ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ₹ 200 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ, ಗುರಿ ಸಾಧಿಸಲು ಸೂಚನೆ

Last Updated 26 ಜನವರಿ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2020–21ನೇ ಸಾಲಿಗಿಂತ ಈ ವರ್ಷ (2021–22) ಇದುವರೆಗೆ ₹ 201.92 ಕೋಟಿಗಳಷ್ಟು ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ.

ಕಳೆದ ವರ್ಷ ಈ ವೇಳೆಗೆ (ಜ.25ರವರೆಗೆ) ₹ 2,465.85 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ ಇದುವರೆಗೆ ₹ 2,667.77 ಕೋಟಿ ತೆರಿಗೆ ಸಂಗ್ರಹವಾಗಿದೆ.

‘ಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಸಮರ್ಥವಾಗಿ ಸಾಧಿಸಬೇಕು. ಅದಕ್ಕಾಗಿ, ಎಲ್ಲ ವಲಯಗಳಲ್ಲೂ ಕಂದಾಯ ಅಧಿಕಾರಿಗಳು ಸುಧಾರಿತ ತಂತ್ರಜ್ಞಾನದ ಸಹಾಯ ಪಡೆದುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಯ ಪ್ರಗತಿ ಪರಿಶೀಲನೆ ಸಲುವಾಗಿ ಬುಧವಾರ ವರ್ಚುವಲ್ ರೂಪದಲ್ಲಿ ನಡೆದ ಸಭೆಯಲ್ಲಿ ಅವರು ತೆರಿಗೆ ವಸೂಲಾತಿ ಚುರುಕುಗೊಳಿಸುವ ಕುರಿತು ಸಲಹೆ ಸೂಚನೆ ನೀಡಿದರು.

‘ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ, ವಸೂಲಿಗೆ ಕ್ರಮ ವಹಿಸಬೇಕು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ಪತ್ತೆ ಮಾಡಿ, ಅವುಗಳನ್ನೂ ತೆರಿಗೆ ವ್ಯಾಪ್ತಿಗೆ
ತರಬೇಕು’ ‌ಎಂದು ನಿರ್ದೇಶನ ನೀಡಿದರು.

ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಿ, ಅದರ ಅನುಸಾರ ವಸೂಲಾತಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿಯು ₹ 4,000 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಇದುವರೆಗೆ ₹ 2,667.77 ಕೋಟಿ ತೆರಿಗೆ ಸಂಗ್ರಹವಾಗಿದೆ.

ಸಭೆಯಲ್ಲಿ ವಿಶೇಷ ಆಯುಕ್ತ (ಕಂದಾಯ) ಡಾ. ದೀಪಕ್ ಆರ್.ಎಲ್,ಕಂದಾಯ ವಿಭಾಗದ ಜಂಟಿ ಆಯುಕ್ತರು ಹಾಗೂ ಎಲ್ಲಾ ವಲಯಗಳ ವಲಯ ಆಯುಕ್ತರು, ಜಂಟಿ ಆಯುಕ್ತರು, ಕಂದಾಯಉಪ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಭಾಗವಹಿಸಿದರು.

ವಲಯವಾರು ಆಸ್ತಿ ತೆರಿಗೆ ಸಂಗ್ರಹದ ವಿವರ (₹ ಕೋಟಿಗಳಲ್ಲಿ)

(ಕಳೆದ ವರ್ಷ ಹಾಗೂ ಈ ವರ್ಷದ ಮಾಹಿತಿ)

ವಲಯ;2021ರ ಜ.25ರವರೆಗೆ; 2022ರ ಜ.25ರವರೆಗೆ

ಯಲಹಂಕ;205.77;265.98

ಮಹದೇವಪುರ; 688.41;683.07

ದಾಸರಹಳ್ಳಿ;67.45;73.78

ಆರ್.ಆರ್.ನಗರ;161.64;182.00

ಬೊಮ್ಮನಹಳ್ಳಿ;249.61;285.04

ಪಶ್ವಿಮ;256.33;272.11

ದಕ್ಷಿಣ;369.57;398.54

ಪೂರ್ವ;467.06;507.26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT