ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಸಂವಿಧಾನ ವಿರೋಧಿಗಳ ಸೋಲಿಸಿ: ಎನ್.ಅನಂತನಾಯ್ಕ

Published 14 ಏಪ್ರಿಲ್ 2024, 16:23 IST
Last Updated 14 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುತ್ತಿದೆ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ ಹೇಳಿದರು.

ನಗರದಲ್ಲಿ ಭಾನುವಾರ ಸಮಸ್ತ ಬಂಜಾರ ಸಮುದಾಯ ಸಂಘಟನೆ, ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು

‘ಅಂಬೇಡ್ಕರ್ ಅವರ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಮಾತನಾಡಿ, ‘ಅಂಬೇಡ್ಕರ್ ಅವರ ಕೊಡುಗೆಯಿಂದಲೇ ಇಂದು ಬಂಜಾರ ಸಮುದಾಯಕ್ಕೆ ರಾಜ್ಯದಲ್ಲಿ ಸೂಕ್ತ ನ್ಯಾಯ ದೊರಕಿದೆ. ಅಂಬೇಡ್ಕರ್‌ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಕರೆ ನೀಡಿದರು.

ವಕೀಲ ಎನ್.ಅನಂತನಾಯ್ಕ ಮಾತನಾಡಿ, ‘ಬಿಜೆಪಿಯವರು ಸಂವಿಧಾನ ಬದಲಾಯಿಸುವ ಷಡ್ಯಂತರ ನಡೆಸುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವುದಕ್ಕೆ ನಾವು ಬಂದಿರುವುದು ಎಂದು ಹೇಳಿದ್ದ ಮುಖಂಡರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕು’ ಎಂದು ಕರೆ ನೀಡಿದರು.

‘ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದಿಂದ ನಮ್ಮ ಬದುಕಿಗೆ ಘನತೆ ಮತ್ತು ಸಮಾನತೆ ಲಭಿಸಿದೆ. ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ದೊರಕುತ್ತಿದೆ. ಸಂವಿಧಾನ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕು. ಅಂಬೇಡ್ಕರ್ ನಮಗೆ ಮಾದರಿಯಾಗಬೇಕು’ ಎಂದರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ‘ಸಂವಿಧಾನ ಉಳಿಸಿಕೊಳ್ಳುವ ಜವಾಬ್ದಾರಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ಮೇಲಿದೆ. ಲೋಕಸಭಾ ಚುನಾವಣೆ, ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ ಆಗಿದೆ. ಸಂವಿಧಾನ ವಿರೋಧಿಗಳನ್ನು ಸೋಲಿಸುವ ಮೂಲಕ ಬುದ್ಧಿಕಲಿಸಿ’ ಎಂದು ಹೇಳಿದರು.

ಮುಖಂಡರಾದ ರಾಜಾನಾಯ್ಕ, ದರ್ಶನ್ ರುದ್ರಪ್ಪ ಲಮಾಣಿ, ಗೋವಿಂದಸ್ವಾಮಿ, ಸೀತಾರಾಮ್ ನಾಯ್ಕ, ಶೈಲಾ ಬಾಯಿ, ಹರೀಶ್ ಲಂಬಾಣಿ, ರುದ್ರು ಪುನೀತ್ ಅನಿಲ್ ರಾಠೋಡ್, ವಿಜಯ್ ಜಾಧವ್, ಅರುಣ್ ರಾಥೋಡ್, ರೇಷ್ಮಾ ಬಾಯಿ, ದಿಲೀಪ್ ರಾಠೋಡ್, ಈಶ್ವರ್ ಅಭಿವ್ಯಕ್ತಿ, ಲಕ್ಷಣ ರಾಮಾವತ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT