ಬೆಂಗಳೂರು: ಒಂಬತ್ತು ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸದಿದ್ದರೆ, ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
ಬೇಡಿಕೆಗಳನ್ನು ಈಡೇರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸಂಘ ಮೇ 6ರಂದು ಮನವಿ ಸಲ್ಲಿಸಿತ್ತು. ಮುಖ್ಯ ಆಯುಕ್ತರ ಸೂಚನೆಯಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು.
ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ ವಿಶೇಷ ಆಯುಕ್ತರು, ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದರೆ, ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಸಭೆಯ ಅಂತ್ಯದಲ್ಲಿ ತಿಳಿಸಲಾಯಿತು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ತಿಳಿಸಿದರು.
‘ಗುತ್ತಿಗೆದಾರರ ಬಿಲ್ ಪಾವತಿ ಹಾಗೂ ಹಲವು ತೊಂದರೆಗಳ ನಿವಾರಣೆಗೆ ಮುಖ್ಯ ಆಯುಕ್ತರಿಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ನೀಡಲಾಗಿತ್ತು. ಅದನ್ನು ಈಡೇರಿಸುವ ಮೌಖಿಕ ಭರವಸೆಯನ್ನೂ ನೀಡಿದ್ದರು. ಆದರೆ ಅದು ಜಾರಿಯಾಗಿರಲಿಲ್ಲ. ಹೀಗಾಗಿ, ಮತ್ತೆ ಮನವಿ ಮಾಡಿ, ಒಂದು ವಾರದ ಗಡುವು ನೀಡಿದ್ದೇವೆ’ ಎಂದರು.
ಬಿಬಿಎಂಪಿ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿ ಬಿಲ್‌ಗಳು 25 ತಿಂಗಳಿಂದ ಬಾಕಿ ಇದ್ದು, 10 ತಿಂಗಳ ಹಣವನ್ನು ಬಿಡುಗಡೆ ಮಾಡಬೇಕು.
2021ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಪಾವತಿಸಿರುವ ಬಿಲ್‌ಗಳಲ್ಲಿ ತಡೆಹಿಡಿಯಲಾಗಿರುವ ಶೇ 25ರಷ್ಟನ್ನು ಹಣವನ್ನು ಪಾವತಿಸಬೇಕು.
ವಲಯ ಎಂಜಿನಿಯರ್‌ಗಳ ತಾಂತ್ರಿಕ ಸಲಹೆಗಾರರಾಗಿರುವ ಎಂಜಿನಿಯರ್‌ಗಳಿಂದಲೇ ಪೂರ್ಣಗೊಂಡಿರುವ ಬಿ.ಆರ್ ದಾಖಲಿಸಲು ಪ್ರೀ ಆಡಿಟ್ ನಿರ್ವಹಿಸಬೇಕು.
ಗುಣಮಟ್ಟ ಭರವಸೆ ವಿಭಾಗದ ಅಧಿಕಾರಿಗಳ ಕಿರುಕುಳದಿಂದ ಬಿಲ್ ಪಾವತಿ ವಿಳಂಬವಾಗುತ್ತಿದ್ದು, ಒಂದು ವಿಭಾಗದಿಂದಲೇ ಪರಿಶೀಲನೆ ನಡೆಸಿ ತ್ವರಿತವಾಗಿ ಬಿಲ್ ಪಾವತಿಯಾಗುವಂತೆ ಮಾಡಬೇಕು.
ವಲಯ ಮುಖ್ಯ ಎಂಜಿನಿಯರ್‌ಗಳಿಂದ ಬಿಲ್ ಪಾವತಿಯಲ್ಲಿ ವಿಳಂಬ ಹಾಗೂ ಕಿರುಕುಳ ಉಂಟಾಗುತ್ತಿದ್ದು, ಹಿಂದಿನಂತೆಯೇ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಿಂದಲೇ ಬಿಲ್ ಪಾವತಿಸಬೇಕು.
ಟಿವಿಸಿಸಿ ವಿಭಾಗದಿಂದ ಕೈಗೊಳ್ಳಲಾಗಿರುವ 2019–20ರಿಂದ 2022–23ರವರೆಗಿನ ಕಾಮಗಾರಿಗಳ ರ‍್ಯಾಂಡಮೈಸೇಷನ್ ತಪಾಸಣೆಯನ್ನು ಕೈಬಿಡಬೇಕು.
ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ‘ಅಗತ್ಯ’ ಕಾಮಗಾರಿ ಎಂದು ಪರಿಗಣಿಸಿ, ತ್ವರಿತವಾಗಿ ಬಿಲ್ ಪಾವತಿ ಮಾಡಬೇಕು.
₹50 ಲಕ್ಷದವರೆಗಿನ ಮೊತ್ತದ ಟೆಂಡರ್ ಅನುಮೋದನೆ ಹಾಗೂ ಶೇ 5ರವರೆಗೆ ಟೆಂಡರ್ ಪ್ರೀಮಿಯಂ ಅಧಿಕಾರವನ್ನು ವಲಯ ಮುಖ್ಯ ಎಂಜಿನಿಯರ್ ವ್ಯಾಪ್ತಿಗೆ ನೀಡಬೇಕು.
2021ರಿಂದ ಕೆಆರ್‌ಐಡಿಎಲ್ ಮೂಲಕ ನಿರ್ವಹಿಸಲಾಗಿರುವ ಕಾಮಗಾರಿಗಳ ಬಿಲ್ ಪಾಕಿ ಪಾವತಿಗೆ ಸರ್ಕಾರ ಅನುಮೋದಿಸಿದೆ. ನಾಲ್ಕು ವರ್ಷಗಳ ಹಿಂದಿನ ಕಾಮಗಾರಿಗಳನ್ನು ಟಿವಿಸಿಸಿಯಿಂದ ಇದೀಗ ಪರಿಶೀಲಿಸುವ ಆದೇಶ ಕೈಬಿಟ್ಟು, ಕೂಡಲೇ ಬಿಲ್ ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.