ಶನಿವಾರ, ಜುಲೈ 24, 2021
28 °C

ಬಿಬಿಎಂಪಿ | ಪೌರಕಾರ್ಮಿಕರಿಗಾಗಿ ಸುವಿಧಾ ಕೊಠಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಬಿಡುವಿನ ವೇಳೆ ವಿಶ್ರಾಂತಿ ಪಡೆಯಲು ಸ್ವಚ್ಛ ಹಾಗೂ ಸುರಕ್ಷಿತ ಸೌಕರ್ಯ ಒದಗಿಸುವ ಸಲುವಾಗಿ ಬಿಬಿಎಂಪಿ ಸುವಿಧಾ ಕೊಠಡಿಗಳನ್ನು ನಿರ್ಮಿಸುತ್ತಿದೆ.

ಯಶವಂತಪುರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಿರ್ಮಿಸಿರುವ 'ಸುವಿಧಾ’ ಕೊಠಡಿಯನ್ನು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಉದ್ಘಾಟಿಸಿದರು.

ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಡಲು ಹೊತ್ತೇರುವ ಮುನ್ನವೇ ಕೆಲಸ ಆರಂಭಿಸುವ ಪೌರಕಾರ್ಮಿಕರು ನಿತ್ಯ ಎಂಟು ತಾಸು ದುಡಿಯುತ್ತಾರೆ. ನಗರದಲ್ಲಿರುವ ಸುಮಾರು 25 ಸಾವಿರದಷ್ಟು ಪೌರಕಾರ್ಮಿಕರಲ್ಲಿ ಶೇ 70ಕ್ಕೂ ಮಂದಿ ಮಹಿಳೆಯರು. ಕೆಲಸದ ನಡುವಿನ ಬಿಡುವಿನ ವೇಳೆ ವಿಶ್ರಾಂತಿ ಪಡೆಯಲು, ಶೌಚಾಲಯಕ್ಕೆ ಹೋಗಲು ಅವರಿಗೆ ಸೂಕ್ತ ವ್ಯವಸ್ಥೆಗಳೇ ಇಲ್ಲ. ಗಿಜಿಗುಡುವ ಟ್ರಾಫಿಕ್‌, ಸದಾ ವಾಹನ ದಟ್ಟಣೆಯಿಂದ ಕೂಡಿದ ರಸ್ತೆಗಳಲ್ಲಿ ದುಡಿಯುವ ಅವರು ಅರೆ ಗಳಿಗೆ ವಿಶ್ರಾಂತಿ ಪಡೆಯುವುದಕ್ಕೂ ಖಾಸಗಿತನವಿರಲಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಬಿಬಿಎಂಪಿಯು  ಸುವಿಧಾ ಕೊಠಡಿಗಳನ್ನು ನಿರ್ಮಿಸುವ ಕಾರ್ಯಕ್ರಮ ಹಾಕಿಕೊಂಡಿದೆ. 

‘ಬೆಂಗಳೂರಿನ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಸುರಕ್ಷತೆ, ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸುವಿಧಾ ಕೊಠಡಿ ನಿರ್ಮಿಸಲಾಗಿದೆ. ಬೆಳಗ್ಗೆ ಕೆಲಸ ಆರಂಭಿಸುವ ಮೊದಲು ತಮ್ಮ ಪರಿಕರಗಳನ್ನು ಇಡಲು ಇದರಲ್ಲಿ ಸ್ಥಳಾವಕಾಶವಿದೆ. ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪೌರಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಅಶ್ವತ್ಥನಾರಾಯಣ ಹೇಳಿದರು.

ಏನಿದರ ವಿಶೇಷ: ಉಕ್ಕಿನ ಕಂಟೈನರ್‌ಗಳನ್ನೇ ಬಳಸಿ ಸುವಿಧಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಇಟ್ಟಿಗೆ ಹಾಗೂ ಸಿಮೆಂಟ್‌ ಬಳಸಿಲ್ಲ. ಇದು ಪರಿಸರ ಸ್ನೇಹಿಯಾಗಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಇದರ ನಿರ್ಮಾಣಕ್ಕೆ ಕಡಿಮೆ ಅವಧಿ ಸಾಕು. ಇಷ್ಟೇ ದೊಡ್ಡ ಕಟ್ಟಡ ನಿರ್ಮಾಣಕ್ಕೆ ಆಗುವ ವೆಚ್ಚಕ್ಕೆ ಹೋಲಿಸಿದರೆ ಇದಕ್ಕೆ ತಗಲುವ ವೆಚ್ಚ ಬಲು ಕಡಿಮೆ. ಬಟ್ಟೆ ಬದಲಾಯಿಸುವ ಕೊಠಡಿ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಹೊಂದಿರುವ ಈ ಕೊಠಡಿ ನಿರ್ಮಾಣಕ್ಕೆ ಕೇವಲ ₹ 5.5 ಲಕ್ಷ ವೆಚ್ಚವಾಗಲಿದೆ. ಇದು ದೀರ್ಘ ಬಾಳಿಕೆ ಬರಲಿದೆ. ಭೂಕಂಪ ಹಾಗೂ ಪ್ರವಾಹ ಉಂಟಾದರೂ ಇದಕ್ಕೆ ಯಾವುದೇ ಹಾನಿ ಆಗದು.

ಸುವಿಧಾ ಕೊಠಡಿಗಳ ನಿರ್ಮಾಣದಲ್ಲಿ ಅಗ್ರಿಯಾ ಇನ್‌ಫೊಟೆಕ್ ಬಿಬಿಎಂಪಿ ಜೊತೆ ಕೈಜೋಡಿಸಿದೆ. ಇಂಡಿಯಾ ರೈಸಿಂಗ್‌ ಟ್ರಸ್ಟ್‌ನ ಅನಿರುದ್ಧ ಅಭಯಂಕರ್‌ ಇದನ್ನು ವಿನ್ಯಾಸಗೊಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು