ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಹಡಿ ಕಟ್ಟಡ ನಿರ್ಮಾಣ ನಿರ್ಧಾರ ಮರುಪರಿಶೀಲಿಸಲು ಸರ್ಕಾರಕ್ಕೆ ಬಿಬಿಎಂಪಿ ಕೋರಿಕೆ

ಕಬ್ಬನ್‌ ಪಾರ್ಕ್‌ ರಕ್ಷಣೆಗೆ ಬಂದ ಪಾಲಿಕೆ
Last Updated 5 ನವೆಂಬರ್ 2019, 7:34 IST
ಅಕ್ಷರ ಗಾತ್ರ

ಬೆಂಗಳೂರು: ಪಾರಂಪರಿಕ ಕಬ್ಬನ್‌ ಉದ್ಯಾನದ ರಕ್ಷಣೆಗೆ ಬಿಬಿಎಂಪಿ ಧಾವಿಸಿದೆ. ಈ ಉದ್ಯಾನದಲ್ಲಿ ಏಳು ಮಹಡಿಗಳ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರವನ್ನು ಕೋರಿದೆ.

ಕಬ್ಬನ್‌ ಉದ್ಯಾನದೊಳಗೆ ಹೈಕೋರ್ಟ್‌ನ ಏಳು ಮಹಡಿಗಳ ಆನೆಕ್ಸ್‌ ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಮರುದಿನವೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಇಲ್ಲಿ ಕಟ್ಟಡ ನಿರ್ಮಿಸುವ ಸಾಧ್ಯತೆ ಬಗ್ಗೆ ಚರ್ಚಿಸಲು ನಗರ ಯೋಜನೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸೋಮವಾರ ನಡೆದ ಈ ಸಭೆಯಲ್ಲಿ ಹಾಜರಿದ್ದ ಬಿಬಿಎಂಪಿ ಅಧಿಕಾರಿಗಳು ಪರಿಷ್ಕೃತ ನಗರ ಮಹಾ ಯೋಜನೆ (ಆರ್‌ಎಂಪಿ) 2015ರ ವಲಯ ನಿಬಂಧನೆಗಳು ಈ ಪ್ರಸ್ತಾವಿತ ಕಟ್ಟಡದ ನಿರ್ಮಾಣಕ್ಕೂ ಅನ್ವಯವಾಗಲಿವೆ ಎಂದು ತಿಳಿಸಿದರು.

‘ಬಿಬಿಎಂಪಿ ಆಯುಕ್ತರ ಸೂಚನೆ ಮೇರೆಗೆ ಸಭೆಯಲ್ಲಿ ಭಾಗವಹಿಸಿದ್ದೆವು. ಪ್ರಸ್ತಾವಿತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಏನೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬ ಬಗ್ಗೆ ಸಭೆಯ ಗಮನಕ್ಕೆ ತರುವಂತೆ ಆಯುಕ್ತರು ಸೂಚಿಸಿದ್ದರು. ವಲಯ ನಿಬಂಧನೆಗೆ ಸಂಬಂಧಿಸಿದ ಅಂಶಗಳನ್ನು ನಾವು ಸಭೆಯಲ್ಲಿ ಮಾಹಿತಿ ನೀಡಿದ್ದೇವೆ. ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನು ಪಾರಂಪರಿಕ ತಾಣಗಳ ಸಂರಕ್ಷಣಾ ವಲಯ ಎಂದು ಗುರುತಿಸಲಾಗಿದೆ. ಹಾಗಾಗಿ ಇಲ್ಲಿ ಪ್ರಸ್ತಾವಿತ ಕಟ್ಟಡವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ’ ಎಂದು ಈ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅವಕಾಶ ಇಲ್ಲದಿದ್ದರೂ ಇಲ್ಲಿ ಕಟ್ಟಡ ನಿರ್ಮಿಸಲೇಬೇಕು ಎಂದು ಸರ್ಕಾರ ಪಣ ತೊಟ್ಟಂತಿದೆ. ಪ್ರಸ್ತಾವಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಪೂರಕವಾಗಿರುವ ಕಾನೂನು ಸಾಧ್ಯತೆಗಳು ಆರ್‌ಎಂಪಿ 2031ರ ಕರಡಿನಲ್ಲಿ ಇವೆಯೇ ಎಂದು ಪರಿಶೀಲಿಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಯವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ನಗರದಲ್ಲಿರುವ ಎಲ್ಲ ಸಾರ್ವಜನಿಕ ಸ್ವತ್ತುಗಳ ಸಂರಕ್ಷಣೆಯ ಹೊಣೆ ಬಿಬಿಎಂಪಿಯದು. ಹಾಗಾಗಿ, ನಿರ್ಮಾಣ ಕಾರ್ಯದಲ್ಲಿ ಅನುಸರಿಸಬೇಕಾದ ಎಲ್ಲ ಕಾನೂನು ಕ್ರಮಗಳ ಬಗ್ಗೆ ನಾವು ವಿವರಣೆ ನೀಡಿದ್ದೇವೆ. ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಸ್ಥಳವು ಆರ್‌ಎಂಪಿಯ ವಲಯ ನಕಾಶೆಯ ಪ್ರಕಾರ ಪಾರಂಪರಿಕ ಸಂರಕ್ಷಣಾ ವಲಯದಲ್ಲಿದೆ. ಅಲ್ಲಿ ಕಟ್ಟಡ ನಿರ್ಮಿಸಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ನಾವು ವಿವರಿಸಿದ್ದೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ವಲಯ ನಿಬಂಧನೆ ಎಲ್ಲರಿಗೂ ಅನ್ವಯವಾಗುವುದರಿಂದ ಅಲ್ಲಿ ಕಟ್ಟಡ ನಿರ್ಮಿಸುವ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಕೋರಿದ್ದೇವೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಪ್ರಸ್ತಾವಿತ ಕಟ್ಟಡ ನಿರ್ಮಾಣಕ್ಕೆ ಇರುವ ಕಾನೂನು ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಮುಖ್ಯಕಾರ್ಯ
ದರ್ಶಿಯವರು ಬಿಬಿಎಂಪಿಯ ನಗರ ಯೊಜನಾ ವಿಭಾಗದ ಅಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ಹಮ್ಮಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ವಿಜಯ್‌ಭಾಸ್ಕರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು, ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT