಮ ಕುಟುಂಬದಲ್ಲಿಯೇ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿನಿ ನಾನು. ತಂದೆ ತೀರಿಕೊಂಡ ನಂತರ ಅಣ್ಣನೇ ಓದಿಸಿದ್ದಾನೆ’ ಎಂದು ಅವರು ಸ್ಮರಿಸಿದರು. 

‘ಸಮಯ ಸಿಕ್ಕಾಗ ಓದುತ್ತಿದ್ದೆ. ಸ್ವಲ್ಪ ಹೊತ್ತು ಓದಿದರೂ ಏಕಾಗ್ರತೆಯಿಂದ ಅಭ್ಯಾಸ ಮಾಡುತ್ತಿದ್ದುದು ನೆರವಾಯಿತು. ಸದ್ಯ, ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಓದುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು