ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ನೋಟ: ‘ಅಭಿವೃದ್ಧಿ ಇಲ್ಲಿ ನಿಧಾನಗತಿಯಲ್ಲಿದೆ..!’

ರಾಜರಾಜೇಶ್ವರಿನಗರ, ಜ್ಞಾನಭಾರತಿ, ಆರ್‌.ಆರ್‌.ನಗರ, ಕೊಟ್ಟಿಗೆಪಾಳ್ಯ, ಲಕ್ಷ್ಮೀದೇವಿನಗರ ವಾರ್ಡ್‌ಗಳ ಸ್ಥಿತಿ
Last Updated 7 ಫೆಬ್ರುವರಿ 2020, 19:34 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದ ಸಂಪರ್ಕಕ್ಕೆ ಸೇತುವೆಯಾದ ಪ್ರಮುಖ ರಸ್ತೆಗಳು ಹಾದುಹೋಗಿರುವ ವಾರ್ಡ್‌ಗಳಿವು. ಈ ವಾರ್ಡ್‌ಗಳಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯಗಳುಕ್ಷಿಪ್ರವೇಗದಲ್ಲಿ ತಲೆ ಎತ್ತುತ್ತಿವೆ. ಆದರೆ, ಅಭಿವೃದ್ಧಿ ಕಾರ್ಯಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿವೆ. ದುರಸ್ತಿಯಾಗದ ಮಳೆ ನೀರು ಚರಂಡಿ, ಒಳಚರಂಡಿ ಕೊಳವೆಮಾರ್ಗ ಅಳವಡಿಕೆಗಾಗಿ ಅಗೆದ ನಂತರವೂ ಡಾಂಬರ್‌ ಕಾಣದ ರಸ್ತೆಗಳು, ಮಜ್ಜನ ಮಾಡಿಸುವ ದೂಳು, ಗುಂಪು ಗುಂಪಾಗಿ ದಾಳಿ ಮಾಡುವ ಬೀದಿನಾಯಿಗಳು...

ನಗರದ ಹೆಬ್ಬಾಗಿಲು ಖ್ಯಾತಿಯರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜ್ಞಾನಭಾರತಿ, ಆರ್‌.ಆರ್‌.ನಗರ, ಕೊಟ್ಟಿಗೆಪಾಳ್ಯ, ಲಕ್ಷ್ಮೀದೇವಿನಗರ ವಾರ್ಡ್‌ಗಳ ಚಿತ್ರಣವಿದು. ಈ ನಾಲ್ಕು ವಾರ್ಡ್‌ಗಳ ವಸ್ತುಸ್ಥಿತಿಗೆ ಸಂತೋಷ ಜಿಗಳಿಕೊಪ್ಪ ಅವರು ಕನ್ನಡಿ ಹಿಡಿದಿದ್ದಾರೆ.

***

ಶ್ರೀಮಂತರ ಐಷಾರಾಮಿ ಮನೆಗಳ ನಡುವೆಯೂ ಕಡುಬಡವರ ಇಟ್ಟಿಗೆ ಗೂಡಿನಂತಹ ಮನೆಗಳೂ ಈ ವಾರ್ಡ್‌ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ದಿನಗೂಲಿಯನ್ನೇ ನಂಬಿ ಬದುಕುವ ವರ್ಗದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರೀಮಂತರ ಕರೆಗಳಿಗೆ ಸ್ಪಂದಿಸಿ ತಕ್ಷಣವೇ ಕೆಲಸ ಮಾಡಿಕೊಡುವ ಕೆಲ ಜನಪ್ರತಿನಿಧಿಗಳು, ಬಡವರ ಕೂಗಿಗೆ ಸ್ಪಂದಿಸುತ್ತಿಲ್ಲವೆಂಬ ಆರೋಪ ಇದೆ.

ವಾರ್ಡ್‌ನ ಅಭಿವೃದ್ಧಿಗೆ ಹಿಂದಿನ ಸರ್ಕಾರ ಅನುದಾನ ನೀಡಿತ್ತು. ಅದರಡಿ ಕೈಗೊಂಡಿರುವ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದ್ದು, ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮನೆಗೆ ಅತಿಥಿಗಳು ಬಂದರೆ, ‘ರಸ್ತೆ ಅಗೆದು ಕೇವಲ ಐದಾರು ತಿಂಗಳಾಗಿವೆ. ದೂಳು ವಿಪರೀತ. ದಯವಿಟ್ಟು ಕ್ಷಮಿಸಿ... ನಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ನಿಧಾನಗತಿಯಲ್ಲಿದೆ’ ಎಂದು ವ್ಯಂಗ್ಯವಾಗಿ ಹೇಳುತ್ತಾರೆ ಇಲ್ಲಿನ ನಿವಾಸಿಗಳು. ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ಅನರ್ಹಗೊಂಡ ಬಳಿಕ ಕಾಮಗಾರಿಗಳ ವೇಗವೂ ಆಮೆಗತಿಗೆ ಇಳಿದಿದೆ ಎನ್ನುತ್ತಾರೆ ಸ್ಥಳೀಯರು.

ರಾಜರಾಜೇಶ್ವರಿನಗರ ವಾರ್ಡ್

ಮೈಸೂರು ರಸ್ತೆಗೆ ಹೊಂದಿ ಕೊಂಡಿರುವಐಡಿಯಲ್ ಹೋಮ್ಸ್, ರಾಜರಾಜೇಶ್ವರಿನಗರ, ಪುಷ್ಪಗಿರಿನಗರ, ಕೆಂಚನಹಳ್ಳಿ, ಬಿಎಚ್‌ಇಎಲ್ ಲೇಔಟ್, ಪಾಪಯ್ಯ ಲೇಔಟ್, ಬಿಇಎಂಎಲ್ ಲೇಔಟ್, ಚನ್ನಸಂದ್ರ, ಹೊರಕೆರೆಹಳ್ಳಿ ಕೆರೆ, ಹಲಗೆವಡೇರಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ. ಬಹುತೇಕ ಪ್ರದೇಶಗಳಲ್ಲಿ ಮಳೆನೀರು ಚರಂಡಿ, ಒಳಚರಂಡಿ ಕೊಳವೆ ಅಳವಡಿಕೆ ಕೆಲಸ ನಡೆದಿದೆ. ಆದರೆ, ಯಾವುದೂ ಪೂರ್ಣಗೊಂಡಿಲ್ಲ.

ಐಡಿಯಲ್ ಹೋಮ್ಸ್‌ ಬಳಿ ಹಲವೆಡೆ ಕೊಳವೆ ಅಳವಡಿಕೆಗಾಗಿ ರಸ್ತೆಗಳ ಅರ್ಧಭಾಗವನ್ನು ನವೆಂಬರ್‌ನಲ್ಲಿ ಅಗೆಯಲಾಗಿದೆ. ಅದನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ದೂಳು ವಿಪರೀತವಾಗಿದೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಾಟಾಚಾರಕ್ಕೆ ಕಲ್ಲು, ಮಣ್ಣು ತಂದು ಗುಂಡಿ ಮುಚ್ಚಲಾಗಿದೆ. ಇದರಿಂದಲೂ ದೂಳು ಬರುತ್ತಿದ್ದು, ಸಮೀಪದ ಕಟ್ಟಡ ಹಾಗೂ ಗಿಡಗಳ ಬಣ್ಣವೇ ಬದಲಾಗಿದೆ. ಆಸುಪಾಸಿನ ಮನೆಯವರು ಹಾಗೂ ಅಂಗಡಿಯವರ ಗೋಳು ಹೇಳತೀರದು. ‘ಕಾಮಗಾರಿ ನಡೆಯುತ್ತಿದೆ. ಅಡಚಣೆಗೆ ಕ್ಷಮಿಸಿ...’ ಎಂಬ ಸೂಚನಾಫಲಕಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಹುತೇಕ ಕಡೆಗಳಲ್ಲಿ ಗುಂಪು ಗುಂಪಾಗಿ ಓಡಾಡುವ ಬೀದಿನಾಯಿಗಳು, ಹಿರಿಯರು ಹಾಗೂ ಮಕ್ಕಳ ಮೇಲೆ ದಾಳಿ ಮಾಡಿದ ಉದಾಹರಣೆಗಳಿವೆ.

ಹಲಗೆವಡೇರಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿದೆ. ಮೈಸೂರು ರಸ್ತೆಯ ಕಮಾನಿನ ಬಳಿಯೂ ಸದಾ ದಟ್ಟಣೆ ಹೆಚ್ಚಿದೆ. ಇಲ್ಲೂ ರಸ್ತೆ ವಿಸ್ತರಣೆ ಅಗತ್ಯವಿದೆ. ಬಹುತೇಕಕಡೆಗಳಲ್ಲಿ ಡಾಂಬರ್ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಹಾವುಗಳ ಕಾಟವೂ ಇದೆ. ಸಮಸ್ಯೆ ಹೇಳಿಕೊಳ್ಳಲು ವಾರ್ಡ್‌ ಸದಸ್ಯೆ ಕೈಗೆ ಸಿಗುವುದಿಲ್ಲವೆಂದು ಸ್ಥಳೀಯರು ದೂರುತ್ತಾರೆ.

ಜ್ಞಾನಭಾರತಿ ವಾರ್ಡ್

ಜ್ಞಾನಜ್ಯೋತಿನಗರ, ಮಲತ್ತಹಳ್ಳಿ, ಭೈರವೇಶ್ವರ ಲೇಔಟ್, ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ, ರಾಜೀವಗಾಂಧಿನಗರ, ನಾಗರಭಾವಿ, ವಿಶ್ವೇಶ್ವರಯ್ಯ ಬಡಾವಣೆ, ಭವಾನಿನಗರ, ಜ್ಞಾನಭಾರತಿ, ಸಪ್ತಗಿರಿ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಈ ವಾರ್ಡ್ ವ್ಯಾಪ್ತಿಯಲ್ಲಿವೆ.

ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬೀದಿನಾಯಿಗಳ ಹಾವಳಿಯೂ ಇದೆ. ಉದ್ಯಾನಗಳ ಸ್ಥಿತಿ ಶೋಚನೀಯವಾಗಿದೆ. ಕೆಲವು ಉದ್ಯಾನಗಳು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

ಕಸದ ಸಮಸ್ಯೆ ಹೆಚ್ಚಿದೆ. ನಸುಕಿನಲ್ಲಿ ವಾಹನ ಮನೆ ಬಾಗಿಲಿಗೆ ಬಂದರೂ ಬಹುತೇಕರು ಕಸ ನೀಡುತ್ತಿಲ್ಲ. ರಸ್ತೆ ಅಕ್ಕ–ಪಕ್ಕದಲ್ಲಿ ಕಸ ಎಸೆಯುತ್ತಿದ್ದಾರೆ. ಕಸ ಸಂಗ್ರಹ ವಾಹನ ಹಾಗೂ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಬೆಂಗಳೂರು ವಿಶ್ವವಿದ್ಯಾಲಯವೂ ಇದೇ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಬೀದಿ ದೀಪಗಳ ಸಮಸ್ಯೆ ಇದೆ. ಕತ್ತಲಾಗುತ್ತಿದ್ದಂತೆ ಸುಲಿಗೆಯಂಥ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳುತ್ತಿಲ್ಲ.

ಕೊಟ್ಟಿಗೆಪಾಳ್ಯ ವಾರ್ಡ್

ಕೆಂಪೇಗೌಡ ನಗರ, ಚೌಡೇಶ್ವರಿನಗರ, ಪ್ರೇಮನಗರ, ಕೊಟ್ಟಿಗೆಪಾಳ್ಯ ಟೆಲಿಫೋನ್ ಎಂಪ್ಲಾಯೀಸ್ ಲೇಔಟ್, ನರಸಿಂಹರಾಜು ಪಾಳ್ಯ, ನಾಗರಭಾವಿ 2ನೇ ಹಂತದ ಅರ್ಧ ಭಾಗ, ಶ್ರೀಗಂಧಕಾವಲು ಹಾಗೂ ಸುತ್ತಮುತ್ತಲ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ.

ಬಹುತೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು ಕಣ್ಣಿಗೆ ರಾಚುತ್ತದೆ. ಹಳ್ಳಿ ರೀತಿ ಇರುವ ಪ್ರದೇಶದಲ್ಲಿ ಅಭಿವೃದ್ಧಿ ಅಷ್ಟಕ್ಕಷ್ಟೇ. ತಗ್ಗು ಬಿದ್ದ ಹಾಗೂ ಡಾಂಬರ್ ಕಾಣದ ರಸ್ತೆಗಳೇ ಹೆಚ್ಚಿವೆ. ರಾಜಕಾಲುವೆಗಳಲ್ಲಿ ಹೂಳು ತುಂಬಿದ್ದು, ದುರ್ನಾತ ಬೀರುತ್ತಿವೆ. ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಈ ವಾರ್ಡ್‌ನಲ್ಲಿ ಖಾಲಿ ನಿವೇಶನಗಳೂ ಹೆಚ್ಚಿವೆ. ಅವೆಲ್ಲವೂ ಕಸ ಸುರಿಯುವ ತಾಣಗಳಾಗಿ ಮಾರ್ಪಟ್ಟಿವೆ. ಅಲ್ಲೆಲ್ಲ ಹಾವುಗಳ ಕಾಟವೂ ಇದೆ. ಬಡವರು ಹಾಗೂ ಕೂಲಿ ಕಾರ್ಮಿಕರೇ ಇಲ್ಲಿ ಹೆಚ್ಚಿದ್ದಾರೆ. ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನೂ ಇಲ್ಲಿ ಕಾಣಬಹುದು. ವಾರ್ಡ್‌ ಸಮಸ್ಯೆಗಳನ್ನು ಹೇಳಿಕೊಳ್ಳಲು ಪಾಲಿಕೆ ಸದಸ್ಯರೂ ಕೈಗೆ ಸಿಗುವುದಿಲ್ಲವೆಂಬ ಆರೋಪ ಇಲ್ಲಿಯ ಜನರದ್ದು.

ಲಕ್ಷ್ಮಿದೇವಿನಗರ ವಾರ್ಡ್

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೊರಗುಂಟೆಪಾಳ್ಯ ಅರ್ಧ ಭಾಗ, ಲಕ್ಷ್ಮಿದೇವಿನಗರ, ಕೆಂಪಮ್ಮ ಲೇಔಟ್, ಕಾವೇರಿ ನಗರ, ನಂದಿನಿ ಲೇಔಟ್ ಅರ್ಧ ಭಾಗ, ಯಶವಂತಪುರ ಕೈಗಾರಿಕಾ ಪ್ರದೇಶದ ಅರ್ಧ ಭಾಗ ಹಾಗೂ ವಿಧಾನಸೌಧ ಲೇಔಟ್ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ.

ಹೊಂಡಮಯ ರಸ್ತೆಯಲ್ಲಿ ನೀರು ನಿಲ್ಲುವುದು ಸಾಮಾನ್ಯ. ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು. ರಾಜ್‌ಕುಮಾರ್‌ ಸಮಾಧಿ ಎದುರು ರಸ್ತೆ ದಾಟಲು ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಕೂಲಿ ಕಾರ್ಮಿಕರೇ ಹೆಚ್ಚಿರುವ ಜೈಭುವನೇಶ್ವರಿನಗರದಲ್ಲಿ ಮೇಲ್ಸೇತುವೆ ನಿರ್ಮಿಸಿರುವುದು ಜನರಿಗೆ ನೆಮ್ಮದಿ ತಂದಿದೆ.

ನಿವಾಸಿಗಳೇ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಅಲ್ಲೆಲ್ಲ ನಾಯಿಗಳು ಹೆಚ್ಚಾಗಿವೆ. ಹದ್ದುಗಳ ಕಾಟವೂ ವಿಪರೀತವಾಗಿದೆ. ಇಲ್ಲಿಯ ರಸ್ತೆಗಳಲ್ಲಿ ಸುಲಿಗೆ ಮಾಡುವವರೂ ಇದ್ದಾರೆ. ರಾತ್ರಿ ಸಮಯದಲ್ಲಿ ರಸ್ತೆಗಳಲ್ಲಿ ಓಡಾಡಲು ಜನ ಹೆದರುತ್ತಿದ್ದಾರೆ. ಪ್ರಮುಖ ಪ್ರದೇಶಗಳಲ್ಲಿ ಉದ್ಯಾನಗಳಿದ್ದು, ಅವುಗಳ ನಿರ್ವಹಣೆ ಕೊರತೆ ಎದ್ದುಕಾಣುತ್ತದೆ. ಅಭಿವೃದ್ಧಿಯೂ ಮರಿಚಿಕೆಯಾಗಿದೆ.

ಪಾಲಿಕೆ ಸದಸ್ಯರು ಏನಂತಾರೆ?

– ನಳಿನಿ ಎಂ. ಮಂಜು, ರಾಜರಾಜೇಶ್ವರಿನಗರ ವಾರ್ಡ್ (ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಇವರು ಸ್ವೀಕರಿಸಲಿಲ್ಲ)

---

ದೊಡ್ಡ ವಾರ್ಡ್‌ ನಮ್ಮದು. 25 ವರ್ಷಗಳಲ್ಲಿ ಆಗುವಷ್ಟು ಕಾಮಗಾರಿಯನ್ನು ನಾಲ್ಕೇ ವರ್ಷಗಳಲ್ಲಿ ಮಾಡಿಸಿದ್ದೇನೆ. 18 ಉದ್ಯಾನಗಳಲ್ಲಿ ವ್ಯಾಯಾಮ ಸಲಕರಣೆ ಅಳವಡಿಸಲಾಗಿದೆ. 6,000 ಬೀದಿದೀಪ ಅಳವಡಿಸಿದ್ದೇವೆ. ನ್ಯಾಯಾಲಯದಲ್ಲಿ ಮೊಕದ್ದಮೆ ಇರುವ ರಸ್ತೆ ಬಿಟ್ಟು ಉಳಿದ 442 ಕಿ.ಮೀ ರಸ್ತೆ ಅಭಿವೃದ್ಧಿ ಮಾಡುತ್ತಿದ್ದೇವೆ. ಬೀದಿನಾಯಿ ಹಿಡಿದರೆ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸುತ್ತಾರೆ. ಹಿಡಿಯದಿದ್ದರೆ ಜನ ಹಿಡಿಶಾಪ ಹಾಕುತ್ತಾರೆ. ಇದೊಂದು ಬಗೆಹರಿಯದ ಸಮಸ್ಯೆ.

– ಡಿ.ಜಿ.ತೇಜಸ್ವಿನಿ ಸೀತಾರಾಮಯ್ಯ, ಜ್ಞಾನಭಾರತಿ ವಾರ್ಡ್

ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ, ‘ಸದ್ಯ ಮಾತನಾಡಲು ನನಗೆ ಸಮಯವಿಲ್ಲ. ಇನ್ನೆರಡು ದಿನ ಬಿಟ್ಟು ಮಾತನಾಡುವೆ’ ಎಂದ– ಜಿ. ಮೋಹನ್ ಕುಮಾರ್, ಕೊಟ್ಟಿಗೆಪಾಳ್ಯ ವಾರ್ಡ್‌

---

ಹೊರವರ್ತುಲ ರಸ್ತೆ ದಾಟಲು ಪಾದಚಾರಿ ಸುರಂಗ ನಿರ್ಮಿಸಿದ್ದು ನಮ್ಮ ವಾರ್ಡ್‌ನಲ್ಲೇ ಮೊದಲು. ನಮ್ಮಲ್ಲಿ ಮೊದಲು ನೀರಿನ ಸಮಸ್ಯೆ ತೀವ್ರವಾಗಿತ್ತು. ಈಗ ಕಾವೇರಿ ಹಾಗೂ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ನಮ್ಮಲ್ಲಿ ಬಡವರು ಹಾಗೂ ನಿರಾಶ್ರಿತರು ಹೆಚ್ಚಿದ್ದಾರೆ. ಅವರಿಗೆ 2 ಸಾವಿರದಿಂದ 3 ಸಾವಿರ ಮನೆ ನಿರ್ಮಿಸಿಕೊಡುವ ಯೋಚನೆ ಇದೆ. ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಬಗ್ಗೆ ಅಧಿಕಾರಿಗಳು ಲೆಕ್ಕ ಮಾತ್ರ ಕೊಡುತ್ತಾರೆ. ಅವುಗಳ ನಿಯಂತ್ರಣ ದೊಡ್ಡ ಸಮಸ್ಯೆಯೇ ಆಗಿದೆ.

– ಎಂ.ವೇಲು ನಾಯ್ಕರ್, ಲಕ್ಷ್ಮಿದೇವಿನಗರ ವಾರ್ಡ್

ನಿವಾಸಿಗಳು ಹೇಳುವುದೇನು?

ರಸ್ತೆ ಹಾಳಾಗಿ ದೂಳು ವಿಪರೀತವಾಗಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಜನ ತುತ್ತಾಗುತ್ತಿದ್ದಾರೆ. ಎಷ್ಟೇ ದೂರು ಕೊಟ್ಟರೂ ಸ್ಪಂದಿಸುವವರಿಲ್ಲ

– ಅನುರಾಧಾ, ಐಡಿಯಲ್ ಹೋಮ್ಸ್ ನಿವಾಸಿ

ಬೀದಿನಾಯಿ ದಾಳಿಯಿಂದ ಗಾಯಗೊಂಡವರೆಲ್ಲ ಚುಚ್ಚುಮದ್ದು ಪಡೆದು ಸುಮ್ಮನಾಗುತ್ತಿದ್ದಾರೆ. ದೂರು ಕೊಟ್ಟರೂ ಬೀದಿನಾಯಿಗಳನ್ನು ಯಾರೂ ಹಿಡಿಯುತ್ತಿಲ್ಲ. ಮಕ್ಕಳು, ಹಿರಿಯರು ನಿತ್ಯವೂ ಭಯಪಡುತ್ತಿದ್ದಾರೆ.

– ಮನು, ಜ್ಞಾನಜ್ಯೋತಿನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT