ಶನಿವಾರ, ಮೇ 15, 2021
28 °C
ಬಿಬಿಎಂಪಿ– ಪೊಲೀಸ್‌ ಅಧಿಕಾರಿಗಳ ಜಂಟಿ ಕಾರ್ಯಚರಣೆ

ಬೆಂಗಳೂರು: 4 ಸಾವಿರ ಹಾಸಿಗೆಗಾಗಿ ಖಾಸಗಿ ಆಸ್ಪತ್ರೆಗಳ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ರೋಗಿಗಳಿಗಾಗಿ ನಗರದ ಎಂಟು ವಲಯಗಳಲ್ಲಿರುವ ಖಾಸಗಿ ಆಸ್ಪತ್ರೆಗಳಿಂದ 4 ಸಾವಿರ ಹಾಸಿಗೆಗಳನ್ನು ಪಡೆಯಲು ಬಿಬಿಎಂಪಿ ಮತ್ತು ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಒಟ್ಟು 11 ಸಾವಿರ ಹಾಸಿಗೆಗಳ ಪೈಕಿ ಈಗಾಗಲೇ 7 ಸಾವಿರ ಹಾಸಿಗೆಗಳನ್ನು ಪಡೆಯಲಾಗಿದೆ. ಉಳಿದ 4 ಸಾವಿರ ಹಾಸಿಗೆ ಪಡೆಯಲು ಗುರುವಾರದಿಂದಲೇ ಅಧಿಕಾರಿಗಳು ತಪಾಸಣೆ ಮೂಲಕ ಕ್ರಮವಹಿಸಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ಪಂತ್‌ ಹಾಗೂ ಡಿಸಿಪಿಗಳ ಜತೆ ವಿಡಿಯೋ ಸಂವಾದದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನಗರದ ಎಂಟು ವಲಯಗಳ ಬಿಬಿಎಂಪಿ ಜಂಟಿ ಆಯುಕ್ತರು ಮತ್ತು ಎಲ್ಲ ಡಿಸಿಪಿಗಳು ಆಸ್ಪತ್ರೆಗಳಿಗೆ ಹೋಗಿ ಹಾಸಿಗೆಗಳ ಲಭ್ಯತೆ ಬಗ್ಗೆ ತಪಾಸಣೆ ನಡೆಸಿ, ಆದಷ್ಟು ವೈದ್ಯಕೀಯ ಆಮ್ಲಜನಕ ಇರುವ ಹಾಸಿಗೆಗಳನ್ನು ಪಡೆಯಲು ಕ್ರಮವಹಿಸಲಿದ್ದಾರೆ. ಆಸ್ಪತ್ರೆಗಳಲ್ಲಿ ಏನಾದರೂ ಕೊರತೆ ಇದ್ದರೆ, ಅದನ್ನು ಪರಿಹರಿಸಲೂ ಕ್ರಮ ಕೈಗೊಳ್ಳಲಿದ್ದಾರೆ. ಮೂರು ದಿನಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.

ನಗರದಲ್ಲಿ ಆಂಬ್ಯುಲೆನ್ಸ್‌ ಸಂಖ್ಯೆಯನ್ನೂ 850 ರಿಂದ 1,250 ಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್‌ ಸಿಬ್ಬಂದಿಗೆ ಕೊರೊನಾದಿಂದ ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಪೊಲೀಸ್‌ ಠಾಣೆಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

 ನೋಡಲ್‌ ಅಧಿಕಾರಿಗಳೇ ಹೊಣೆ: ಬಿ.ಎಸ್‌. ಯಡಿಯೂರಪ್ಪ
‘ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಯ ಸಂಪೂರ್ಣ ಹೊಣೆ ಆಯಾ ವಲಯದ ನೋಡಲ್ ಅಧಿಕಾರಿಗಳದ್ದು. ಎಲ್ಲ ಸಮಸ್ಯೆಗಳಿಗೆ ಅವರು ಸ್ಪಂದಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕೋವಿಡ್ ಎರಡನೇ ಅಲೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಅವಲೋಕಿಸಲು ಸಂಪುಟದ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ಗುರುವಾರ ಅವರು ವರ್ಚುವಲ್ ಸಭೆ ನಡೆಸಿದರು.

‘ಚಿತಾಗಾರಗಳಿಗೆ ಶವ ಸಾಗಿಸುವ ಆಂಬುಲೆನ್ಸ್‌ಗಳು ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವುದರಿಂದ ಶವಗಳನ್ನು ಸಾಗಿಸಲು ಆಂಬುಲೆನ್ಸ್‌ಗಳ ಕೊರತೆ ಉಂಟಾಗುತ್ತಿದೆ. ಶವಗಳನ್ನು ಇರಿಸಲು ಚಿತಾಗಾರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಕೋವಿಡ್ ನಿರ್ವಹಣೆಗೆ ಸ್ವಯಂ ಸೇವಕರ ನೆರವು ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಚಿಕಿತ್ಸೆ, ಟೆಲಿ ಕನ್ಸಲ್ಟೇಷನ್ ಒದಗಿಸಿ, ನಿಗಾ ವಹಿಸಬೇಕು. ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬೆಡ್‌ಗಳನ್ನು ಒದಗಿಸುವುದನ್ನು ಖಾತರಿ ಪಡಿಸಬೇಕು. ಆಯಾ ವಲಯಗಳ ಡಿಸಿಪಿಗಳು ಆಸ್ಪತ್ರೆಗಳಿಗೆ ತೆರಳಿ ಪರಿಶೀಲಿಸಬೇಕು. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಸ್ಥೈರ್ಯ ತುಂಬಬೇಕು’ ಎಂದೂ ಅವರು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು