ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೆರೆಗಳ ಅಭಿವೃದ್ಧಿಗೆ ₹2 ಸಾವಿರ ಕೋಟಿ ವೆಚ್ಚ

ಮಾಲಿನ್ಯದಿಂದ ಮುಕ್ತವಾಗಿಲ್ಲ * ವೃದ್ಧಿಯಾಗದ ನೀರಿನ ಗುಣಮಟ್ಟ
Published 4 ಜುಲೈ 2023, 0:30 IST
Last Updated 4 ಜುಲೈ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆರೆಗಳ ನಗರಿ’ಯಲ್ಲಿ ಜೀವಂತ ಕೆರೆಗಳ ಸಂಖ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ನಡುವೆ ಸಾಕಷ್ಟು ಗೊಂದಲವಿದ್ದರೂ, ನಗರದಲ್ಲಿ 156 ಕೆರೆಗಳ ಅಭಿವೃದ್ಧಿಗೆ ₹2 ಸಾವಿರಕ್ಕೂ ಹೆಚ್ಚು ಹಣ ವೆಚ್ಚ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 211 ಕೆರೆಗಳಿದ್ದು, 2010ರಿಂದ ಈವರೆಗೆ 156 ಕೆರೆಗಳು ಮಾತ್ರ ಅಭಿವೃದ್ಧಿ ಪಥದಲ್ಲಿವೆ. ಒಂದೊಂದು ಕೆರೆಗೆ ಕೋಟ್ಯಂತರ ವೆಚ್ಚ ಮಾಡಲಾಗಿದ್ದರೂ ಕೊಳಚೆ, ಕೊಳಕಿನಿಂದ ಮಾತ್ರ ಮುಕ್ತವಾಗಿಲ್ಲ. ಅಭಿವೃದ್ಧಿ ಮಾಡಲಾಗಿರುವ ಕೆರೆಗಳಿಗೇ ಮತ್ತೆ ಮತ್ತೆ ವೆಚ್ಚ ಮಾಡಲಾಗುತ್ತಿದೆ. ಕನಿಷ್ಠ ಅಭಿವೃದ್ಧಿಯನ್ನೂ ಕಾಣದ 29 ಕೆರೆಗಳು ಇನ್ನೂ ಯೋಜನಾ ಹಂತದಲ್ಲೇ ಉಳಿದಿವೆ.

ರಾಜ್ಯ ಸರ್ಕಾರ 2008ರಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಹಾಗೂ ಬಿಡಿಎಗೆ ಹಸ್ತಾಂತರಿಸಿತ್ತು. 12 ಕೆರೆಗಳ ಅಭಿವೃದ್ಧಿಗೆ ನೂರು ಕೋಟಿ ವೆಚ್ಚ ತೋರಿದ ನಂತರ ಬಿಡಿಎ ಹಣವಿಲ್ಲ ಎಂದು ಕೈಚಾಚಿತು. ಮತ್ತೆ ಎಲ್ಲ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಬಿಬಿಎಂಪಿಯ ಹೆಗಲೇರಿತು. ಹಣವಿಲ್ಲ ಎಂದುಕೊಂಡೇ ಬಿಬಿಎಂಪಿ ಸುಮಾರು ಎರಡು ಸಾವಿರ ಕೋಟಿ ವೆಚ್ಚ ಮಾಡಿದೆ.

2018–19ನೇ ಸಾಲಿನವರೆಗೆ ಬಿಬಿಎಂಪಿ 65 ಕೆರೆಗಳ ಅಭಿವೃದ್ಧಿಗೆ ಮುನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಈ ಅಭಿವೃದ್ಧಿಯಾದ ಕೆರೆಗಳಿಗೆ ಮತ್ತೆ ಮುಂದಿನ ಸಾಲುಗಳಲ್ಲಿ ಇನ್ನಷ್ಟು ಕೋಟಿಗಳಷ್ಟು ಖರ್ಚು ಮಾಡಿದೆ. 

ಕೆರೆಗಳ ಅಭಿವೃದ್ಧಿಗೆ ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ’ (ಕೆಟಿಸಿಡಿಎ) ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನುಮೋದನೆ ಪಡೆದುಕೊಳ್ಳಬೇಕು. 2018–19ರಿಂದ 2022–23ನೇ ಸಾಲಿನವರೆಗೆ ಬಿಬಿಎಂಪಿ ಹಾಗೂ ಬಿಡಿಎ ₹1,427 ಕೋಟಿಗೂ ಹೆಚ್ಚಿನ ಮೊತ್ತದ ಡಿಪಿಆರ್‌ಗಳಿಗೆ ಅನುಮೋದನೆ ಪಡೆದುಕೊಂಡಿವೆ. ನಂತರ, ಕಾಮಗಾರಿಗಳಿಗೆ ಇದಕ್ಕಿಂತ ಹೆಚ್ಚಿನ ವೆಚ್ಚವನ್ನೂ ವ್ಯಯ ಮಾಡಲಾಗಿದೆ.

ಬಿಬಿಎಂಪಿ ಅಧಿಕೃತವಾಗಿ ಇಷ್ಟೇ ಮೊತ್ತವನ್ನು ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಿಲ್ಲ. ಆದರೆ, ಪಾಲಿಕೆಯೇ ಪ್ರಕಟಿಸಿರುವ ‘ರೆಸ್ಟೋರೇಷನ್‌ ಆಫ್‌ ಲೇಕ್ಸ್‌’ ಮತ್ತು ಕೆಟಿಸಿಡಿಎ ಅನುಮೋದಿಸಿರುವ ಡಿಪಿಆರ್‌ಗಳ ಮೌಲ್ಯಗಳು ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಿವೆ.

ಕಾಂಕ್ರೀಟ್ ಟ್ಯಾಂಕ್‌: ಐಐಎಸ್‌ಸಿ

ಬೆಂಗಳೂರಿನಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕೆರೆಗಳು ಜೀವವೈವಿಧ್ಯವನ್ನು ರಕ್ಷಿಸಿ ಬೆಳೆಸುವ ತಾಣಗಳಾಗದೆ ಸಿವಿಲ್‌ ಕಾಮಗಾರಿ ನಡೆಸಿರುವ ‘ಕಾಂಕ್ರೀಟ್‌ ಟ್ಯಾಂಕ್‌’ಗಳಾಗಿವೆ. ಈ ಕೆರೆಗಳಲ್ಲಿ ಶುದ್ಧವಾದ ನೀರಿಲ್ಲ. ಕೊಳಕೆ ತುಂಬಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ವರದಿ ತಿಳಿಸಿದೆ.

ಪ‍್ರೊ. ಟಿ.ವಿ. ರಾಮಚಂದ್ರ ನೇತೃತ್ವದಲ್ಲಿ ಗೌತಮ್‌ ಮತ್ತು ವಸಂತಾ ಜಗದೀಶನ್‌ ಅವರು ಸಲ್ಲಿಸಿರುವ ವರದಿಯಲ್ಲಿ, ಕೆರೆಗಳ ಪುನರುಜ್ಜೀವನ ಅಥವಾ ಅಭಿವೃದ್ಧಿಯಲ್ಲಿ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಪ್ರಾಮುಖ್ಯ ನೀಡಲಾಗಿದೆ. ಕೆರೆಯ ಮೌಲ್ಯವನ್ನು ಅರಿಯದೆ, ವೈಜ್ಞಾನಿಕ ಕಾಮಗಾರಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲಾಗಿದೆ.

ಕೆರೆಯಲ್ಲಿ ಕಲ್ಮಶಯುಕ್ತ ಹೂಳನ್ನು ಹೊರಗೆ ಹಾಕದೆ, ಅದನ್ನೇ ದ್ವೀಪದ ರೀತಿ ಮಾಡಿ ಸ್ವಚ್ಛ ನೀರು ಕಲುಷಿತಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಕೆರೆ ಅಭಿವೃದ್ಧಿಯಾದ ಮೇಲೆ ಅದಕ್ಕೆ ಒಳಚರಂಡಿ ನೀರು ಸೇರಿದಂತೆ ಕಲ್ಮಶ ಹರಿಯದಂತೆ ತಡೆಯುವ ಕೆಲಸಗಳು ಆಗಿಲ್ಲ. ಕೆರೆಗಳ ಅಭಿವೃದ್ಧಿ ಕಾಮಗಾರಿಯಿಂದ ‘ಸಿಮೆಂಟ್‌ ಬೌಲ್‌’ ಅನ್ನು ಸೃಷ್ಟಿಸಲಾಗಿದ್ದು, ಜಾಗಿಂಗ್‌, ವಾಕಿಂಗ್‌ ಪಾಥ್‌, ಸೌಂದರ್ಯೀಕರಣಕ್ಕೆ ಹೆಚ್ಚು ವ್ಯಯ ಮಾಡಲಾಗಿದ್ದು, ಕೆರೆ ಪರಿಸರವನ್ನು ಪುನಶ್ಚೇತನಗೊಳಿಸುವ ಕೆಲಸವಾಗಿಲ್ಲ ಎಂದು ‘ಸ್ಟೇಟಸ್‌ ಆಫ್‌ ರೆಸ್ಟೋರ್ಡ್‌ ಲೇಕ್ಸ್‌ ಇನ್‌ ಬೆಂಗಳೂರು: ಗ್ಯಾಪ್ಸ್‌ ಆ್ಯಂಡ್‌ ಸಲ್ಯೂಷನ್ಸ್‌’ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಸ್ಯಾಂಕಿಗೆ ₹46 ಕೋಟಿ ವೆಚ್ಚ!

2010ರಲ್ಲೇ ಅಭಿವೃದ್ಧಿ ಹೊಂದಿದ ಕೆರೆಗಳ ಪಟ್ಟಿಯಲ್ಲಿದ್ದ ಸ್ಯಾಂಕಿ ಕೆರೆಗೆ 2019–20ರಿಂದ ₹46.92 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಯ ಒತ್ತುವರಿಯನ್ನು ತೆರವು ಮಾಡದಿದ್ದರೂ, ಸೌಂದರ್ಯೀಕರಣ ಕಾಮಗಾರಿಗಳು ವೃದ್ಧಿಯಾಗುತ್ತಿವೆ. ಮಲ್ಲತ್ತಹಳ್ಳಿ ಕೆರೆಗೆ ₹80 ಕೋಟಿ ವೆಚ್ಚ ಮಾಡುವ ಯೋಜನೆ ಬಿಬಿಎಂಪಿಯಲ್ಲಿ ಇದ್ದು, ಇದರಲ್ಲಿ ಈಗಾಗಲೇ ಸಾಕಷ್ಟು ಬಿಡುಗಡೆಯಾಗಿದೆ. ಡಿಪಿಆರ್‌ ಮಾತ್ರ ₹31.5 ಕೋಟಿಗೆ ಅನುಮೋದನೆಯಾಗಿದೆ.

ರಾಚೇನಹಳ್ಳಿ, ಕೆಂಪಾಂಬುಧಿ, ಕಲ್ಕೆರೆ, ಜಕ್ಕೂರು, ಕೈಕೊಂಡ್ರಹಳ್ಳಿ, ದೊರೆಕೆರೆ, ಸೀಗೇಹಳ್ಳಿ, ಸಿಂಗಸಂದ್ರ, ಕೊಡಿಗೆ ಸಿಂಗಸಂದ್ರ, ಯಲಹಂಕ, ಯಲಚೇನಹಳ್ಳಿ, ಅಟ್ಟೂರು, ದೊಡ್ಡಬೊಮ್ಮಸಂದ್ರ, ಗರುಡಾಚಾರಪಾಳ್ಯ, ಜೆ.ಪಿ. ಪಾರ್ಕ್‌ ಮತ್ತಿಕೆರೆ, ಲಿಂಗಧೀರನಹಳ್ಳಿ, ಸ್ಯಾಂಕಿ, ವಿಭೂತಿಪುರ ಕೆರೆಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, ಇಂದಿಗೂ ಆ ಕೆರೆಗಳು ಸ್ವಚ್ಛವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT