ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ನೌಕರರ ಹೋರಾಟ: ಫೆ.9ರಿಂದ ಸಾಮೂಹಿಕ ರಜೆ

Last Updated 3 ಫೆಬ್ರುವರಿ 2023, 23:52 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಲ್ಲಿಸಲಾಗಿರುವ ಮನವಿಗೆ ಸ್ಪಂದಿಸದಿರುವುದರಿಂದ ಫೆ.9ರಿಂದ ಸಾಮೂಹಿಕ ರಜೆ ಹಾಕಿ ಹೋರಾಟ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.

ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿಪತ್ರಗಳನ್ನು ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು, ನೌಕರರು ಆಡಳಿತ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಹೋರಾಟ ಆರಂಭಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ತಿಳಿಸಿದರು.

ಆಡಳಿತ ವಿಭಾಗದ ವಿಶೇಷ ಆಯುಕ್ತರು ಮತ್ತು ಉಪ ಆಯುಕ್ತರನ್ನು ಪ್ರಭಾರದ ಮೇಲೆ ನೇಮಿಸಿರುವುದರಿಂದ ಪಾಲಿಕೆ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಆಡಳಿತದ ಹಿತದೃಷ್ಟಿಯಿಂದ ಕೂಡಲೇ ಕಾಯಂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

‘ಬಿಬಿಎಂಪಿಯಲ್ಲಿ ಅಧಿಕಾರ ಪ್ರತ್ಯೋಜನೆ ಪಾಲಿಸದಿರುವುದರಿಂದ ಸಿಬ್ಬಂದಿಗೆ ಆಡಳಿತ ಹಾಗೂ ಆರ್ಥಿಕ ಸೌಲಭ್ಯ ಸಿಗುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ ವಿಲೀನ ಆದೇಶ ನೀಡದಿರುವುದರಿಂದ ಆರ್ಥಿಕವಾಗಿ ಸಂಕಷ್ಟವಾಗಿದೆ. ಸಿಬ್ಬಂದಿಯ ಅವಲಂಬಿತರಿಗೆ ಆರೋಗ್ಯ ಚಿಕಿತ್ಸೆಗೆ ಕಾರ್ಡ್‌ ನೀಡಿಲ್ಲ. ಎಲ್ಲ ವೃಂದದ ಮುಂಬಡ್ತಿಗಳನ್ನು ನೀಡಬೇಕು. 243 ವಾರ್ಡ್‌ಗಳು ರಚನೆಯಾಗಿರುವುದರಿಂದ 198 ವಾರ್ಡ್‌ಗಳಿರುವ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಅಗತ್ಯವಿರುವ ಸಿಬ್ಬಂದಿಯನ್ನು ಕೂಡಲೆ ನೇಮಿಸಿಕೊಳ್ಳಬೇಕು. ಸರ್ಕಾರ ಹಾಗೂ ಕೌನ್ಸಿಲ್‌ ಅನುಮೋದಿಸಿರುವ 707 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಬಿಬಿಎಂಪಿ ಆರೋಗ್ಯ ಇಲಾಖೆಗೆ ಕಾನೂನುಬಾಹಿರವಾಗಿ ಮಾರ್ಷಲ್‌ಗಳನ್ನು ನೇಮಿಸಲಾಗಿದ್ದು, ಅದನ್ನು ರದ್ದುಪಡಿಸಬೇಕು. ವಾಹನ ನಿಲ್ದಾಣಕ್ಕೆ ಸ್ಥಳ ಇಲ್ಲದಿರುವುದರಿಂದ ಪುರಸಭೆ ಬಳಿ ನೀರಿನ ಘಟಕ ಸ್ಥಾಪನೆ ಪ್ರಸ್ತಾವ ಕೈಬಿಡಬೇಕು ಎಂದರು.

ಎರಡು ವರ್ಷದಿಂದ ನಾಡಪ್ರಭು ಕೆಂಪೇಗೌಡ ದಿನ ಆಚರಿಸಿಲ್ಲ. 2022ರ ಸಾಲಿನಲ್ಲಿ ದಿನಾಚರಣೆ ಸಂಬಂಧ ಪ್ರಕ್ರಿಯೆ ಆರಂಭವಾದರೂ ಕಾರ್ಯಕ್ರಮ ನಡೆಯಲಿಲ್ಲ. ಹೀಗಾಗಿ, ಕಾರ್ಯಕ್ರಮ ಆಯೋಜಿಸಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಬೇಕು ಅದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್‌ ದಿನಾಚರಣೆ ಮಾಡಿ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT