ಮಂಗಳವಾರ, ಜನವರಿ 26, 2021
28 °C
ಹೊರಾಂಗಣ ಜಾಹೀರಾತಿಗೆ ಕಾಯ್ದೆಯಲ್ಲಿ ಅವಕಾಶ– ಇಕ್ಕಟ್ಟಿನಲ್ಲಿ ಬಿಬಿಎಂಪಿ

‘ಬಿಬಿಎಂಪಿ ಕಾಯ್ದೆ 2020’ ಇಂದಿನಿಂದ ಜಾರಿ: ಬೈಲಾ ಗೊಂದಲ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

BBMP

ಬೆಂಗಳೂರು: ನಗರದ ಆಡಳಿತಕ್ಕೆ ಸಂಬಂಧಿಸಿದಂತೆ ‘ಬಿಬಿಎಂಪಿ ಕಾಯ್ದೆ 2020’ ಇಂದಿನಿಂದ ಅಧಿಕೃತವಾಗಿ ಜಾರಿಯಾಗುತ್ತಿದೆ. ಆದರೆ, 1976ರ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಅನ್ವಯ ಈ ಹಿಂದೆ ಬಿಬಿಎಂಪಿಯು ರೂಪಿಸಿ ಜಾರಿಗೊಳಿಸಿದ್ದ ಕೆಲವು ಉಪವಿಧಿಗಳನ್ನು ಮುಂದುವರಿಸುವ ಕುರಿತು ಗೊಂದಲಗಳನ್ನು ಹೊಸ ಕಾಯ್ದೆ ಸೃಷ್ಟಿಸಿದೆ. 

ಹೊಸ ಕಾಯ್ದೆಯನ್ವಯ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಕ್ರಮಣ ಕಾಲದಲ್ಲಿ ಸೃಷ್ಟಿಯಾಗುವ ಗೊಂದಲಗಳನ್ನು ನಿವಾರಿಸುವ ಬಗ್ಗೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 375 ವಿವರಿಸುತ್ತದೆ. ಆದರೆ, ಈ ಸೆಕ್ಷನ್‌ನಲ್ಲಿರುವ ಕೆಲವು ಅಂಶಗಳು ಗೊಂದಲಗಳನ್ನು ನಿವಾರಿಸುವ ಬದಲು ಮತ್ತಷ್ಟು ಹೆಚ್ಚಿಸುವಂತಿವೆ.

ಬಿಬಿಎಂಪಿ ಕಾಯ್ದೆ ರೂಪುಗೊಳ್ಳುವ ಮುನ್ನ ಕೆಎಂಸಿ ಕಾಯ್ದೆಯಡಿ ಜಾರಿಯಾದ ಯಾವುದೇ ನಿಯಮ, ಪ್ರಕಟವಾದ ಅಧಿಸೂಚನೆ, ಆದೇಶ ಅಥವಾ ಮಾಡಲಾದ ನೇಮಕಾತಿಗಳು ಈ ಕಾಯ್ದೆಯ ಪ್ರಕಾರ ಅಸಮಂಜಸ ಅಲ್ಲದಿದ್ದರೆ ಅಥವಾ ಅವುಗಳನ್ನು ರದ್ದುಪಡಿಸಲು ಕ್ರಮಕೈಗೊಳ್ಳದಿದ್ದರೆ ಅವು ಈ ಕಾಯ್ದೆ ಜಾರಿಗೆ ಬಂದ ಬಳಿಕ ಹೊಸತಾಗಿ ನಿಯಮಗಳನ್ನು ರೂಪಿಸುವವರೆಗೆ, ಹೊಸ ಅಧಿಸೂಚನೆ ಅಥವಾ ಆದೇಶ ಪ್ರಕಟಿಸುವವರೆಗೆ ಅಥವಾ ಹೊಸ ನೇಮಕಾತಿ ಮಾಡುವವರೆಗೆ ಯಥಾಪ್ರಕಾರ ಮುಂದುವರಿಯಲಿವೆ ಎನ್ನುತ್ತದೆ ಸೆಕ್ಷನ್‌ 375 (1). ಹಳೆ ನಿಯಮಗಳು ಹೊಸ ಕಾಯ್ದೆ ಪ್ರಕಾರ ಅಸಮಂಜಸವಾಗಿದ್ದರೆ ಅವು ಮುಂದುವರಿಯುವುದಿಲ್ಲ ಎನ್ನುವುದು ಈ ಸೆಕ್ಷನ್‌ನ ತಾತ್ಪರ್ಯ. ಈ ಅಂಶವೇ ಗೊಂದಲಕ್ಕೆಡೆ ಮಾಡಿಕೊಟ್ಟಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳನ್ನು ಸಂಪೂರ್ಣ ನಿಷೇಧಿಸುವ ಉದ್ದೇಶದಿಂದ ಪಾಲಿಕೆಯು ಹೈಕೋರ್ಟ್‌ ಸೂಚನೆ ಮೇರೆಗೆ ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ’ಯನ್ನು ಮತ್ತು ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ ಅನ್ನು ಜಾರಿಗೊಳಿಸಿದೆ. ಅದರ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ. ಆದರೆ, ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 157 ಹೊರಾಂಗಣದಲ್ಲೂ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತದೆ.

ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 157ರ ಪ್ರಕಾರ, ‘ಯಾವುದೇ ಕಟ್ಟಡದಲ್ಲಿ, ಜಾಗದಲ್ಲಿ, ಗೋಡೆಯಲ್ಲಿ ಅಥವಾ ಯಾವುದೇ ರಚನೆಯಲ್ಲಿ ಅಳವಡಿಸುವ, ಪ್ರದರ್ಶಿಸುವ ಅಥವಾ ಸಾರ್ವಜನಿಕರಿಗೆ ತೋರಿಸುವ ಯಾವುದೇ ಜಾಹೀರಾತಿಗೆ, ಅದು ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿದ್ದರೂ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಬಿಬಿಎಂಪಿಯು ಸರ್ಕಾರದ ಒಪ್ಪಿಗೆ ಪಡೆದು ನಿಗದಿಪಡಿಸಬಹುದು. ಇದು ಸರ್ಕಾರ ಗೊತ್ತುಪಡಿಸುವ ಗರಿಷ್ಠ ಅಥವಾ ಕನಿಷ್ಠ ಮೊತ್ತದ ಮಿತಿಯಲ್ಲಿರಬೇಕು. ಯಾವ ರೀತಿಯ ಜಾಹೀರಾತುಗಳಿಗೆ ಶುಲ್ಕ ವಿನಾಯಿತಿ ನೀಡಬಹುದು‘ ಎಂಬ ಅಂಶಗಳನ್ನೂ ವಿವರಿಸಲಾಗಿದೆ.

ಆಯುಕ್ತರ ಲಿಖಿತ ಪರವಾನಗಿ ಇಲ್ಲದೇ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದು ಹೊಸ ಕಾಯ್ದೆಯ ಸೆಕ್ಷನ್‌ 158 ಹೇಳುತ್ತದೆ. ಪಾಲಿಕೆಯು ಜಾರಿಗೊಳಿಸಿರುವ ಯಾವುದೇ ಉಪವಿಧಿಗಳಿಗೆ ಜಾಹೀರಾತು ವ್ಯತಿರಿಕ್ತವಾಗಿದ್ದರೆ ಹಾಗೂ ಸಂಸ್ಥೆ ಅಥವಾ ವ್ಯಕ್ತಿಯು ಪಾಲಿಕೆಗೆ ಶುಲ್ಕ ಮತ್ತಿತರ ಯಾವುದೇ ಬಾಕಿ ಉಳಿಸಿಕೊಂಡಿದ್ದರೆ ಅದಕ್ಕೆ ಆಯುಕ್ತರು ಅನುಮತಿ ನೀಡುವಂತಿಲ್ಲ ಎಂದು ಸೆಕ್ಷನ್‌ 158 (2) ಹೇಳುತ್ತದೆ. ಪಾಲಿಕೆಯು ಜಾರಿಗೊಳಿಸಿರುವ ಯಾವುದೇ ಉಪವಿಧಿಗೆ ಜಾಹೀರಾತು ವ್ಯತಿರಿಕ್ತವಾಗಿದ್ದು, ಅದಕ್ಕೆ ಆಯುಕ್ತರು ಅನುಮತಿ ನೀಡಿದರೂ ಅದು ಊರ್ಜಿತವಾಗುವುದಿಲ್ಲ ಎಂದು ಸೆಕ್ಷನ್‌ 159 (ಎ) ಹೇಳುತ್ತದೆ.

ಸೆಕ್ಷನ್‌ 158 ಮತ್ತು 159ಕ್ಕೆ ವಿರುದ್ಧವಾಗಿ ಯಾವುದಾದರೂ ಜಾಗದಲ್ಲಿ, ಕಟ್ಟಡದಲ್ಲಿ, ಗೋಡೆಯಲ್ಲಿ ಅಥವಾ ಹೋರ್ಡಿಂಗ್‌ನಲ್ಲಿ ಜಾಹೀರಾತನ್ನು ಅಳವಡಿಸಿದ್ದರೆ, ಅದಕ್ಕೆ ಆ ಜಾಗದ ಅಥವಾ ಕಟ್ಟಡದ ಮಾಲೀಕರೇ ಹೊಣೆ ಎನ್ನುತ್ತದೆ ಸೆಕ್ಷನ್‌ 160. ಆ ಜಾಹೀರಾತನ್ನು ತಾನಾಗಲೀ ಅಥವಾ ತಾನು ನೇಮಿಸಿದ ಸಿಬ್ಬಂದಿಯಾಗಲೀ ಅಳವಡಿಸಿಲ್ಲ ಎಂಬುದನ್ನು ಅಥವಾ ತಮ್ಮ ಗಮನಕ್ಕೆ ಬಾರದೆ ಅದನ್ನು ಅಳವಡಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವರೆಗೂ ಜಾಗದ ಅಥವಾ ಕಟ್ಟಡ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಲು ಈ ಸೆಕ್ಷನ್‌ ಅವಕಾಶ ಕಲ್ಪಿಸುತ್ತದೆ. 

‘ಬಿಬಿಎಂಪಿಯ ಜಾಹೀರಾತು ಬೈಲಾಗಳು ಹೊಸ ಕಾಯ್ದೆಯ ಅಂಶಗಳಿಗೆ ವ್ಯತಿರಿಕ್ತವಾಗಿವೆ. ಕಟ್ಟಡ ಬೈಲಾಗಳು, ಕಸ ನಿರ್ವಹಣೆ ಬೈಲಾಗಳೂ ಸೇರಿದಂತೆ ಇತರ ಉಪವಿಧಿಗಳು ಬಿಬಿಎಂಪಿ ಕಾಯ್ದೆಗೆ ವ್ಯತಿರಿಕ್ತವಾಗಿಲ್ಲ. ಹಾಗಾಗಿ ಅವುಗಳ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಜಾಹೀರಾತು ಬೈಲಾಗಳ ಅನುಷ್ಠಾನ ಸಂಬಂಧ ಸರ್ಕಾರದ ನಿರ್ದೇಶನವನ್ನು ಎದುರು ನೋಡುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುದ್ದೆ ಹೆಸರು ಬದಲಾವಣೆಗೆ ಪ್ರತ್ಯೇಕ ಅಧಿಸೂಚನೆ ಅಗತ್ಯ’

ಸೋಮವಾರದಿಂದ ಜಾರಿಗೆ ಬರುತ್ತಿರುವ ಬಿಬಿಎಂಪಿ ಕಾಯ್ದೆ ಅಧಿಕಾರಿಗಳ ಹುದ್ದೆಯ ಕುರಿತೂ ಗೊಂದಲಗಳನ್ನು ಸೃಷ್ಟಿಸಿದೆ.

ಬಿಬಿಎಂಪಿ ಕಾಯ್ದೆ ಪ್ರಕಾರ ಪಾಲಿಕೆಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ಮುಖ್ಯ ಆಯುಕ್ತರಾಗಿರುತ್ತಾರೆ. ಪ್ರಸ್ತುತ ಬಿಬಿಎಂಪಿ ಆಯುಕ್ತರಾಗಿರುವ ಎನ್‌.ಮಂಜುನಾಥ ಪ್ರಸಾದ್‌ ಅವರೂ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ. ಅವರನ್ನು ಆಯುಕ್ತರು ಎಂದು ಕರೆಯಬೇಕೋ ಅಥವಾ ಮುಖ್ಯ ಆಯುಕ್ತರೆಂದು ಕರೆಯಬೇಕೋ ಎಂಬ ಗೊಂದಲ ಬಿಬಿಎಂಪಿ ಅಧಿಕಾರಿಗಳನ್ನು ಕಾಡುತ್ತಿದೆ. ಅದೇ ರೀತಿ, ಬಿಬಿಎಂಪಿಯ ಪ್ರತಿ ವಲಯಗಳ ಆಡಳಿತ ನಿರ್ವಹಣೆ ಜಂಟಿ ಆಯುಕ್ತರ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಹೊಸ ಕಾಯ್ದೆ ಪ್ರಕಾರ ವಲಯ ಆಯುಕ್ತರು ಆಯಾ ವಲಯಗಳ ಆಡಳಿತ ವ್ಯವಸ್ಥೆಯ ಹೊಣೆ ಹೊರಬೇಕು. 

‘ಈಗಿರುವ ಆಯುಕ್ತರನ್ನೇ ಮುಖ್ಯ ಆಯುಕ್ತರನ್ನಾಗಿ ಮುಂದುವರಿಸಲು ಹಾಗೂ ವಲಯಗಳ ಜಂಟಿ ಆಯುಕ್ತರನ್ನೇ ವಲಯ ಆಯುಕ್ತರನ್ನಾಗಿ ಮುಂದುವರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕಾಗುತ್ತದ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ಸರ್ಕಾರ ಹುದ್ದೆಗಳ ಹೆಸರು ಬದಲಾವಣೆಗೆ ಇದುವರೆಗೂ ಕ್ರಮಕೈಗೊಂಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು