ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಆಡಳಿತಾಧಿಕಾರಿ ನೇಮಕಕ್ಕೆ ಇಲ್ಲವೇ ಅವಕಾಶ?

Last Updated 8 ಸೆಪ್ಟೆಂಬರ್ 2020, 18:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಈಗಿನ ಕೌನ್ಸಿಲ್‌ನ ಈಗಿನ ಅವಧಿ ಇದೇ 10ರಂದು ಮುಗಿಯಲಿದೆ. ಆ ಬಳಿಕ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ 1976ರ ಕರ್ನಾಟಕ ಪೌರಾಡಳಿತ ಕಾಯ್ದೆಯಲ್ಲಿ ಅವಕಾಶ ಇಲ್ಲವೇ?

ಬಿಬಿಎಂಪಿಯ ಕೌನ್ಸಿಲ್‌ ಸಭೆಯಲ್ಲಿ ಈ ವಿಚಾರ ಮಂಗಳವಾರ ಚರ್ಚೆಗೆ ಒಳಗಾಯಿತು. ‘ಯಾವ ಕಾಯ್ದೆ ಅಡಿ ಪಾಲಿಕೆಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಪ್ರಶ್ನಿಸಿದರು.

ಇದಕ್ಕೆ ಆಯುಕ್ತರ ಪರವಾಗಿ ಉತ್ತರಿಸಿದ ವಿಶೇಷ ಆಯುಕ್ತ ಅನ್ಬುಕುಮಾರ್‌, ‘ಕೆಎಂಸಿ ಕಾಯ್ದೆ ಸೆಕ್ಷನ್‌ 100 ಎ ಪ್ರಕಾರ, ಚುನಾವಣೆ ನಡೆಸಲು ನ್ಯಾಯಾಲಯದ ತಡೆ ಇದ್ದಾಗ, ಕೌನ್ಸಿಲ್‌ನ ಮೂರನೇ ಎರಡರಷ್ಟು ಸದಸ್ಯರು ರಾಜೀನಾಮೆ ನೀಡಿದ್ದರೆ ಅಥವಾ ಮೂರನೇ ಎರಡರಷ್ಟು ಸದಸ್ಯರ ಸದಸ್ಯತ್ವ ರದ್ದಾಗಿದ್ದರೆ ಆಡಳಿತಾಧಿಕಾರಿಯನ್ನು ನೇಮಿಸಬಹುದು’ ಎಂದರು.

‘ಈಗ ಅಂತಹ ಪ್ರಮೇಯವೇ ಉದ್ಭವಿಸಿಲ್ಲ. ಯಾವ ಆಧಾರದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ ಎಂಬುದನ್ನು ಕಾನೂನುಕೋಶದ ಮುಖ್ಯಸ್ಥರು ಸ್ಪಷ್ಟಪಡಿಸಬೇಕು’ ಎಂದು ವಾಜಿದ್‌ ಒತ್ತಾಯಿಸಿದರು.

‘ಕೆಎಂಸಿ ಕಾಯ್ದೆಯ ಸೆಕ್ಷನ್ 508ರ ಪ್ರಕಾರ ಈ ಕಾಯ್ದೆಯ ಯಾವುದೇ ಅಂಶಗಳು ಅನ್ವಯ ಆಗದ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕಾರ ಚಲಾಯಿಸಿ ರಾಜ್ಯಪತ್ರದಲ್ಲಿ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟಿಸಿ ಆಡಳಿತಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳಬಹುದು. ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿಲ್ಲದೆ ಬಿಕ್ಕಟ್ಟು ಸೃಷ್ಟಿಯಾದರೆ, ಅದನ್ನು ನಿವಾರಿಸಲು ಸೆಕ್ಷನ್‌ 509ರ ಪ್ರಕಾರ ಕ್ರಮ ಕೈಗೊಳ್ಳಬಹುದು’ ಎಂದು ಕಾನೂನುಕೋಶದ ಮುಖ್ಯಸ್ಥರು ತಿಳಿಸಿದರು.

‘ಚುನಾವಣೆ ಮುಂದೂಡಲು ಕೆಎಂಸಿ ಕಾಯ್ದೆ ಸೆಕ್ಷನ್‌ 508 ಅಥವಾ 509 ಅನ್ನು ಬಳಸಲು ಕೆಎಂಸಿಯ ಮೂಲ ಸ್ವರೂಪದಲ್ಲಿ ಅವಕಾಶ ಇದ್ದುದು ನಿಜ. ಆದರೆ, 1994ರಲ್ಲಿ ಸಂವಿಧಾನದ 74ನೇ ತಿದ್ದುಪಡಿ ಬಳಿಕ ಚುನಾವಣೆ ಮುಂದೂಡಲು ಈ ಸೆಕ್ಷನ್‌ಗಳನ್ನು ಬಳಸಲು ಅವಕಾಶ ಇಲ್ಲ. ಜಿ.ಕುಪ್ಪುಸ್ವಾಮಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಹೈಕೋರ್ಟ್‌ ಇದನ್ನು ಸ್ಪಷ್ಟಪಡಿಸಿದೆ’ ಎಂದು ಪದ್ಮನಾಭ ರೆಡ್ಡಿ ಸ್ಪಷ್ಟಪಡಿಸಿದರು.

‘ಕಾನೂನು ಹಾಗೂ ಸಂವಿಧಾನ ವಿಚಾರಗಳು ಬಂದಾಗ ಸಂವಿಧಾನವೇ ಮೇಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರ ನಿರಂತರವಾಗಿರಬೇಕು ಎಂಬುದು ಸಂವಿಧಾನದ 74ನೇ ತಿದ್ದುಪಡಿಯ ಆಶಯ. ಅದಕ್ಕೆ ಚುನಾವಣಾ ಆಯೋಗ ಬದ್ಧವಾಗಿರಬೇಕು’ ಎಂದು ಗುಣಶೇಖರ ತಿಳಿಸಿದರು.

‘ಕೋವಿಡ್‌ ಇರುವುದರಿಂದ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಅವರಿಗೆ ಅಧಿಕಾರವಿದೆ. ಬೇರೆಲ್ಲ ಕಾಯ್ದೆಗಳ ಅಂಶವನ್ನು ಮೀರಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ವಿಪತ್ತು ನಿರ್ವಹಣಾ ಕಾಯ್ದೆ ಒದಗಿಸುತ್ತದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT