ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಟ್ಟಡ ನಿರ್ಮಾಣ ಹಂತದಲ್ಲೇ ತಡೆಯಬಾರದೇಕೆ’

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ– ದೂರು ನೀಡಿದರೂ ಕ್ರಮವಿಲ್ಲ * ಕಾರ್ಯರೂಪಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ಭರವಸೆ
Last Updated 1 ಜುಲೈ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಕಡಿವಾಣ ಹಾಕಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಪ್ರತಿಪಾದಿಸುತ್ತಲೇ ಇದ್ದಾರೆ. ಆದರೆ, ಇದು ಅನುಷ್ಠಾನದಲ್ಲಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಾಗರಿಕರು.

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕಟ್ಟಡ ನಿರ್ಮಾಣ ಹಂತದಲ್ಲೇ ನಿಯಮ ಉಲ್ಲಂಘನೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅನೇಕರು ಅಸಮಾಧಾನ ತೋಡಿಕೊಂಡರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ‘ವಸತಿ ಪ್ರದೇಶಗಳ ವಾಣಿಜ್ಯೀಕರಣದ ಸುತ್ತ ಚರ್ಚೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಲಿಕೆ ಅಧಿಕಾರಿಗಳು, ವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

‘ಎಚ್‌ಎಸ್‌ಆರ್‌ ಬಡಾವಣೆಯ ಸೆಕ್ಟರ್‌ 4ರಲ್ಲಿ ವಸತಿ ಪ್ರದೇಶದಲ್ಲಿ ಒಂದು ಕಟ್ಟಡ ನಿರ್ಮಾಣವಾಗುತ್ತಿದೆ. ಅದರ ಸ್ವರೂಪವನ್ನು ನೋಡಿದರೆ, ಅದನ್ನು ವಾಣಿಜ್ಯ ಬಳಕೆಗೆಂದೇ ನಿರ್ಮಿಸಲಾಗುತ್ತಿದೆ ಎಂಬ ಬಗ್ಗೆ ಸಂದೇಹವೇ ಇಲ್ಲ. ಈ ಕಟ್ಟಡದ ಯೋಜನೆಗೆ ಮಂಜೂರಾತಿ ನೀಡಿದ್ದಾರೆಯೇ ಎಂದು ನಾನು ಬಿಬಿಎಂಪಿಯ ವಲಯ ಕಚೇರಿಗೆ ಹೋಗಿ ಪರಿಶೀಲಿಸಿದ್ದೆ. ಆ ಕಟ್ಟಡಕ್ಕೆ ಯೋಜನಾ ವಿನ್ಯಾಸವೇ ಮಂಜೂರಾಗಿರಲಿಲ್ಲ. ಕಟ್ಟಡ ನಿರ್ಮಾಣ ಆರಂಭವಾಗಿ ಮೂರು ತಿಂಗಳುಗಳೇ ಕಳೆದಿವೆ. ನಾನು ಈ ಬಗ್ಗೆ ವಿಚಾರಿಸಿದ ಬಳಿಕ ಅದರ ಕಟ್ಟಡ ಯೋಜನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಿವಾಸಿಯೊಬ್ಬರು ದೂರಿದರು.

‘ಅದರ ಮಂಜೂರಾತಿಯ ಪ್ರತಿಯನ್ನು ಪಡೆದುಕೊಂಡಿದ್ದೇನೆ. ಕನಿಷ್ಠ ಪಕ್ಷ ಮಂಜೂರಾತಿ ಪಡೆದ ಯೋಜನೆ ಪ್ರಕಾರವಾದರೂ ಕಟ್ಟಡ ಇರಬೇಕಿತ್ತು. ಆದರೆ, ಅದನ್ನೂ ಉಲ್ಲಂಘಿಸಲಾಗಿದೆ. ಸೆಟ್‌ಬ್ಯಾಕ್‌ ಬಿಡದೆಯೇ ಕಟ್ಟಡ ನಿರ್ಮಿಸಲಾಗಿದೆ. ವಾಸಕ್ಕೆ ಕಟ್ಟಡ ನಿರ್ಮಿಸುವ ಯಾರಾದರೂ ಚಾವಣಿಗೆ ತಗಡಿನ ಶೀಟ್‌ ಹಾಕುತ್ತಾರೆಯೆ? 40 ಅಡಿ ಅಗಲದ ರಸ್ತೆಯ ಬಳಿಯ ಕಟ್ಟಡದಲ್ಲಿ ಶೇ 20ರಷ್ಟು ವಾಣಿಜ್ಯ ಬಳಕೆಗೆ ಅವಕಾಶ ಕಲ್ಪಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು. ಆದರೆ, ಈ ಕಟ್ಟಡವನ್ನು ನೋಡಿದರೆ ಅದನ್ನು ಸಂಪೂರ್ಣ ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಶ್ಚಿತ’ ಎಂದರು.

ಜೆ.ಪಿ.ನಗರ ಬಡಾವಣೆಯ ಐದನೇ ಹಂತದ ವಸತಿ ಪ್ರದೇಶದಲ್ಲೂ ವಾಣಿಜ್ಯ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ದೂರುತ್ತಾರೆ ಸ್ಥಳೀಯ ನಿವಾಸಿ ಟಿ.ಎಸ್‌.ಶಿವಭದ್ರಪ್ಪ.

‘ಇಲ್ಲಿ ರಸ್ತೆಯ ಅಗಲ 40 ಅಡಿಗಿಂತ ಕಡಿಮೆ ಇರುವ ಕಡೆಯೂ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸಾರಕ್ಕಿ ವಾರ್ಡ್‌ನ ಆರೋಗ್ಯಾಧಿಕಾರಿಗೆ 2017ರ ಡಿಸೆಂಬರ್‌ 18ರಂದು ದೂರು ನೀಡಿದ್ದೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತರು ಪತ್ರಿಕೆಗಳಲ್ಲಿ ನೀಡಿದ್ದ ಸಾರ್ವಜನಿಕ ಪ್ರಕಟಣೆಯ ಪ್ರತಿಯನ್ನೂ ಒದಗಿಸಿದ್ದೆ. ಬಳಿಕ ಪಾಲಿಕೆ ಅಧಿಕಾರಿಗಳು ಕ್ಲಿನಿಕ್‌ ಸ್ಥಗಿತಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಿ ಕೈತೊಳೆದುಕೊಂಡಿದ್ದಾರೆ. ಕ್ಲಿನಿಕ್‌ ಈಗಲೂ ನಡೆಯುತ್ತಿದೆ’ ಎಂದು ಅವರು ದೂರಿದರು.

‘ಪರವಾನಗಿ ನವೀಕರಿಸುವುದಿಲ್ಲ’
‘ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ ವಸತಿ ಪ್ರದೇಶದಲ್ಲಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಇಂತಹ ಮಳಿಗೆಗಳ ಉದ್ದಿಮೆ ಪರವಾನಗಿ ರದ್ದುಪಡಿಸುತ್ತಿದ್ದೇವೆ’ ಎನ್ನುತ್ತಾರೆ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ.

ನಗರದಲ್ಲಿ ಪರವಾನಗಿ ಪಡೆದ ಉದ್ದಿಮೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. 2014ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 58 ಸಾವಿರ ಉದ್ದಿಮೆ ಪರವಾನಗಿಗಳನ್ನು ನೀಡಲಾಗಿತ್ತು. ಈಗ ಅವುಗಳ ಸಂಖ್ಯೆ 41 ಸಾವಿರಕ್ಕೆ ಇಳಿದಿದೆ. ಬಿಬಿಎಂಪಿಯು ಪೂರ್ವ ವಲಯದಲ್ಲಿ ಅತಿ ಹೆಚ್ಚು ಉದ್ದಿಮೆ ಪರವಾನಗಿ ನೀಡಿದೆ. ಪೂರ್ವ ವಲಯದಲ್ಲಿ 2019–20ರಲ್ಲಿ ಸುಮಾರು 692 ಉದ್ದಿಮೆ ಪರವಾನಗಿಗಳನ್ನು ನವೀಕರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT