ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆಯ ಕಾರ್ಯವು ಬಿರುಸಿನಿಂದ ನಡೆಯುತ್ತಿದ್ದು, ಈಗಾಗಲೇ ಶೇ 62.61ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ಹೇಳಿದೆ.
ರಾಜ್ಯ ಸರ್ಕಾರವು ಸದ್ಯದಲ್ಲಿಯೇ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಸೂಚನೆ ನೀಡಿದ್ದು, ವಿಶ್ವವಿದ್ಯಾಲಯದಲ್ಲಿ ಎಲ್ಲರಿಗೂ ಲಸಿಕೆ ವಿತರಿಸಲು ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾರ್ಯಪಡೆ ರಚಿಸಿ, ಲಸಿಕಾ ವಿತರಣಾ ಕಾರ್ಯ ಚುರುಕುಗೊಳಿಸಿದ್ದಾರೆ.
ಕಾಲೇಜುಗಳಿಂದ ಕೋವಿಡ್ ಲಸಿಕೆ ವಿವರಗಳನ್ನು ಸಂಗ್ರಹಿಸಲು ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ನೇಮಿಸಿದ್ದು, ಒಬ್ಬೊಬ್ಬರು ಪ್ರತಿದಿನ 25 ಕಾಲೇಜುಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ ಶೇ. 74.18ರಷ್ಟು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಲಯದ ಶೇ. 66ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 291 ಸಂಯೋಜಿತ ಕಾಲೇಜುಗಳಿದ್ದು, ಅಲ್ಲಿನ ಶೇ. 79.7ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಒಟ್ಟು 1,07, 614 ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದು, ಇಲ್ಲಿಯವರೆಗೆ 67, 387ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.