ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶುಲ್ಕ; ‘ಕಂಫರ್ಟ್’ ಆಸ್ಪತ್ರೆ ವಿರುದ್ಧ ಎಫ್‌ಐಆರ್

ನೋಟಿಸ್ ನೀಡಿದರೂ ಉತ್ತರಿಸದ ವ್ಯವಸ್ಥಾಪಕ ನಿರ್ದೇಶಕ
Last Updated 9 ಜೂನ್ 2021, 21:28 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ ಆರೋಪದಡಿ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ‘ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಬಿಬಿಎಂಪಿಯ ಸಿ.ವಿ.ರಾಮನ್ ನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ವಿ. ಶಿವೇಗೌಡ ದೂರು ನೀಡಿದ್ದಾರೆ. ಅದರನ್ವಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಾಕ್ಲಿನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೆಳಿದರು.

ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತಲೂ ಹೆಚ್ಚು ದರ ವಸೂಲಿ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ಹಾಗೂ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸುಮಾರು ₹ 65 ಲಕ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದನ್ನು ಪತ್ತೆ ಹಚ್ಚಿದ್ದ ತಂಡ, ವಾರದೊಳಗೆ ರೋಗಿಗಳಿಗೆ ಹಣ ಮರುಪಾವತಿ ಮಾಡುವಂತೆ ಸೂಚಿಸಿ ನೋಟಿಸ್ ನೀಡಿತ್ತು. ನೋಟಿಸ್‌ಗೆ ಉತ್ತರಿಸದ ಡಾ. ಜಾಕ್ಲಿನ್, ಆರೋಗ್ಯ ಸರಿ ಇಲ್ಲವೆಂದು ಸಬೂಬು ನೀಡಿ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಇದೀಗ ವಿ. ಶಿವೇಗೌಡ ದೂರು ದಾಖಲಿಸಿದ್ದಾರೆ.

ರೋಗಿಗಳಿಗೆ ವಂಚನೆ: ‘ಸರ್ಕಾರದ ಆದೇಶ ಹಾಗೂ ದರಪಟ್ಟಿಯನ್ನು ಲೆಕ್ಕಿಸದೇ ಆಸ್ಪತ್ರೆಯವರು ತಮ್ಮಿಷ್ಟದಂತೆ ರೋಗಿಗಳಿಂದ ದರ ವಸೂಲಿ ಮಾಡಿದ್ದಾರೆ. ಈ ಮೂಲಕ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ರೋಗಿಗಳನ್ನು ವಂಚಿಸಿದ್ದಾರೆ ಎಂಬುದಾಗಿ ಶಿವೇಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಪರಾಧ ಸಂಚು (ಐಪಿಸಿ 34), ವಂಚನೆ (ಐಪಿಸಿ 420) ಆರೋಪ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT