ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBMP Budget 2023 | ರಸ್ತೆ, ಮೇಲ್ಸೇತುವೆಗೆ ₹7 ಸಾವಿರ ಕೋಟಿ

Last Updated 2 ಮಾರ್ಚ್ 2023, 21:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಮೂಲಸೌಲಭ್ಯ ಒದಗಿಸಬೇಕು ಹಾಗೂ ಜೀವನ ಗುಣಮಟ್ಟವನ್ನು ವೃದ್ಧಿಸಬೇಕು ಎಂಬ ಉದ್ದೇಶದಿಂದ ಒಟ್ಟಾರೆ ಬಜೆಟ್‌ನ ‌ಹಂಚಿಕೆಯಲ್ಲಿ ಶೇ 63.66ರಷ್ಟು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಏಳು ಸಾವಿರ ಕೋಟಿಗೂ ಮೀರಿದ ಹಣವನ್ನು ಈ ವಲಯಕ್ಕೆ ನೀಡಲಾಗಿದೆ.

ಅಮೃತ ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿ ವೆಚ್ಚ ಮಾಡಿರುವ ಕಾರಣಕ್ಕೆ 2022–23 ಅನ್ನು ‘ಅಮೃತ ವರ್ಷ’ ಎಂದೇ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಶಂಸಿಸಲಾಗಿದೆ. ಹಳೆಯ ಯೋಜನೆಗಳನ್ನು ಮತ್ತೆ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿರುವ ಯೋಜನೆಗಳನ್ನು ನಮೂದಿಸಿದ್ದು, ಹೊಸ ಯೋಜನೆಗಳಿಗೆ ಸಾಲವನ್ನೂ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಸಂಚಾರ ದಟ್ಟಣೆ ಹಾಗೂ ಜಂಕ್ಷನ್‌ಗಳ ನಿಧಾನಗತಿಯ ಸಂಚಾರ ಸಮಸ್ಯೆ ನೀಗಿಸಲು ಸಿಗ್ನಲ್‌ರಹಿತ ಸಂಚಾರ ಕಾರಿಡಾರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐದು ಹೊಸ ಮೇಲ್ಸೇತುವೆ ನಿರ್ಮಿಸಲು ₹210 ಕೋಟಿ ವೆಚ್ಚ ಮಾಡಲಾಗುತ್ತಿದೆ.

ನಿಧಾನಗತಿಯ ಸಂಚಾರವನ್ನು ತಪ್ಪಿಸಲು 75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಹಾಗೂ 60 ಅಡಿ ಉದ್ದಕ್ಕೂ ಕಡಿಮೆಯಿರುವ ರಸ್ತೆಗಳಲ್ಲಿ ‘ಬಾಟಲ್‌ನೆಕ್‌’ ಪರಿಸ್ಥಿತಿ ನಿವಾರಣೆಗೆ ₹150 ಕೋಟಿ ಮೀಸಲಿಟ್ಟು, ರಸ್ತೆ ವಿಸ್ತರಣೆ ಹಾಗೂ ಸಮತೋಲನ ಕಾಪಾಡಲು
ಉದ್ದೇಶಿಸಲಾಗಿದೆ.

ಹೊಸ ಮೇಲ್ಸೇತುವೆಗಳಲ್ಲದೆ 9 ಹಳೆಯ ರಸ್ತೆ ಯೋಜನೆಗಳಿಗೆ ₹965 ಕೋಟಿ ಹೆಚ್ಚುವರಿ ಅನುದಾನ ನೀಡಲು ₹770 ಕೋಟಿಯನ್ನು ಕೆಯುಐಡಿಎಫ್‌ಸಿಯಿಂದ ಸಾಲ ಪಡೆಯಲಾಗುತ್ತಿದೆ. ಉಳಿದ ₹195 ಕೋಟಿಯನ್ನು ಬಿಬಿಎಂಪಿ ಭರಿಸುತ್ತಿದೆ.

ನಗರದಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು, ಹೊಸದಾಗಿ ನಾಲ್ಕು ಮೇಲ್ಸೇತುವೆ ಹಾಗೂ ನಾಲ್ಕು ಕೆಳಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಮೇಲ್ಸೇತುವೆ–ಕೆಳಸೇತುವೆ ಸೇರಿದಂತೆ ಸುರಂಗ ಮಾರ್ಗಗಳ ನಿರ್ವಹಣೆಗೆ ₹20 ಕೋಟಿ ಮೀಸಡಲಿಡಲಾಗಿದೆ. ಮುಖ್ಯ, ಉಪಮುಖ್ಯ ರಸ್ತೆಗಳ ನಿರ್ವಹಣೆ, ಟೆಂಡರ್‌ ಶ್ಯೂರ್‌– ಸ್ಮಾರ್ಟ್‌ ಸಿಟಿ ಯೋಜನೆಯ ರಸ್ತೆಗಳ ನಿರ್ವಹಣೆಗೂ ₹20 ಕೋಟಿ ನೀಡಲಾಗಿದೆ.

ಪ್ರತಿ ವಾರ್ಡ್‌ಗೆ ₹2 ಕೋಟಿ

ವಲಯವಾರು ಕಾಮಗಾರಿಗಾಗಿ ಪ್ರತಿ ವಾರ್ಡ್‌ಗೆ ₹2 ಕೋಟಿ ಮೊತ್ತವನ್ನು ಕಾಮಗಾರಿ ಹಣ ಎಂದು ನಿಗದಿಪಡಿಸಲಾಗಿದೆ. 243 ವಾರ್ಡ್‌ಗಳಲ್ಲಿ ಚರಂಡಿಗಳ ಹೂಳೆತ್ತುವಿಕೆ, ನಿರ್ವಹಣೆಗೆ ತಲಾ ₹30 ಲಕ್ಷ, ರಸ್ತೆ ಗುಂಡಿ ಮುಚ್ಚಲು ತಲಾ ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ, ಮಳೆಗಾಲ ನಿಯಂತ್ರಣ ಕೊಠಡಿ ನಿರ್ವಹಣೆಗೆ ತಲಾ ₹5 ಲಕ್ಷ ನೀಡಲಾಗಿದೆ. ಇದಲ್ಲದೆ ವಾರ್ಡ್‌ ಕಾಮಗಾರಿಗಳಿಗಾಗಿಯೇತಲಾ ₹125 ಲಕ್ಷ ಬಿಡುಗಡೆ ಮಾಡಲುನಿರ್ಧರಿಸಲಾಗಿದೆ.

ಆ್ಯಪ್‌ ಮೂಲಕ ಪಾವತಿ

ರಸ್ತೆ ಗುಂಡಿ ಕಾಮಗಾರಿಯನ್ನು ’ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಮೂಲಕವೇ ನಿರ್ವಹಿಸಲು ನಿರ್ಧರಿಸಲಾಗಿದೆ. ನಾಗರಿಕರು ಜಿಯೊಟ್ಯಾಗ್‌ನೊಂದಿಗೆ ಕಳುಹಿಸಿದ ಗುಂಡಿ ಚಿತ್ರವನ್ನು ಪರಿಶೀಲಿಸಿ, ಕಾಮಗಾರಿ ಪರಿವೀಕ್ಷಣೆ, ಬಿಲ್‌ ಸಲ್ಲಿಸುವುದು ಮತ್ತು ಪಾವತಿಸುವುದನ್ನು ಆ್ಯಪ್‌ನಲ್ಲೇ ನಿರ್ವಹಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT