ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌ಸಿಗೆ, ಚಿಕಿತ್ಸೆ ನಿರ್ಧಾರ ಕೇಂದ್ರಕ್ಕೆ ಮುಖ್ಯ ಆಯುಕ್ತ ಭೇಟಿ

Last Updated 12 ಮೇ 2021, 21:37 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯ ಸರ್ಕಾರಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜಿನ ಪುರುಷರ ವಸತಿನಿಲಯದಲ್ಲಿ ಕೋವಿಡ್ ಆರೈಕೆ ಕೇಂದ್ರ ಮತ್ತು ಚಿಕಿತ್ಸೆ ನಿರ್ಧಾರ ಕೇಂದ್ರವನ್ನು (ಟ್ರಯಾಜಿಂಗ್ ಸೆಂಟರ್) ಸ್ಥಾಪಿಸಲಾಗಿದೆ.

ಈ ಕೇಂದ್ರದಲ್ಲಿ 20 ಹಾಸಿಗೆಗಳಿಗೆ ಆಮ್ಲಜನಕ ಸಾಂದ್ರೀಕರಣ ಸಾಧನಗಳನ್ನು ಒದಗಿಸಲಾಗಿದೆ. ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಈ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಕೇಂದ್ರಕ್ಕೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿರುವ ಬಗ್ಗೆ ವಿಚಾರಿಸಿದರು. ಚಿಕಿತ್ಸೆ ಸರದಿ ನಿರ್ಧರಿಸುವಾಗ ಪಾಲಿಸಬೇಕಾದ ಅಂಶಗಳ ಬಗ್ಗೆ ಸಿಬ್ಬಂದಿಗೆ ಸಲಹೆಗಳನ್ನು ನೀಡಿದರು.

ವಿದ್ಯಾರ್ಥಿ ನಿಯಲದಲ್ಲಿ ಇನ್ನಷ್ಟು ಸ್ಥಳಾವಕಾಶ ಇರುವುದರಿಂದ ಹೆಚ್ಚುವರಿಯಾಗಿ 20 ಸಾಮಾನ್ಯ ಹಾಸಿಗೆಗಳನ್ನು ಅಳವಡಿಸುವಂತೆ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹಾಗೂ ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌ ಅವರಿಗೆ ಸೂಚಿಸಿದರು.

ಶಾಸಕ ರವಿ ಸುಬ್ರಹ್ಮಣ್ಯ, ವಿಶೇಷ ಆಯುಕ್ತರು (ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಜೊತೆಯಲ್ಲಿದ್ದರು.

ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿರುವ ಸ್ಥಿರೀಕರಣ ಕೇಂದ್ರ ಹಾಗೂ ಚಿಕಿತ್ಸೆ ನಿರ್ಧಾರ ಕೇಂದ್ರಕ್ಕೂ ಮುಖ್ಯ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು. ಈ ಕೇಂದ್ರದಲ್ಲಿ ಇದುವರೆಗೆ 47 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಈ ಕೇಂದ್ರದ ಬಗ್ಗೆ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಮಾಹಿತಿ ನೀಡಬೇಕು. ಚಿಕಿತ್ಸೆ ನಿರ್ಧಾರ ಕೇಂದ್ರಗಳಿಂದ ಆಗುವ ಅನುಕೂಲಗಳ ಬಗ್ಗೆಯೂ ಪ್ರಚುರಪಡಿಸಬೇಕು ಎಂದು ಆರೋಗ್ಯ ವೈದ್ಯಾಧಿಕಾರಿಗೆ ಮುಖ್ಯ ಆಯುಕ್ತರು ಸೂಚಿಸಿದರು.

ವಿದ್ಯಾಪೀಠ ಆರೋಗ್ಯ ಕೇಂದ್ರ ಪರಿಶೀಲನೆ
ವಿದ್ಯಾಪೀಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯ ಆಯುಕ್ತರು, ‘ದಿನಕ್ಕೆ ಎಷ್ಟು ಸೋಂಕಿತರ ಪತ್ತೆಯಾಗುತ್ತಿದ್ದಾರೆ. ಸೋಂಕಿತರ ನೇರ ಸಂಪರ್ಕ ಹೊಂದಿದವರ ಪತ್ತೆ ಕಾರ್ಯ ಹೇಗೆ ನಡೆಯುತ್ತಿದೆ’ ಎಂದು ಮಾಹಿತಿ ಪಡೆದರು.

‘ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು ಆರೈಕೆ ಪಡೆಯುವವರ ಮೇಲೆ ನಿಗಾವಹಿಸಲಾಗುತ್ತಿದೆಯೇ. ಸೋಂಕಿತರ ಕೈಗೆ ಮುದ್ರೆ ಹಾಕುವ ಹಾಗೂ ವೈದ್ಯಕೀಯ ಕಿಟ್ ಒದಗಿಸುವ ಬಗ್ಗೆಯೂ ವಿವರ ಕೇಳಿದರು.

‘ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ದೃಢಪಟ್ಟವರಿಗೆ ತಕ್ಷಣ ವೈದ್ಯಕೀಯ ಕಿಟ್ ಒದಗಿಸಬೇಕು. ಮನೆಯಲ್ಲೇ ಆರೈಕೆಗೆ ಒಳಗಾಗುವ ಸೋಂಕಿತರು ಹೊರಗೆ ಬಂದು ಅಡ್ಡಾಡದಂತೆ ಸೂಚನೇ ನೀಡಬೇಕು’ ಎಂದು ತಿಳಿಸಿದರು.

ಅಗಡಿ ನರ್ಸಿಂಗ್ ಹೋಮ್‌ಗೆ ದಿಢೀರ್ ಭೇಟಿ
ಅಗಡಿ ನರ್ಸಿಂಗ್ ಹೋಮ್‌ಗೆ ಮುಖ್ಯ ಆಯುಕ್ತರು ದಿಢೀರ್ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಮತ್ತು ಆಕ್ಸಿಜನ್ ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಈ ಹಿಂದೆ ಆಸ್ಪತ್ರೆಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ವಾರಕ್ಕೊಮ್ಮೆ ಆಮ್ಲಜನಕ ಪೂರೈಕೆ ಆಗುತ್ತಿತ್ತು. ಬೇಡಿಕೆ ಹೆಚ್ಚಾಗಿದ್ದರಿಂದ ಈಗ ದಿನಕ್ಕೊಮ್ಮೆ ಸರಬರಾಜು ಆಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT