ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ನಿಲುಗಡೆಗೆ ‘ಹಸಿರು ಕಟ್ಟಡ’

ಕಾಮಗಾರಿ ತಪಾಸಣೆ ನಡೆಸಿದ ಮೇಯರ್‌ * ಕೆಲಸ ಮುಗಿಸಲು 2019ರ ಸೆಪ್ಟೆಂಬರ್‌ ಗಡುವು
Last Updated 15 ಜೂನ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿನಗರದ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಕಾರು ಪಾರ್ಕಿಂಗ್‌ ಸಮುಚ್ಚಯವನ್ನು (ಎಂಎಲ್‌ಸಿಪಿ) ಸಂ‍ಪೂರ್ಣ ‘ಹಸಿರು ಕಟ್ಟಡ’ವನ್ನಾಗಿಸಲು ಬಿಬಿಎಂಪಿ ಕ್ರಮಕೈಗೊಂಡಿದೆ.

ನಿರ್ಮಾಣ ಹಂತದಲ್ಲಿರುವ ಈ ಕಟ್ಟಡ ಸಮುಚ್ಚಯದ ಕಾಮಗಾರಿಯನ್ನು ಮೇಯರ್‌ ಗಂಗಾಂಬಿಕೆ ಶನಿವಾರ ಪರಿಶೀಲನೆ ನಡೆಸಿದರು.

‘ನೈಸರ್ಗಿಕ ಬೆಳಕನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಕಟ್ಟಡ ವಿನ್ಯಾಸಗೊಳಿಸಿದ್ದೇವೆ. ಕಟ್ಟಡದ ಚಾವಣಿಯಲ್ಲಿ ಸಂಪೂರ್ಣವಾಗಿ ಸೋಲಾರ್‌ ಪ್ಯಾನೆಲ್‌ಗಳನ್ನು ಅಳ ವಡಿಸಿ 500 ಕಿಲೊವಾಟ್‌ ವಿದ್ಯುತ್ ಉತ್ಪಾದಿಸಲು ಕ್ರಮ ವಹಿಸಿದ್ದೇವೆ. ಈ ಕಟ್ಟಡದ ಲಿಫ್ಟ್ ವ್ಯವಸ್ಥೆ, ಬೆಳಕಿಗೆ ವ್ಯವಸ್ಥೆ ನಿರ್ವಹಣೆಗೆ ಸೌರ ವಿದ್ಯುತ್‌ ಬಳಸಲಾಗುತ್ತದೆ. ಬಳಸಿ ಉಳಿಯುವ ವಿದ್ಯುತನ್ನು ಗ್ರಿಡ್‌ಗೆ ನೀಡಲಾಗುವುದು’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ (ಮೂಲಸೌಕರ್ಯ) ಕೆ.ಟಿ.ನಾಗರಾಜ್ ತಿಳಿಸಿದರು.

ಮಳೆ ನೀರು ಸಂಗ್ರಹ: ‘ಕಟ್ಟಡದಲ್ಲಿ ಮಳೆ ನೀರು ಸಂಗ್ರಹಕ್ಕೂ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದಲ್ಲಿ 1ಲಕ್ಷ ಲೀಟರ್ ಮಳೆ ನೀರು ಸಂಗ್ರಹಿಸಬಹುದು. ಕಟ್ಟಡ ನಿರ್ವಹಣೆಗೆ ಅಗತ್ಯ ಇರುವಷ್ಟು ನೀರನ್ನು ಇಟ್ಟುಕೊಂಡು ಉಳಿದದ್ದನ್ನು ಅಗ್ನಿಶಾಮಕ ಸೇವೆಗೆ ಒದಗಿಸುವ ಚಿಂತನೆ ಇದೆ. ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದರೂ ಇದೇ ನೀರನ್ನು ಬಳಸಲಿದ್ದೇವೆ’ ಎಂದರು.

ಈ ಕಟ್ಟಡದ ನೆಲ ಮಹಡಿಯ ಮೇಲಿನ ವಿಶಾಲ ಜಾಗವನ್ನು ಸಾರ್ವಜನಿಕರ ಪ್ರತಿಭಟನೆಗೆ ಸ್ಥಳಾವಕಾಶ ಕಲ್ಪಿಸಲು ಬಳಸಲಾಗುವುದು ಎಂದು ಅವರು ತಿಳಿಸಿದರು.

ಬಂಡೆಯಿಂದಾಗಿ ಕಾಮಗಾರಿ ವಿಳಂಬ: ಕಟ್ಟಡ ಸಮುಚ್ಚಯವನ್ನು ನಿರ್ಮಿಸಿದ ಜಾಗವು ಬಂಡೆಗಳಿಂದ ಕೂಡಿತ್ತು. ಅದನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಮಯ ಹಿಡಿಯಿತು. ಹಾಗಾಗಿ ಕಾಮಗಾರಿ ವಿಳಂಬವಾಯಿತು ಎಂದು ಅಧಿಕಾರಿಗಳು ವಿವರಣೆ ನೀಡಿದರು. ನಗರದ ಕೇಂದ್ರ ಪ್ರದೇಶದಲ್ಲಿರುವ ಈ ಜಾಗದಿಂದ 55 ಸಾವಿರ ಕ್ಯುಬಿಕ್‌ ಮೀಟರ್‌ಗಳಷ್ಟು ಬಂಡೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೆರವಿನಿಂದ ತೆರವುಗೊಳಿಸಿದ್ದೇವೆ. ಸುಮಾರು 4,500 ಲೋಡ್‌ಗಳಷ್ಟು ಕಲ್ಲುಗಳನ್ನು ಹೊರಗೆ ಸಾಗಿಸಲಾಗಿದೆ. ಈ ಕಾರ್ಯಕ್ಕೆ 6 ತಿಂಗಳಿಗೂ ಹೆಚ್ಚು ಸಮಯ ಹಿಡಿಯಿತು. ಹಾಗಾಗಿ ಕಟ್ಟಡ ಕಾಮಗಾರಿಯೂ ವಿಳಂಬವಾಯಿತು ಎಂದು ಕೆ.ಟಿ.ನಾಗರಾಜ್‌ ವಿವರಿಸಿದರು.

‘ಕಟ್ಟಡ ಕಾಮಗಾರಿ ಶೇ70ರಷ್ಟು ಪೂರ್ಣಗೊಂಡಿದೆ. ಇನ್ನು ರ‍್ಯಾಂಪ್‌ ಗಳನ್ನು ಇಲ್ಲಿ ನಿರ್ಮಿಸಬೇಕಿದೆ. ವರ್ಷಾಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಿದ್ದೇವೆ’ ಎಂದರು.

‘ಕಟ್ಟಡ ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಕಾಮಗಾರಿಯನ್ನು ಸೆಪ್ಟೆಂಬರ್‌ ಒಳಗೆ ಪೂರ್ಣಗೊಳಿಸಬೇಕು’ ಎಂದು ಮೇಯರ್‌ ಸೂಚಿಸಿದರು.

‘ಶೌಚಾಲಯ ನಿರ್ಮಿಸಿ’
ಕಟ್ಟಡದ ಎರಡು ಬದಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಮೇಯರ್‌ ಸಲಹೆ ನೀಡಿದರು.

ಸ್ವಾತಂತ್ರ್ಯ ಉದ್ಯಾನ ಬಳಿ ಪ್ರತಿಭಟನೆ ನಡೆಸಲು ಬರುವವರು ಸೂಕ್ತ ಶೌಚಾಲಯದ ಸೌಕರ್ಯ ಇಲ್ಲದೇ ಸಮಸ್ಯೆ ಎದುರಿಸುವ ಬಗ್ಗೆ ವಿಶೇಷ ವರದಿ ಪ್ರಕಟಿಸುವ ಮೂಲಕ ‘ಪ್ರಜಾವಾಣಿ’ ಗಮನ ಸೆಳೆದಿತ್ತು.

ಡಿಸೆಂಬರ್‌ಗೆ ಓಕಳಿಪುರ ಕಾರಿಡಾರ್‌
ಓಕಳಿಪುರದಲ್ಲಿ ನಿರ್ಮಿಸುತ್ತಿರುವ ಅಷ್ಟಪಥ ಕಾರಿಡಾರ್‌, ಎಂಟು ರೈಲ್ವೆ ಕೆಳಸೇತುವೆ ಹಾಗೂ ಎರಡು ಪಾದಚಾರಿ ಕೆಳಸೇತುವೆ ಕಾಮಗಾರಿಗಳನ್ನು 2019ರ ಡಿಸೆಂಬರ್‌ನೊಳಗೆ ಪೂರ್ಣಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಕಾರಿಡಾರ್‌ನ ಕಾಮಗಾರಿಯನ್ನು ಮೇಯರ್‌ ಗಂಗಾಂಬಿಕೆ ಶನಿವಾರ ಪರಿಶೀಲಿಸಿದರು. ಇಲ್ಲಿ ನಿರ್ಮಾಣವಾಗುತ್ತಿರುವ ಎಂಟು ರೈಲ್ವೆ ಕೆಳಸೇತುವೆಗಳಲ್ಲಿ ಮೂರು ಸೇತುವೆಗಳ ಕೆಲಸ ಪ್ರಗತಿಯಲ್ಲಿದೆ. ಐದರ ಕಾಮಗಾರಿ ಪೂರ್ಣಗೊಂಡಿದೆ. 2 ಪಾದಚಾರಿ ಕೆಳ ಸೇತುವೆಗಳಲ್ಲಿ ಒಂದರ ಕಾಮಗಾರಿ ಸಂಪೂರ್ಣವಾಗಿದೆ. ಇನ್ನೊಂದರ ಕಾಮಗಾರಿ ಪ್ರಗತಿಯಲ್ಲಿದೆ.

‘ಲೂಪ್‌ಗಳು, ರೈಲ್ವೆ ಕೆಳಸೇತುವೆ ಹಾಗೂ ಪಾದಚಾರಿ ಕೆಳಸೇತುವೆಗಳ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ರಸ್ತೆಗಳ ಕಾಮಗಾರಿಯನ್ನು 25 ದಿನದೊಳಗೆ ಪೂರ್ಣಗೊಳಿಸಬೇಕು’ ಎಂದು ಮೇಯರ್‌ ಸೂಚಿಸಿದರು.

ಈ ಕಾರಿಡಾರ್‌ನ ಶೇ 85 ರಷ್ಟು ಕೆಲಸ ಮುಗಿದಿದೆ. ರಸ್ತೆ ಕಾಮಗಾರಿ ‍ಪೂರ್ಣಗೊಂಡ ಬಳಿಕ ರೈಲ್ವೆ ಇಲಾಖೆ ಕೆಳಸೇತುವೆ ಕಾಮಗಾರಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT