ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಾದರೂ ಜಾರಿಯಾಗದ ಆದೇಶ; ಬಿಬಿಎಂಪಿ ಜಂಟಿ ಆಯುಕ್ತ ವಿರುದ್ಧ ಕ್ರಮಕ್ಕೆ ಮೀನಮೇಷ

Last Updated 17 ಫೆಬ್ರುವರಿ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳು ದಾಖಲೆ ಆಧರಿಸಿ ವಸತಿ ಸಮುಚ್ಚಯ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಪ್ರಕರಣದ ಲೋಕಾಯುಕ್ತ ತನಿಖೆಗೆ ಸಹಕರಿಸದ ಬಿಬಿಎಂಪಿ ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ ಅವರಿಗೆ ಹಿಂಬಡ್ತಿ ನೀಡಬೇಕು ಎಂಬ ನಗರಾಭಿವೃದ್ಧಿ ಇಲಾಖೆಯ ಆದೇಶ ವರ್ಷ ಕಳೆದ ಬಳಿಕವೂ ಜಾರಿ ಆಗಿಲ್ಲ.

ನಗರಾಭಿವೃದ್ಧಿ ಇಲಾಖೆಯು 2019 ನ.21ರಂದು ಈ ಆದೇಶ ಹೊರಡಿಸಿತ್ತು. ಆದರೆ, ಶಿಸ್ತುಕ್ರಮಕ್ಕೆ ಒಳಗಾಗಬೇಕಾದ ಅಧಿಕಾರಿ ಈಗಲೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ!

ಪ್ರಕರಣವೇನು: ಮೆ. ನಕೋಡಾ ಕನ್‌ಸ್ಟ್ರಕ್ಷನ್ಸ್‌ ಲಿಮಿಟೆಡ್‌ ಸಂಸ್ಥೆಯ ‘ಅಸ್ತ್ರ ವಾಲ್‌ ಮಾರ್ಕ್‌’ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ (ತಳ ಮಹಡಿ, ನೆಲ ಮಹಡಿ ಸೇರಿ 16 ಅಂತಸ್ತುಗಳ ಕಟ್ಟಡ) ಸುಳ್ಳು ದಾಖಲೆ ಆಧರಿಸಿ 2014ರ ಮಾ 12ರಂದು ಅನುಮತಿ ನೀಡಲಾಗಿದೆ ಎಂದು ಸುಬ್ಬು ಹೆಗ್ಡೆ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಲೋಕಾಯುಕ್ತರು, ಆಗ ಬಿಬಿಎಂಪಿಯ ಉಪ ಆಯುಕ್ತರಾಗಿದ್ದ (ಕಂದಾಯ) ವೆಂಕಟಾಚಲಪತಿ ಅವರಲ್ಲಿ ಸ್ಪಷ್ಟೀಕರಣ ಕೋರಿದ್ದರು. ಅದಕ್ಕೆ ಅಧಿಕಾರಿ ಯಾವುದೇ ಮಾಹಿತಿ ನೀಡಿರಲಿಲ್ಲ. ತನಿಖೆಗೆ ಸಹಕಾರ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತರು, 1966ರ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 3 (i) (ii) (iii) ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ವೆಂಕಟಾಚಲಪತಿ ಅವರು ಕರ್ತವ್ಯಲೋಪವೆಸಗಿದ್ದು ಇಲಾಖಾ ವಿಚಾರಣೆಯಲ್ಲೂ ಸಾಬೀತಾಗಿತ್ತು. ವಿಚಾರಣಾ ಸಮಿತಿಯು, ‘ಅವರು ಈಗ ಹೊಂದಿರುವ ಹುದ್ದೆಗಿಂತ ಒಂದು ಹಂತ ಕೆಳಗಿನ ಹುದ್ದೆಗೆ ಹಿಂಬಡ್ತಿ ನೀಡಬೇಕು. ಅವರಿಗೆ ಮೂರು ವರ್ಷ ಯಾವುದೇ ಬಡ್ತಿ ನೀಡಬಾರದು’ ಎಂದು ಶಿಫಾರಸು ಮಾಡಿತ್ತು.

ಈ ಬಗ್ಗೆ ಸಮಜಾಯಿಷಿ ನೀಡುವಂತೆ ನಗರಾಭಿವೃದ್ಧಿ ಇಲಾಖೆವೆಂಕಟಾಚಲಪತಿ ಅವರಿಗೆ 2019ರ ಆ 17ರಂದು ಬಿಬಿಎಂಪಿ ಆಯುಕ್ತರ ಮೂಲಕ ನೋಟಿಸ್‌ ನೀಡಿತ್ತು. ಅದಕ್ಕೆ ಅವರು ಸಮಜಾಯಿಷಿಯನ್ನೂ ನೀಡಿದ್ದರು. ‘ಲೋಕಾಯುಕ್ತ ವಿಚಾರಣಾಧಿಕಾರಿಗಳ ವರದಿಯ ಶಿಫಾರಸುಗಳನ್ನು ತಳ್ಳಿ ಹಾಕುವ ಸ್ಪಷ್ಟ ಅಂಶಗಳು ಸಮಜಾಯಿಷಿಯಲ್ಲಿ ಇರಲಿಲ್ಲ’ ಎಂಬ ಕಾರಣಕ್ಕೆ ಅವರಿಗೆ ದಂಡನೆ ವಿಧಿಸಲು ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿತ್ತು. ‘ವೆಂಕಟಾಚಲಪತಿ ಅವರಿಗೆ ಹಿಂಬಡ್ತಿ ನೀಡಬೇಕು ಹಾಗೂ ಮೂರು ವರ್ಷ ಬಡ್ತಿ ನೀಡಬಾರದು’ ಎಂದು ಸ್ಪಷ್ಟಪಡಿಸಿತ್ತು.

ಶಿಸ್ತುಕ್ರಮದ ಆದೇಶ ಜಾರಿಯಾಗದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ನಾನು ಆಯುಕ್ತನಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಹೊರಡಿಸಿರುವ ಆದೇಶವಿದು. ಹಾಗಾಗಿ ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT