ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ವಿದೇಶಕ್ಕೆ: ಹೋಟೆಲ್‌ಗೆ ನೋಟಿಸ್‌

Last Updated 3 ಡಿಸೆಂಬರ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ದೃಢಪಟ್ಟು ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರವಾಸಿಗನಿಗೆ (66 ವರ್ಷ) ದುಬೈಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ವಸಂತನಗರದ ತಾರಾ ಹೋಟೆಲ್‌ಗೆ ಬಿಬಿಎಂಪಿಯು ಕಾರಣ ಕೇಳಿ ನೋಟಿಸ್‌ ನೀಡಿದೆ.

ದಕ್ಷಿಣ ಆಫ್ರಿಕಾ ಪ್ರಜೆಯು ನ.20ರಂದು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಅವರು ಕೋವಿಡ್‌ ಹೊಂದಿರುವುದು ದೃಢಪಟ್ಟಿತ್ತು. ಅವರು ಅಂದಿನಿಂದಲೇ ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ಒಳಗಾಗಿದ್ದರು. ಅವರ ವಂಶವಾಹಿ ಸಂರಚನೆ ವಿಶ್ಲೇಷಣೆಯ (ಜಿನೋಮ್‌ ಸೀಕ್ವೆನ್ಸಿಂಗ್‌) ಫಲಿತಾಂಶ ಬರುವ ಮುನ್ನವೇ ನ.27ರಂದು ಮಧ್ಯರಾತ್ರಿ ದುಬೈಗೆ ತೆರಳಿದ್ದರು. ಅವರು ಓಮೈಕ್ರಾನ್‌ ಸೋಂಕು ಹೊಂದಿದ್ದುದು ಗುರುವಾರ (ಡಿ. 2) ದೃಢಪಟ್ಟಿತ್ತು.

‘ಕೋವಿಡ್‌ ದೃಢಪಟ್ಟ ದಕ್ಷಿಣ ಆಫ್ರಿಕಾದ ಪ್ರವಾಸಿಗನನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಟ್ಟುಕೊಳ್ಳುವಂತೆ ಬಿಬಿಎಂಪಿ ಸೂಚನೆ ನೀಡಿತ್ತು. ಆದರೂ ಆ ವ್ಯಕ್ತಿ ಸಭೆಯೊಂದರಲ್ಲಿ ಭಾಗವಹಿಸಲು ನ.25ರಂದು ಹೋಟೆಲ್‌ನಿಂದ ಹೊರಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ನ.27ರಂದು ಆ ವ್ಯಕ್ತಿಯು ಹೋಟೆಲ್‌ನಿಂದ ನಿರ್ಗಮಿಸಲು ಅನುವು ಮಾಡಿಕೊಟ್ಟಿದ್ದೀರಿ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿಲ್ಲ. ಇದು ಕೋವಿಡ್‌ ಶಿಷ್ಟಾಚಾರದ ಉಲ್ಲಂಘನೆ. ಕರ್ನಾಟಕ ಸಾಂಕ್ರಾಮಿಕ ಕಾಯಿಲೆಗಳ ಸುಗ್ರೀವಾಜ್ಞೆ 2020ರ ಹಾಗೂ 2005ರ ವಿಕೋಪ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯೂ ಹೌದು. ಈ ಬಗ್ಗೆ ನೋಟಿಸ್‌ ಜಾರಿಯಾದ 24 ಗಂಟೆಗಳ ಒಳಗೆ ವಿವರಣೆ ನೀಡಬೇಕು. ಇಲ್ಲದಿದ್ದರೆ ಈ ಕಾಯ್ದೆಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎಸ್‌.ಎ.ಬಾಲಸುಂದರ್‌, ‘ಕ್ವಾರಂಟೈನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಬಿಬಿಎಂಪಿಯ ಹೊಣೆ. ಆದರೆ, ಪ್ರವಾಸಿಗ ಕೋವಿಡ್‌ ಹೊಂದಿರುವ ಮಾಹಿತಿಯನ್ನು ಹೋಟೆಲ್‌ನವರಿಗೆ ತಿಳಿಸಿದ್ದೆವು. ಕನಿಷ್ಠಪಕ್ಷ ಆ ವ್ಯಕ್ತಿಯು ಸಭೆಯಲ್ಲಿ ಭಾಗವಹಿಸಲು ಹೋಟೆಲ್‌ನಿಂದ ನಿರ್ಗಮಿಸಿದ ಕುರಿತು ಹಾಗೂ ಹೋಟೆಲ್‌ ಬಿಟ್ಟು ವಿಮಾನನಿಲ್ದಾಣಕ್ಕೆ ತೆರಳಿದ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಬೇಕಿತ್ತು’ ಎಂದರು.

ಬಿಬಿಎಂಪಿಯ ನೋಡೆಲ್‌ ಅಧಿಕಾರಿ, ‘ದಕ್ಷಿಣ ಆಫ್ರಿಕಾದ ಪ್ರವಾಸಿಗ ದೇಶವನ್ನು ತೊರೆದಾಗಿದೆ. ಆದರೆ, ಆತನ ನೇರ ಸಂಪರ್ಕಕ್ಕೆ ಬಂದ 24 ಮಂದಿಯದೇ ನಮಗೆ ತಲೆನೋವು. ಅವರಲ್ಲಿ ರೋಗಲಕ್ಷಣಗಳಿಲ್ಲ. ಆದರೂ ಅವರು ಸೋಂಕು ಹರಡಲು ಕಾರಣರಾಗಬಹುದು. ಆ ವ್ಯಕ್ತಿಯು ಬೊಮ್ಮಸಂದ್ರದಲ್ಲಿ ನ.25ರಂದು ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಆರು ಮಂದಿ ಆತನ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಅವರು ಯಾರೂ ಕೋವಿಡ್ ಹೊಂದಿಲ್ಲ ಎಂಬುದು ದೃಢಪಟ್ಟಿದೆ. ನ.27ರಂದು ಮಧ್ಯರಾತ್ರಿ ಆತ ವಿಮಾನನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ ಕ್ಯಾಬ್‌ ಪತ್ತೆ ಹಚ್ಚುವಲ್ಲಿಯೂ ನಾವು ಸಫಲರಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT