ಶುಕ್ರವಾರ, ಆಗಸ್ಟ್ 19, 2022
25 °C
ಹೆಬ್ಬಾಳ ಕಣಿವೆಯ ತಗ್ಗುಪ್ರದೇಶಗಳನ್ನು ಪರಿಶೀಲಿಸಿದ ಬಿಬಿಎಂಪಿ ಆಡಳಿತಾಧಿಕಾರಿ

ಮಳೆ ಹಾನಿ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಗೌರವ ಗುಪ್ತ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಬ್ಬಾಳ ಕಣಿವೆ ವ್ಯಾಪ್ತಿಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್, ರಾಚೇನಹಳ್ಳಿ ಕೆರೆ, ಹೆಣ್ಣೂರು ರೈಲ್ವೆ ಸೇತುವೆ ಹಾಗೂ ಇನ್ನಿತರ ಮಳೆಹಾನಿ ಪ್ರದೇಶಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ನೀರಿನಿಂದ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜವಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಬಳಿ ಮಳೆಯಾದರೆ ನೀರು ತುಂಬಿಕೊಳ್ಳುತ್ತದೆ. 2-3 ಗಂಟೆಗಳ‌ ಕಾಲ ರಸ್ತೆ ಮೇಲೆ ನೀರು ನಿಂತಿರುತ್ತದೆ. ಇದರಿಂದ ಸಮಸ್ಯೆ ಆಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ಆಡಳಿತಾಧಿಕಾರಿ ಬಳಿ ಸಮಸ್ಯೆ ಹೇಳಿಕೊಂಡರು.

‘ಮಳೆಯಾದರೆ ಅಮೃತಹಳ್ಳಿ ಕೆರೆಯಿಂದ ರಾಚೇನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ಹೆಚ್ಚು ನೀರು ಹರಿಯುತ್ತದೆ. ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗುತ್ತವೆ. ನೀರಿನ ದಿಕ್ಕು ಬದಲಿಸುವ ನಾಲೆ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ಪಾಲಿಕೆಯ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್ ತಿಳಿಸಿದರು. 

‘ಜಲಮಂಡಳಿ, ಕೆರೆ, ರಾಜಕಾಲುವೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮನ್ವಯದಿಂದ  ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕು’ ಎಂದು ಗೌರವ ಗುಪ್ತ ಸೂಚನೆ ನೀಡಿದರು.

ಎಂಬೆಸ್ಸಿ ಗ್ರೂಪ್‌ಗೆ ಎಚ್ಚರಿಕೆ
ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ನಾಲೆ ಮೇಲೆ ಚಾವಣಿ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಎಂಬೆಸ್ಸಿ ಗ್ರೂಪ್‌ಗೆ ಗೌರವ ಗುಪ್ತ ಸೂಚನೆ ನೀಡಿದರು.

ಮಳೆಯಿಂದ ಜಲಾವೃತಗೊಂಡಿದ್ದ ಮಾನ್ಯತಾ ಟೆಕ್‌ ಪಾರ್ಕ್ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ ವೇಳೆ ‘ಹೆಬ್ಬಾಳ ಕೆರೆ ಹಾಗೂ ರಾಚೇನಹಳ್ಳಿ ಕೆರೆ ನೀರು ಹೆಬ್ಬಾಳ ಕಣಿವೆ ಮೂಲಕ ಸಾಗುತ್ತದೆ. ನಾಲೆ ಮೇಲೆ ಚಾವಣಿ ಅಳವಡಿಸಿರುವ ಕಾರಣ ಹೂಳು ತೆಗೆಯಲು ಸಮಸ್ಯೆ ಆಗುತ್ತಿದೆ’ ಎಂದು ಕೆರೆ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.

‘ಎಂಬೆಸ್ಸಿ ಗ್ರೂಪ್‌ನವರೇ ಮೇಲ್ಚಾವಣಿ ತೆರವುಗೊಳಿಸಿ ಮರುವಿನ್ಯಾಸಗೊಳಿಸಬೇಕು. ಒಂದು ವಾರದಲ್ಲಿ ಅವರು ಕ್ರಿಯಾಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಪಾಲಿಕೆಯಿಂದ ಮೇಲ್ಚಾವಣಿ ತೆರವುಗೊಳಿಸಿ ಅದಕ್ಕೆ ತಗಲುವ ಮೊತ್ತದ ದುಪ್ಪಟ್ಟು ದಂಡ ವಸೂಲು ಮಾಡಿ’ ಎಂದು ಸೂಚನೆ ನೀಡಿದರು.

ಸೆಪರೇಟರ್ ಕಾಮಗಾರಿಯನ್ನೂ ಇದೇ ವೇಳೆ ತಪಾಸಣೆ ನಡೆಸಿದರು. ‘ರೈಲ್ವೆ ಹಳಿ ಕೆಳಗೆ ಎರಡು ಸೇತುವೆ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್ ಮಾಹಿತಿ ನೀಡಿದರು.

ರೈಲ್ವೆ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಗೌರವ ಗುಪ್ತ, ಸಮಸ್ಯೆ ಬಗ್ಗೆ ಮನವರಿಕೆ ಮಾಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು