ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಾಮಾಚಾರ' ನೆಪದಲ್ಲಿ ₹4.41 ಕೋಟಿ ವಂಚನೆ

ಬಸವನಗುಡಿ ಪೊಲೀಸರಿಂದ ಮಹಿಳೆ ಸೇರಿ ಇಬ್ಬರ ಬಂಧನ
Last Updated 5 ಅಕ್ಟೋಬರ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಮಾಚಾರ ಮಾಡಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂಬುದಾಗಿ ಹೇಳಿ ಪೂಜೆ ನೆಪದಲ್ಲಿ ₹ 4.41 ಕೋಟಿ ಪಡೆದು ವಂಚಿಸಿರುವ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

‘ತ್ಯಾಗರಾಜನಗರದ ನಿವಾಸಿ ಗೀತಾ ಗುರುದೇವ್ ಎಂಬುವರು ತಮಗಾದ ವಂಚನೆ ಬಗ್ಗೆ ದೂರು ನೀಡಿದ್ದರು. ಆರೋಪಿಗಳಾದ ಜಯಶ್ರೀ ಹಾಗೂ ರಾಕೇಶ್‌ ಎಂಬುವರನ್ನು ಬಂಧಿಸಲಾಗಿದೆ. ಅವರಿಬ್ಬರಿಂದ 1 ಕೆ.ಜಿ‌ ಚಿನ್ನ ಹಾಗೂ ₹ 10 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರಾದ ಗೀತಾ ಅವರ ಮನೆಯ ಕೆಲಸಕ್ಕಾಗಿ ಆರೋಪಿ ಜಯಶ್ರೀ ಆಗಾಗ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಕಷ್ಟಗಳನ್ನು ಗೀತಾ, ಆರೋಪಿ ಬಳಿ ಹೇಳಿಕೊಳ್ಳುತ್ತಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಜಯಶ್ರೀ, ಇತರೆ ಆರೋಪಿಗಳ ಜೊತೆ ಸೇರಿ ಗೀತಾ ಅವರನ್ನು ವಂಚಿಸಿದ್ದಳು. ಇಬ್ಬರು ಆರೋಪಿಗಳು ಮಾತ್ರ ಸಿಕ್ಕಿಬಿದ್ದಿದ್ದು, ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ರಕ್ತಕಾರಿ ಸಾಯುವುದಾಗಿ ಭಯ ಹುಟ್ಟಿಸಿದ್ದಳು: ‘ಗೀತಾ ಅವರ ಮುಗ್ಧತೆ ತಿಳಿದಿದ್ದ ಆರೋಪಿ ಜಯಶ್ರೀ, ‘ನಿಮ್ಮ ಸಮಸ್ಯೆಗಳಿಗೆ ನನ್ನ ಬಳಿ ಪರಿಹಾರವಿದೆ. ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಅದರಿಂದ ಬಚಾವಾಗಬೇಕಾದರೆ ವಾಮಾಚಾರ ಮಾಡಿಸಬೇಕು’ ಎಂದಿದ್ದಳು. ‘ಶೀಘ್ರವೇ ವಾಮಾಚಾರ ಮಾಡಿಸದಿದ್ದರೆ, ನೀವು ಹಾಗೂ ನಿಮ್ಮ ಮನೆಯವರು ರಕ್ತಕಾರಿ ಸಾಯುತ್ತಿರಾ’ ಎಂಬುದಾಗಿಯೂ ಭಯ ಹುಟ್ಟಿಸಿದ್ದಳು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಾತು ನಂಬಿದ್ದ ಗೀತಾ, ವಾಮಾಚಾರ ಮಾಡಿಸಲು ಒಪ್ಪಿಕೊಂಡಿದ್ದರು. ಆರೋಪಿ ರಾಕೇಶ್ ಹಾಗೂ ಇತರರನ್ನು ಮನೆಗೆ ಕರೆಸಿದ್ದ ಜಯಶ್ರೀ, ವಾಮಾಚಾರ ಮಾಡಲು ಹೇಳಿದ್ದಳು. ಕೆಲ ವಸ್ತುಗಳನ್ನು ತಂದಿದ್ದ ಆರೋಪಿಗಳು, ಮನೆಯ ಮೂಲೆಯಲ್ಲಿಟ್ಟು ಪೂಜೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ₹ 1.42 ಕೋಟಿ ಪಡೆದುಕೊಂಡು ಹೋಗಿದ್ದರು.’

‘ಮೊದಲ ಪೂಜೆಯಿಂದ ಸಮಸ್ಯೆಗಳು ಪರಿಹಾರವಾಗಿರಲಿಲ್ಲ. ಆಗ ಜಯಶ್ರೀ, ಎರಡ್ಮೂರು ಬಾರಿ ಆರೋಪಿಗಳನ್ನು ಕರೆಸಿ ವಾಮಾಚಾರ ಮಾಡಿಸಿದ್ದಳು. ಆರೋಪಿಗಳು ಹಂತ ಹಂತವಾಗಿ ಗೀತಾ ಅವರಿಂದ ಒಟ್ಟು ₹ 4.41 ಕೋಟಿ ಪಡೆದುಕೊಂಡಿದ್ದರು. ಆರೋಪಿಗಳು ನೀಡಿದ್ದ 13 ಬ್ಯಾಂಕ್ ಖಾತೆಗಳಿಗೆ ಗೀತಾ ಹಣ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ಹಣ ವಾಪಸು ಕೇಳಿದ್ದಕ್ಕೆ ಜೀವ ಬೆದರಿಕೆ: ‘ವಾಮಾಚಾರ ಮಾಡಿದ ಬಳಿಕವೂ ಸಮಸ್ಯೆಗಳು ಪರಿಹಾರ ಆಗಿರಲಿಲ್ಲ. ಅನುಮಾನಗೊಂಡ ಗೀತಾ, ಪತಿಗೆ ವಿಷಯ ತಿಳಿಸಿದ್ದರು. ಆರೋಪಿಗಳ ಮನೆಗೆದಂಪತಿ ಹೋಗಿ ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ನೀಡುವುದಿಲ್ಲವೆಂದು ಹೇಳಿದ್ದ ಆರೋಪಿಗಳು, ದಂಪತಿಗೆ ಜೀವ ಬೆದರಿಕೆಯೊಡ್ಡಿದ್ದರು. ಹಲ್ಲೆ ಸಹ ಮಾಡಿದ್ದರು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT