ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ₹100 ಕೋಟಿ ಬಾಡಿಗೆ, ತೆರಿಗೆ ವಸೂಲಿ ಬಾಕಿ

ಕಡಿಮೆ ದರಕ್ಕೆ ಗುತ್ತಿಗೆ; ಷರತ್ತು ಉಲ್ಲಂಘಿಸಿದ್ದರೂ ಬಿಬಿಎಂಪಿಯಿಂದ ಕ್ರಮವಿಲ್ಲ
Published 24 ಜೂನ್ 2024, 20:32 IST
Last Updated 24 ಜೂನ್ 2024, 20:32 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಮಳಿಗೆಗಳು ಹಾಗೂ ಸಂಸ್ಥೆಗಳು ಆಸ್ತಿ ತೆರಿಗೆ ಪಾವತಿಸಿಲ್ಲವೆಂದು ಬೀಗ ಹಾಕುತ್ತಿರುವ ಬಿಬಿಎಂಪಿ, ತನ್ನದೇ ಆಸ್ತಿ, ಮಳಿಗೆ, ಮಾರುಕಟ್ಟೆಗಳಿಗೆ ಬಾಡಿಗೆ ರೂಪದಲ್ಲಿ ಬಾಕಿಯಿರುವ ₹100 ಕೋಟಿಗೂ ಅಧಿಕ ಮೊತ್ತವನ್ನು ವಸೂಲಿ ಮಾಡಿಲ್ಲ.

ಪಾಲಿಕೆ ಸ್ವತ್ತುಗಳನ್ನು ಬಾಡಿಗೆ ಅಥವಾ ಗುತ್ತಿಗೆಗೆ ಪಡೆದಿರುವ ಸಂಸ್ಥೆಗಳು ಗುತ್ತಿಗೆಯ ಷರತ್ತುಗಳನ್ನು ಮೀರಿ ಉಪ ಗುತ್ತಿಗೆಗೆ ನೀಡಿ, ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಹಲವು ಗುತ್ತಿಗೆಗಳ ಅವಧಿ ಮುಗಿದಿದ್ದರೂ ನವೀಕರಿಸಿಲ್ಲ. ಆದರೂ ಸಂಸ್ಥೆಗಳು ಅವುಗಳ ಲಾಭ ಪಡೆಯುತ್ತಿವೆ. ಉಪ ಕಂದಾಯ ಅಧಿಕಾರಿಗಳು ನೋಟಿಸ್‌ ಅಷ್ಟೇ ನೀಡಿದ್ದಾರೆ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿದೆ.

ಬಿಬಿಎಂಪಿಯ ಮುಖ್ಯ ಲೆಕ್ಕ ಪರಿಶೋಧಕರು 2021–22ನೇ ಸಾಲಿನ ಕ್ರೋಢೀಕೃತ ಲೆಕ್ಕ ಪರಿಶೋಧನಾ ವರದಿಯಲ್ಲಿ ಪಾಲಿಕೆ ವಸೂಲಿ ಮಾಡಬೇಕಿರುವ ಬಾಕಿ ಮೊತ್ತ ಹಾಗೂ ಆರ್ಥಿಕ ನಷ್ಟವನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ.

ಬಿಬಿಎಂಪಿ ಮಾಲೀಕತ್ವದ ಜಮೀನು, ಆಸ್ತಿ ಹಾಗೂ ಸ್ವತ್ತುಗಳನ್ನು ದೀರ್ಘಕಾಲಕ್ಕೆ ಗುತ್ತಿಗೆ ಅಥವಾ ಬಾಡಿಗೆಗೆ ನೀಡಿದ್ದು, ಹಲವು ವರ್ಷಗಳಿಂದ ಬಾಡಿಗೆ ಪಾವತಿಯಾಗಿಲ್ಲ. ಪಾಲಿಕೆಯ 3,855 ಆಸ್ತಿಗಳಲ್ಲಿ 372 ಆಸ್ತಿಗಳನ್ನು ಗುತ್ತಿಗೆ/ ಬಾಡಿಗೆಗೆ ನೀಡಲಾಗಿದೆ. ಅವುಗಳಲ್ಲಿ 145 ಆಸ್ತಿಗಳ ವಿವರ ಮಾತ್ರ ಚಾಲ್ತಿಯಲ್ಲಿವೆ. ಬಹುತೇಕ ಆಸ್ತಿಗಳನ್ನು 3 ರಿಂದ 100 ವರ್ಷಗಳವರೆಗೆ ಅತಿ ಕಡಿಮೆ ದರಕ್ಕೆ ಗುತ್ತಿಗೆ ಅಥವಾ ಬಾಡಿಗೆಗೆ ನೀಡಲಾಗಿದೆ. ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡು, ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ಸೋರಿಕೆ ತಡೆಗಟ್ಟುವ ಅಗತ್ಯವಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪಾಲಿಕೆಯ ಸ್ಥಿರಾಸ್ತಿಗಳನ್ನು ಬಾಡಿಗೆ ಹಾಗೂ ಗುತ್ತಿಗೆಗೆ ನೀಡಲಾಗಿದ್ದು, ಆರು ಸಂಸ್ಥೆಗಳಿಂದ ಬಾಕಿ ವಸೂಲಿ ಮಾಡಿಲ್ಲ. ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌ ಉಪವಿಭಾಗ ವ್ಯಾಪ್ತಿಯಲ್ಲಿ ಗರುಡಾಮಾಲ್‌ ತ್ರೈಮಾಸಿಕ ಮೊತ್ತ ₹3.27 ಕೋಟಿಯನ್ನು ಪಾವತಿಸಿಲ್ಲ. ಹೆಬ್ಬಾಳದಲ್ಲಿ ನಗರ ಕೇಂದ್ರ ಗ್ರಂಥಾಲಯದಿಂದ ₹1.29 ಕೋಟಿ ಬಾಡಿಗೆ ನೀಡಿಲ್ಲ.

‘ನಮ್ಮ ಮೆಟ್ರೊ’ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡರುವ ಸ್ವತ್ತುಗಳಿಂದ ₹1.46 ಕೋಟಿ ಕಂದಾಯವನ್ನು ಪಾಲಿಕೆ ವಸೂಲಿ ಮಾಡಿಲ್ಲ. ಶಿವಾಜಿನಗರ, ಜಯನಗರ, ಜೆ.ಪಿ.ನಗರ, ವಿಜಯನಗರ, ಯಲಚೇನಹಳ್ಳಿ, ದಾಸರಹಳ್ಳಿ ಉಪವಿಭಾಗದಲ್ಲಿ ಬಾಕಿ ಉಳಿದಿದೆ.

ಜಯನಗರದ ವಾಣಿಜ್ಯ ಸಂಕೀರ್ಣದಲ್ಲಿರುವ ಬಿಎಸ್‌ಎನ್‌ಎಲ್‌, ಕರ್ನಾಟಕ ರಾಜ್ಯ ಹಣಕಾಸು ನಿಗಮ, ನ್ಯಾಷನಲ್‌ ಟೆಕ್ಸ್‌ಟೈಲ್ಸ್‌ ಕಾರ್ಪೊರೇಷನ್‌, ಲಿಡ್ಕರ್‌ ನಿಗಮ, ಮಹಾರಾಜ ಕೋಲ್ಡ್‌ ಸ್ಟೋರೇಜ್‌ಗಳು ₹9.42 ಕೋಟಿಯಷ್ಟು ಬಾಡಿಗೆ ಉಳಿಸಿಕೊಂಡಿವೆ.

ಶಾಲೆ ಕಲ್ಯಾಣ ಮಂಟಪ ಆಸ್ಪತ್ರೆಗಳಿಂದ ₹22 ಕೋಟಿ ಬಾಕಿ

ಬಿಬಿಎಂಪಿಯ ಜಯನಗರ ಹಾಗೂ ಕೊಡಿಗೆಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಶಾಲೆ–ಕಾಲೇಜುಗಳು ಅತಿಹೆಚ್ಚು ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ. ವಿದ್ಯಾರಣ್ಯಪುರ ಹೊರಮಾವು ಉಪ ವಿಭಾಗದಲ್ಲೂ ಬಾಕಿ ಹೆಚ್ಚಿದೆ. ಕಲ್ಯಾಣ ಮಂಟಪ ಪಾರ್ಟಿ ಹಾಲ್‌ ಹೋಟೆಲ್‌ ಪಿ.ಜಿ ಹಾಸ್ಟಲ್‌ ಆಸ್ಪತ್ರೆ ನರ್ಸಿಂಗ್ ಹೋಂ ಚಿತ್ರಮಂದಿರಗಳು ಮತ್ತು ಕೈಗಾರಿಕೆ ಕಟ್ಟಡಗಳೂ ₹13 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿವೆ. ಗಾಂಧಿನಗರ ಉಪವಿಭಾಗದಲ್ಲಿರುವ ಮಾಲ್‌ಗಳಿಂದ ₹6.77 ಕೋಟಿ ತೆರಿಗೆ ಬಾಕಿ ಇದ್ದರೆ ಚಿತ್ರಮಂದಿರಗಳಿಂದ ₹5.79 ಲಕ್ಷ ಬಾಕಿ ಉಳಿದಿದೆ. ಜಯನಗರದಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ₹3.87 ಕೋಟಿ ತೆರಿಗೆ ಬಾಕಿ ವಸೂಲಿಯಾಗಿಲ್ಲ.

ಸರ್ಕಾರಿ ಕಟ್ಟಡಗಳಿಂದ ₹17 ಕೋಟಿ ಬಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳು ತೆರಿಗೆ ಹಾಗೂ ಸೇವಾ ಶುಲ್ಕವನ್ನು 2016–2019ರಂತೆ ಬಿಬಿಎಂಪಿ ವಸೂಲಿ ಮಾಡಿಲ್ಲ. 2022ರ ಮಾರ್ಚ್‌ ಅಂತ್ಯಕ್ಕೆ ₹17 ಕೋಟಿಗೂ ಹೆಚ್ಚು ಮೊತ್ತ ಬಾಕಿ ಉಳಿದಿದೆ. ಪಾಲಿಕೆಯ ವಿದ್ಯಾರಣ್ಯಪುರ ಉಪ ವಿಭಾಗದಲ್ಲಿ ಈ ಬಾಬ್ತಿನಲ್ಲಿ ಅತಿಹೆಚ್ಚು (₹4.01 ಕೋಟಿ) ಬಾಕಿ ಉಳಿದಿದೆ. ಯಲಹಂಕ ಓಲ್ಡ್‌ ಟೌನ್‌ ಉಪವಿಭಾಗದಲ್ಲಿ ₹2.67 ಕೋಟಿ ವಸಂತನಗರ ಉಪವಿಭಾಗದಲ್ಲಿ ₹2.04 ಕೋಟಿ ಹೊಂಬೇಗೌಡನಗರ ಉಪವಿಭಾಗದಲ್ಲಿ ₹1.69ಕೋಟಿ ಹಾಗೂ ಎಚ್‌ಬಿಆರ್‌ ಲೇಔಟ್‌ ಉಪವಿಭಾಗದಲ್ಲಿ ₹1.18 ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿದೆ.

ಮಾರುಕಟ್ಟೆಗಳ ಬಾಡಿಗೆಯಲ್ಲಿ ಅಕ್ರಮ

ಪೂರ್ವ ವಲಯದಲ್ಲಿರುವ ಪಬ್ಲಿಕ್‌ ಯುಟಿಲಿಟಿ ಮಾರುಕಟ್ಟೆ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ದಕ್ಷಿಣ ವಲಯದಲ್ಲಿರುವ ಜಯನಗರ ವಾಣಿಜ್ಯ ಸಂಕೀರ್ಣ ಮಾರುಕಟ್ಟೆಗಳಲ್ಲಿ ಬಾಡಿಗೆ/ ಗುತ್ತಿಗೆಯ ಬೇಡಿಕೆ ವಸೂಲಿ ಮತ್ತು ಬಾಕಿಯಲ್ಲಿ ಸಾಕಷ್ಟು ಅಕ್ರಮಗಳು ಕಂಡುಬಂದಿವೆ. ಈ ಮೂರೂ ಮಾರುಕಟ್ಟೆಗಳಿಂದ ಬಾಡಿಗೆ ಗುತ್ತಿಗೆಯಿಂದ ₹128.92 ಕೋಟಿ ಬಾಕಿ ಉಳಿದಿದೆ. ಲೋಪಗಳನ್ನು ಸರಿಪಡಿಸಿ ಕ್ರಮ ಕೈಗೊಳ್ಳದಿದ್ದರೆ ಆರ್ಥಿಕ ನಷ್ಟ ಉಂಟಾಗುವ ಜೊತೆಗೆ ಪಾಲಿಕೆ ಆಸ್ತಿ ಕೈಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಎಚ್ಚರಿಸಲಾಗಿದೆ. ಅಲ್ಲದೆ 2021–22ರ ಮಾರ್ಚ್‌ ಅಂತ್ಯಕ್ಕೆ ಅನುಗುಣವಾಗಿ ಕೂಡಲೇ ₹28 ಕೋಟಿ ವಸೂಲಿ ಮಾಡಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT