ಭಾನುವಾರ, ಸೆಪ್ಟೆಂಬರ್ 19, 2021
29 °C
ಅಂತಿಮ ಅಧಿಸೂಚನೆ ಪ್ರಕಟಣೆಗೆ ಕೇಂದ್ರಕ್ಕೆ ವರದಿ ಸಲ್ಲಿಸಿ: ಎಸಿಎಸ್‌ಗೆ ವನ್ಯಜೀವಿ ವಾರ್ಡನ್‌ ಪತ್ರ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಇಎಸ್‌ಜೆಡ್‌ ಕಡಿತ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ (ಇಎಸ್‌ಜೆಡ್‌) ವ್ಯಾಪ್ತಿ ಕಡಿತಗೊಳಿ‌ಸುವಂತೆ ಸಂಪುಟ ಉಪಸಮಿತಿ ಕೈಗೊಂಡ ನಿರ್ಣಯದ ಪ್ರಕಾರ ಅಂತಿಮ ಅಧಿಸೂಚನೆ ಹೊರಡಿಸಲು ಕೇಂದ್ರ ಪರಿಸರ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ವನ್ಯಜೀವಿ ವಾರ್ಡನ್‌ ಸಂಜಯ್‌ ಮೋಹನ್‌ ಶಿಫಾರಸು ಮಾಡಿದ್ದಾರೆ. 

ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ಅವರಿಗೆ ವನ್ಯಜೀವಿ ವಾರ್ಡನ್‌ ಬರೆದಿರುವ ಈ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವನ್ಯಜೀವಿ ಕಾರ್ಯಕರ್ತರು, ‘ಅರಣ್ಯ ಅಧಿಕಾರಿ ಕಾಡಿನ ಹಾಗೂ ಕಾಡುಪ್ರಾಣಿಗಳ ಹಿತ ಕಾಯಬೇಕೇ ಹೊರತು ಅರಣ್ಯಕ್ಕೆ ಕುತ್ತು ತರುವ ನಿರ್ಧಾರವನ್ನು ಪ್ರೋತ್ಸಾಹಿಸಬಾರದು’ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸಚಿವಾಲಯವು ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಇಎಸ್‌ಜೆಡ್ ವ್ಯಾಪ್ತಿಯನ್ನು 268.96 ಚದರ ಕಿ.ಮೀಯಿಂದ 168.84 ಕಿ.ಮೀ.ಗೆ ಇಳಿಸುವ ಕುರಿತು 2018ರ ನವೆಂಬರ್‌ 2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಇದು ಜಾರಿಯಾಗಿದ್ದೇ ಆದರೆ, ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶಕ್ಕೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಕನಿಷ್ಠ 100 ಮೀಟರ್‌ಗಳಿಂದ ಗರಿಷ್ಠ 1 ಕಿ.ಮೀ ವ್ಯಾಪ್ತಿಯಷ್ಟು ಪರಿಸರ ಸೂಕ್ಷ್ಮ ಪ್ರದೇಶ ಮಾತ್ರ ಉಳಿದುಕೊಳ್ಳುತ್ತಿತ್ತು. ಇದಕ್ಕೆ ಪರಿಸರ ಕಾರ್ಯಕರ್ತರು ಆಕ್ಷೇ‍ಪ ವ್ಯಕ್ತಪಡಿಸಿದ್ದರು.

ಜನ ವಿರೋಧವನ್ನು ಲೆಕ್ಕಿಸದ ಕೇಂದ್ರ ಇಎಸ್‌ಜೆಡ್‌ ತಜ್ಞರ ಸಮಿತಿ 2019ರ ಫೆ. 28ರಂದು ನಡೆಸಿದ ಸಭೆಯಲ್ಲಿ ಕರಡು ಅಧಿಸೂಚನೆಗೆ ಅನುಮೋದನೆ ನೀಡುವ ತೀರ್ಮಾನ ಕೈಗೊಂಡಿತ್ತು.

ಈ ನಡುವೆ, ಪರಿಸರ ಕಾರ್ಯಕರ್ತರು ಆಗಿನ ಕೇಂದ್ರ ಪರಿಸರ ಸಚಿವ ಹರ್ಷವರ್ಧನ ಅವರನ್ನು ಭೇಟಿ ಮಾಡಿ, ಇಎಸ್‌ಜೆಡ್‌ ವ್ಯಾಪ್ತಿ ಕುಗ್ಗಿಸದಂತೆ ಒತ್ತಾಯಿಸಿದ್ದರು. ಸಂಸದ ಪಿ.ಸಿ.ಮೋಹನ್‌ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಒತ್ತಾಯದ ಮೇರೆಗೆ ಸಮಿತಿಯ ನಿರ್ಣಯವನ್ನು ಕೇಂದ್ರ ಸಚಿವಾಲಯ ತಡೆಹಿಡಿದಿತ್ತು.

ಆ.20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಸಚಿವಾಲಯದ ನಿರ್ದೇಶಕ ಡಾ.ಸುಬ್ರತಾ ಬೋಸ್‌, ಇಎಸ್‌ಜೆಡ್‌ ವ್ಯಾಪ್ತಿಯನ್ನು ಮೂಲ ಪ್ರಸ್ತಾವನೆಯಲ್ಲಿರುವಷ್ಟೇ ಉಳಿಸಿಕೊಳ್ಳುವಂತೆ ಕೋರಿದ್ದರು. ಈ ಕುರಿತು ಸ್ಪಷ್ಟ ಅಭಿಪ್ರಾಯ ನೀಡುವಂತೆ ಕೋರಿ ಅರಣ್ಯ ಇಲಾಖೆಯ ಎಸಿಎಸ್‌ ಸೆ.16ರಂದು ವನ್ಯಜೀವಿ ವಾರ್ಡನ್‌ಗೆ ಪತ್ರ ಬರೆದಿದ್ದರು.

ಇದಕ್ಕೆ 2019ರ ಅ. 25ರಂದು ಪ್ರತಿಕ್ರಿಯಿಸಿದ್ದ ‌ಸಂಜಯ್‌ ಮೋಹನ್‌, ‘2017ರ ಫೆ 10ರಂದು ಸಂಪುಟ ಉಪಸಮಿತಿ ಇಎಸ್‌ಜೆಡ್‌ನ ವ್ಯಾಪ್ತಿಯನ್ನು 168.84 ಚದರ ಕಿ.ಮೀ ಸೀಮಿತಗೊಳಿಸುವ ನಿರ್ಣಯ ಕೈಗೊಂಡಿದೆ. ಕರ್ನಾಟಕ ಲಘು ಖನಿಜ ರಿಯಾಯಿತಿ ನಿಯಮ 1960ರ ಪ್ರಕಾರ ರಾಷ್ಟ್ರೀಯ ಉದ್ಯಾನದ ಸುತ್ತ 1 ಕಿ.ಮೀ ಪ್ರದೇಶವನ್ನು ಸುರಕ್ಷಿತ ವಲಯ ಎಂದು ಗುರುತಿಸಿ ರಾಜ್ಯ ಸರ್ಕಾರ 1991ರಲ್ಲೇ ಅಧಿಸೂಚನೆ ಹೊರಡಿಸಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ. ಹಾಗಾಗಿ, ರಾಷ್ಟ್ರೀಯ ಉದ್ಯಾನದ ಸುತ್ತಲೂ ಕನಿಷ್ಠ ವ್ಯಾಪ್ತಿಯಷ್ಟು ಇಎಸ್‌ಜೆಡ್‌ ನಿರ್ವಹಣೆ ಮಾಡುವುದು ಕಷ್ಟ. ಈ ಪ್ರಸ್ತಾವದ ವಿಚಾರದಲ್ಲಿ ಸಂಪುಟ ಉಪ ಸಮಿತಿಯ ನಿರ್ಣಯದಲ್ಲಿ ಮಾರ್ಪಾಡು ಮಾಡುವ ಅಗತ್ಯ ಇಲ್ಲ. ಈ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಜಯ್‌ ಮೋಹನ್‌, ‘ಸಂಪುಟ ಉಪಸಮಿತಿಯ ನಿರ್ಣಯವನ್ನು ಹೊಸ ಸರ್ಕಾರ ಬದಲಾಯಿಸಿಲ್ಲ. ಹಿಂದಿನ ಸಂಪುಟ ಉಪಸಮಿತಿಯ ನಿರ್ಣಯದಂತೆ ಕ್ರಮ ಕೈಗೊಳ್ಳುವಂತೆ ಕೋರಿ ಎಸಿಎಸ್‌ಗೆ ಪತ್ರ ಬರೆದಿದ್ದೇನೆ. ಇದು ನನ್ನ ನಿರ್ಧಾರ ಅಲ್ಲ’ ಎಂದರು.

‘ಇಎಸ್‌ಜೆಡ್‌ ಕಡಿತ– ಅರ್ಥವಿಲ್ಲದ ಕ್ರಮ’
‘ಈ ಪತ್ರದಲ್ಲಿ ವನ್ಯಜೀವಿ ವಾರ್ಡನ್‌ ನಮೂದಿಸಿರುವ ಕಾರಣ ಸರಿ ಇಲ್ಲ. 2016ರ ಅಧಿಸೂಚನೆ ಹಾಗೂ 2018ರ ಅಧಿಸೂಚನೆಗಳೆರಡರ ಪ್ರಕಾರವೂ ರಾಷ್ಟ್ರೀಯ ಉದ್ಯಾನದ ಬೆಂಗಳೂರು ನಗರದ ಕಡೆಯಲ್ಲಿ 1 ಕಿ.ಮೀ. ಇಎಸ್‌ಜೆಡ್‌ ಮಾತ್ರ ಇದೆ. 2016ರ ಅಧಿಸೂಚನೆಯಂತೆ ರಾಷ್ಟ್ರೀಯ ಉದ್ಯಾನದ ದಕ್ಷಿಣ ಭಾಗದಲ್ಲಿ ಕಾವೇರಿ ಉತ್ತರ ವನ್ಯಜೀವಿಧಾಮ (ತಮಿಳುನಾಡು) ಹಾಗೂ ಕಾವೇರಿ ವನ್ಯಜೀವಿಧಾಮ (ಕರ್ನಾಟಕ) ಪ್ರದೇಶದಲ್ಲಿ 4.5 ಕಿ.ಮೀ ಇಎಸ್‌ಜೆಡ್‌ ಇತ್ತು. ಆಗಲೂ ಬೆಂಗಳೂರು ಇತ್ತು.  ಬೆಂಗಳೂರಿಗೆ ಸಮೀಪದಲ್ಲಿದೆ ಎಂಬ ಕಾರಣಕ್ಕೆ ಇಎಸ್‌ಜೆಡ್‌ ಪ್ರಮಾಣ ಕಡಿತ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ’ವೈಲ್ಡ್‌ಲೈಫ್‌ ಫರ್ಸ್ಟ್‌’ನ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ಅಭಿಪ್ರಾಯಪಟ್ಟರು. 

‘ಸಂವಿಧಾನದ ನಿರ್ದೇಶಕ ತತ್ವಗಳ ಪ್ರಕಾರ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಸಂವಿಧಾನಬದ್ಧ ಕರ್ತವ್ಯ. ಇಎಸ್‌ಜೆಡ್‌ ಕಡಿತ ಮಾಡಿದರೆ ಆನೆ ಕಾರಿಡಾರ್‌ಗೆ ಧಕ್ಕೆ ಉಂಟಾಗುತ್ತದೆ. ಸಂಪುಟ ಉಪಸಮಿತಿಗೂ ಸಂವಿಧಾನಾತ್ಮಕ ಕರ್ತವ್ಯಗಳಿರುತ್ತವೆ. ಇಎಸ್‌ಜೆಡ್‌ ಕಡಿತ ಮಾಡುವ ಪ್ರಸ್ತಾವವನ್ನು ಸರ್ಕಾರ ಮರುಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಬೇಲಿಯೇ ಎದ್ದು ಹೊಲ ಮೇಯುತ್ತಿದೆ’
‘ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಡಿನ ಹಾಗೂ ವನ್ಯಜೀವಿಗಳ ರಕ್ಷಣೆ ಆದ್ಯತೆಯ ವಿಚಾರ ಆಗಬೇಕಿತ್ತು. ಆದರೆ, ಅವರು ಈ ಬಗ್ಗೆ ಒಂಚೂರು ಕಾಳಜಿ ‍ಪ್ರದರ್ಶಿಸುತ್ತಿಲ್ಲ. ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ. ನಾವು ಈ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಇಂಡಲವಾಡಿ ಗ್ರಾಮದ ಕೃಷಿಕ ಶ್ರೀನಿವಾಸ ಬಿ.‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ಕಡಿತ ಮಾಡಿದರೆ ಇಲ್ಲಿ ಜನವಸತಿ ಹೆಚ್ಚಲಿದೆ. ಕ್ರಮೇಣ ಬೆಂಗಳೂರು ನಗರದ ಮಾಲಿನ್ಯ ಹೆಚ್ಚಳಕ್ಕೂ ಇದು ಕಾರಣವಾಗಲಿದೆ’ ಎಂದು ಅವರು ಎಚ್ಚರಿಸಿದರು.

ಅಂಕಿ ಅಂಶ
268.96 ಚದರ ಕಿ.ಮೀ: 
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದ ವಿಸ್ತೀರ್ಣ (ಮೂಲ ಪ್ರಸ್ತಾವನೆಯಂತೆ)
16: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಗ್ರಾಮಗಳು 
77: ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯ ಗ್ರಾಮಗಳು

**
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ಕಡಿತ ಮಾಡಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ
– ಪಿ.ಸಿ.ಮೋಹನ್‌, ಸಂಸದ

**

ಇಎಸ್‌ಜೆಡ್‌ ಕಡಿತ ಮಾಡುವ ನಿರ್ಧಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಯೇ ಇಲಾಖೆಯ ಆದ್ಯತೆ
–ಸಿ.ಸಿ.ಪಾಟೀಲ, ಪರಿಸರ ಮತ್ತು ಅರಣ್ಯ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು