ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಡಗರ: ಹೆಚ್ಚಾಯ್ತು ಹಣ್ಣು–ತರಕಾರಿ ದರ

ಮಾರುಕಟ್ಟೆಯಲ್ಲಿ ಜನಜಂಗುಳಿ
Last Updated 10 ಜನವರಿ 2021, 20:54 IST
ಅಕ್ಷರ ಗಾತ್ರ

ಬೆಂಗಳೂರು: ಸಂಕ್ರಾಂತಿಯ ಸಡಗರಕ್ಕೆ ನಾಲ್ಕು ದಿನಗಳಷ್ಟೇ ಉಳಿದಿದ್ದು, ತರಕಾರಿ– ಹಣ್ಣುಗಳ ದರಗಳಲ್ಲಿ ಏರಿಕೆ ಕಂಡು ಬಂದಿದೆ. ಹಬ್ಬದ ಆಚರಣೆಗೆ ಸಜ್ಜಾಗಿರುವ ಜನರು ಭಾನುವಾರದಿಂದಲೇ ಖರೀದಿಯಲ್ಲಿ ತೊಡಗಿದ್ದು, ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆ ನಿಂತಿರುವುದರಿಂದ ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳು ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿವೆ. ಪ್ರತಿ ಹಬ್ಬದಂತೆ ಸಂಕ್ರಾಂತಿಗೂ ಐದಾರು ದಿನಗಳ ಮುನ್ನವೇ ಖರೀದಿ ಭರಾಟೆ ಗರಿಗೆದರಿದೆ. ಮಾರುಕಟ್ಟೆಯಲ್ಲಿ ಕಬ್ಬು, ಕಡಲೆಕಾಯಿ, ಗೆಣಸು ಮತ್ತು ಅವರೆ ರಾಶಿಗಳು ಕಣ್ಸೆಳೆಯುತ್ತಿವೆ. ಬೆಳ್ಳುಳ್ಳಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಶುಂಠಿ, ಮೆಣಸಿನಕಾಯಿ, ಬೀಟ್‍ರೂಟ್, ಬದನೆ, ಬೀನ್ಸ್, ಬೆಂಡೆಕಾಯಿ ದರಗಳು ಏರಿಕೆಯಾಗಿವೆ. ಮೂಲಂಗಿ, ಟೊಮೆಟೊ, ಹೂಕೋಸು ಮತ್ತು ಎಲೆಕೋಸು ತುಸು ಅಗ್ಗವಾಗಿವೆ.

ಒಂದು ತಿಂಗಳಿನಿಂದ ಕುಸಿತ ಕಂಡಿದ್ದ ಹಣ್ಣಿನ ದರಗಳು ಮತ್ತೆ ಹೆಚ್ಚಾಗಿವೆ. ಸೇಬು, ದ್ರಾಕ್ಷಿ, ಮೂಸಂಬಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದರಗಳೂ ಏರಿಕೆ ಕಂಡಿವೆ. ಸೊಪ್ಪುಗಳಲ್ಲಿ ಸಬ್ಬಕ್ಕಿ ಮತ್ತು ದಂಟಿನ ದರ ಏರಿಕೆಯಾಗಿದ್ದು, ಕೊತ್ತಂಬರಿ, ಪಾಲಕ್, ಮೆಂತ್ಯೆ ದರಗಳು ಕಡಿಮೆ ಇವೆ.

‘ಹಬ್ಬಗಳಿದ್ದಾಗ ಮಾತ್ರ ವರ್ತಕರಿಗೆ ಲಾಭ. ಕಳೆದ ವರ್ಷದ ಹಬ್ಬಗಳ ಸಂದರ್ಭದಲ್ಲಿ ಕೊರೊನಾ ಹೊಡೆತದಿಂದಾಗಿ ವ್ಯಾಪಾರವೂ ನೆಲಕಚ್ಚಿತ್ತು. ಲಾಭಕ್ಕಿಂತ ನಷ್ಟ ಅನುಭವಿಸಿದ್ದೇ ಜಾಸ್ತಿ. ಈ ಬಾರಿ ಸಂಕ್ರಾಂತಿಗೆ ದರಗಳು ಏರಿಕೆಯಾಗಿವೆ. ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಹೆಚ್ಚು ಜನ ಸೇರುತ್ತಿರುವುದರಿಂದ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ಇದರ ಅರಿವಿದ್ದರೆ ನಮಗೂ ಕ್ಷೇಮ’ ಎಂದು ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಅನಿಲ್‌ ಕುಮಾರ್ ಮನವಿ ಮಾಡಿಕೊಂಡರು.

‘ಕೊರೊನಾ ಇದ್ದುದರಿಂದ ಕಳೆದ ವರ್ಷ ಸಂಕ್ರಾಂತಿ ಹೊರತಾಗಿ ಇತರ ಹಬ್ಬಗಳನ್ನು ಮುಕ್ತವಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಈ ಬಾರಿಯೂ ಹಬ್ಬದ ಆಚರಣೆ ಮೇಲೆ ಕೊರೊನಾ ಛಾಯೆ ಇದೆ. ಆದರೆ, ಹಬ್ಬ ಆಚರಿಸುವ ಪದ್ಧತಿಯನ್ನು ಬಿಡಲು ಸಾಧ್ಯವಿಲ್ಲ. ಹಾಗಾಗಿ, ಮುಂಜಾಗ್ರತೆಯಿಂದ ಹಬ್ಬಕ್ಕೂ ಮುನ್ನವೇ ಖರೀದಿಗೆ ಬಂದಿದ್ದೇನೆ’ ಎಂದು ಶಾಂತಿನಗರದ ನಿವಾಸಿ ಪಾರಿಜಾತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT