ಭಾನುವಾರ, ಮಾರ್ಚ್ 26, 2023
21 °C

BBMP | ಕೊಳವೆ ಬಾವಿ ಯೋಜನೆಯಲ್ಲಿ ₹ 400 ಕೋಟಿ ಅಕ್ರಮ; ಇ.ಡಿ ತನಿಖೆಯಿಂದ ಬಹಿರಂಗ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂಪಿ) ಒಂದು ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ₹ 10 ಲಕ್ಷ ವೆಚ್ಚದಂತೆ ಲೆಕ್ಕ ತೋರಿಸಿ ಸುಮಾರು ₹ 400 ಕೋಟಿಯಷ್ಟು  ಅಕ್ರಮ ನಡೆಸಿರುವುದು ಮೂರು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದ್ದರೂ ಈ ಹಗರಣ ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.

2016–2019ರ ಅವಧಿಯಲ್ಲಿ ಬಿಬಿಎಂಪಿಯ ದಾಸರಹಳ್ಳಿ, ಮಹದೇವಪುರ, ಆರ್‌.ಆರ್. ನಗರ, ಬೊಮ್ಮನಹಳ್ಳಿ ಮತ್ತು ಯಲಹಂಕ ವಲಯದಲ್ಲಿ ಈ ಅಕ್ರಮ ನಡೆದಿರುವುದು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಸೂಚನೆಯಂತೆ ನಗರಾಭಿವೃದ್ಧಿ ಇಲಾಖೆ ನಡೆಸಿದ ಆಂತರಿಕ ವಿಚಾರಣೆಯಲ್ಲಿ ಗೊತ್ತಾಗಿತ್ತು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಇ.ವಿ. ರಮಣ ರೆಡ್ಡಿ ಅವರು, ಈ ವಿಚಾರಣಾ ವರದಿಯಲ್ಲಿರುವ ಅಂಶಗಳಿಗೆ ಸರ್ಕಾರದ ಕರಡು ಆದೇಶದ ಕಡತವನ್ನು ಅನುಮೋದನೆಗಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರಿಗೆ 2019ರ ನ. 8 ರಂದು ಮಂಡಿಸಿದ್ದರು. ಅದಕ್ಕೆ ಯಡಿಯೂರಪ್ಪ ಅನುಮೋದನೆಯನ್ನೂ ನೀಡಿದ್ದರು.

ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ನೀಡಿದ ಬೆನ್ನಲ್ಲೇ, ನಗರಾಭಿವೃದ್ಧಿ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ಸರ್ಕಾರಕ್ಕೆ ಸಲ್ಲಿಸಿದ್ದ ಆಂತರಿಕ ವಿಚಾರಣಾ ವರದಿ ಮುನ್ನೆಲೆಗೆ ಬಂದಿದೆ. ಇದೀಗ ಈ ವರದಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 2016–19ರ ಅವಧಿಯಲ್ಲಿ ಕೊಳವೆ ಬಾವಿ ಮತ್ತು ಶುದ್ಧ ನೀರಿನ ಘಟಕ ನಿರ್ಮಾಣದ ಹೆಸರಿನಲ್ಲಿ ಬಿಡುಗಡೆಯಾದ ₹ 970 ಕೋಟಿಯ ಪೈಕಿ, ಆರ್‌.ಆರ್‌. ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ಈ ಐದು ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಪಾಲಿಕೆ ಸದಸ್ಯರು ಮತ್ತು ಗುತ್ತಿಗೆದಾರರು ₹ 400 ಕೋಟಿಗೂ ಹೆಚ್ಚು ಮೊತ್ತ ಲೂಟಿ ಹೊಡೆದಿದ್ದಾರೆ’ ಎಂದು ಆರೋಪಿಸಿ 2019ರ ಮೇ 14 ರಂದು ಬಿಜೆಪಿ ಮುಖಂಡ ಎನ್‌.ಆರ್. ರಮೇಶ್‌ ಅವರು ಎಸಿಬಿಗೆ ದೂರು ನೀಡಿದ್ದರು.

ಈ ದೂರು ಮತ್ತು ಅದರ ಜೊತೆಗಿದ್ದ ದಾಖಲೆಗಳ ಸಹಿತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2019ರ ಜುಲೈ 25 ರಂದು ರಹಸ್ಯ ಪತ್ರ ಬರೆದಿದ್ದ ಎಸಿಬಿ ಎಡಿಜಿಪಿ ರಾಮನಿವಾಸ್ ಸೆಪಟ್‌, ‘ದೂರಿನಲ್ಲಿರುವ ಆರೋಪಗಳ ಬಗ್ಗೆ ಇಲಾಖೆಯ ವಿಜಿಲೆನ್ಸ್‌ ಅಧಿಕಾರಿಗಳ ಮೂಲಕ ಆಂತರಿಕ ವಿಚಾರಣೆ ನಡೆಸಬೇಕು. ಆರೋಪಗಳು ಸಾಬೀತಾದರೆ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಪೂರ್ವಾನುಮತಿ ನೀಡಿ ಸರ್ಕಾರಿ ಆದೇಶದ ಜೊತೆ ವಿಚಾರಣಾ ವರದಿಯನ್ನು ಸಲ್ಲಿಸಬೇಕು’ ಎಂದು ತಿಳಿಸಿದ್ದರು.

ಈ ದೂರಿನಲ್ಲಿದ್ದ ಆರೋಪಗಳ ಕುರಿತಂತೆ ಐದೂ ವಲಯಗಳ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳನ್ನು 2019ರ ಆಗಸ್ಟ್‌ 22, ಸೆ. 12, ಸೆ.20ರಂದು ವಿಚಾರಣೆ ನಡೆಸಿದ್ದ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ, 2019ರ ಅ. 5 ರಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ಅಲ್ಲದೆ, ಈ ಪ್ರಕರಣ ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ, ಈ ಐದೂ ವಲಯಗಳ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಆದೇಶ ಹೊರಡಿಸಿರುವುದು ಸೂಕ್ತವಾಗಿದೆ. ವಿಚಾರಣಾ ವರದಿಯನ್ನು ಎಸಿಬಿಗೆ ಕಳುಹಿಸಿಕೊಡಲು ಮುಖ್ಯಮಂತ್ರಿಯ ಅನುಮೋದನೆ ಪಡೆಯಬಹುದು’ ಎಂದು ವರದಿಯ ಕೊನೆಯಲ್ಲಿ ಮುಖ್ಯ ಜಾಗೃತ ಅಧಿಕಾರಿ ಷರಾ ಬರೆದಿದ್ದರು.

ಈ ಪ್ರಕರಣದ ತನಿಖೆಗೆ ಮುಂದಾಗಿರುವ ಇ.ಡಿ, ಕಾಮಗಾರಿಗಳ ವಿವರ ನೀಡುವಂತೆ ಬಿಬಿಎಂಪಿಗೆ ನೋಟಿಸ್ ನೀಡಿದೆ. ಇದನ್ನು ಖಚಿತಪಡಿಸಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ನವೆಂಬರ್‌ನಲ್ಲಿ ನಮಗೆ ನೋಟಿಸ್ ಬಂದಿದೆ. ಇ.ಡಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ವಿಚಾರಣೆಗೆ ಎಲ್ಲ ವಿವರಗಳನ್ನು ನೀಡಲು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ’ ಎಂದಿದ್ದಾರೆ.

ವಿಚಾರಣಾ ವರದಿಯಲ್ಲಿ ಏನಿದೆ?
* 165 ಮಿಲಿ ಮೀಟರ್‌ ವ್ಯಾಸದ ಕೊಳವೆಬಾವಿ ಕೊರೆದು ಪಂಪ್‌ ಜೋಡಿಸುವ ಕಾಮಗಾರಿಗಳಿಗೆ, ಪ್ರತಿ ಕೊಳವೆ ಬಾವಿಗೆ ಸುಮಾರು ₹ 10 ಲಕ್ಷ ವೆಚ್ಚ ಮಾಡಲಾಗಿದ್ದು, ಇದು ಅಸಹಜವಾಗಿ ಹೆಚ್ಚಾಗಿದೆ.
* ಎಲ್ಲ ಕೊಳವೆಬಾವಿಗಳಿಗೂ ಒಂದೇ ಸಮನಾಗಿ ₹ 10 ಲಕ್ಷ ವೆಚ್ಚವಾಗಲು ಸಾಧ್ಯವಿಲ್ಲ.
* ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ‘ನೋ ವಾಟರ್‌ ನೋ ಮನಿ’ (ನೀರಿಲ್ಲದಿದ್ದರೆ ಹಣ ಇಲ್ಲ) ಎಂಬ ಸರ್ಕಾರದ ನೀತಿಯನ್ನು ಅನುಸರಿಸಿಲ್ಲವೆಂದು ವಿಚಾರಣೆ ವೇಳೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
* ಈ ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ವಿವರವಾದ ತನಿಖೆಯ ಅಗತ್ಯವಿದೆ.
* ಕೊಳವೆಬಾವಿ ಕೊರೆಯುವ ಕಾಮಗಾರಿಗಳಲ್ಲಿ ಭಾಗಿಯಾಗಿರುವ ಐದೂ ವಲಯಗಳ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲು ಎಸಿಬಿಗೆ ವಹಿಸಬಹುದು.

*

ಭ್ರಷ್ಟಾಚಾರ ಆರೋಪದ ತನಿಖೆಯನ್ನು ಹಿಂದೆ ಎಸಿಬಿ ನಡೆಸಿತ್ತು. ಮೊತ್ತ ದೊಡ್ಡದಿರುವುದರಿಂದ ಎಸಿಬಿಯಿಂದ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿದೆ.
–ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು