ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಮಂಜೂರಾತಿಗೆ ಆನ್‌ಲೈನ್ ವ್ಯವಸ್ಥೆ

ಉದ್ಯಮಸ್ನೇಹಿ ವಾತಾವರಣ ನಿರ್ಮಾಣಕ್ಕೆ ಬಿಬಿಎಂಪಿ ಸಿದ್ಧತೆ
Last Updated 2 ಜನವರಿ 2020, 23:38 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಕಟ್ಟಡ ನಕ್ಷೆ ಮಂಜೂರಾತಿ ಸರಳೀಕರಣಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಎಂ. ಗೌತಮ್‌ಕುಮಾರ್, ಆಡಳಿತ, ವಿರೋಧ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇಶದ ವ್ಯಾಪಾರದಲ್ಲಿ ಸರಳತೆ ತರಲು ವಿಶ್ವಬ್ಯಾಂಕ್ ‘ಈಸ್‌ ಆಫ್ ಡೂಯಿಂಗ್ ಬಿಸಿನೆಸ್ (ವ್ಯಾಪಾರದಲ್ಲಿ ಸರಳತೆ)’ ಯೋಜನೆ ಅಡಿ ಶ್ರೇಯಾಂಕ ನೀಡುತ್ತಿದೆ. ಇದರಲ್ಲಿ 191 ದೇಶಗಳು ಭಾಗವಹಿಸುತ್ತಿದ್ದು, ಈ ಯೋಜನೆಯಲ್ಲಿ ಉತ್ತಮ ಅಂಕ ಪಡೆದರೆ ಬೆಂಗಳೂರಿಗೆ ಸಾಲ-ಸೌಲಭ್ಯಗಳು ಸಿಗಲಿವೆ’ ಎಂದು ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕಾಗದ ರಹಿತವಾಗಿ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ಮತ್ತು ಕಟ್ಟಡ ನಕ್ಷೆ ಮಂಜೂರಾತಿ ನೀಡುವ ಪದ್ಧತಿ ಜಾರಿಗೊಳಿಸಲು ಸಾಫ್ಟ್‌ವೇರ್ ಸಿದ್ಧಪಡಿಸಲಾಗುವುದು. ನಕ್ಷೆ ಮಂಜೂರಾತಿ ಕಡತ ಯಾರ ಬಳಿ ಇದೆ ಎಂಬ ಮಾಹಿತಿ ಕೂಡಾ ಆನ್‌ಲೈನ್‌ನಲ್ಲೇ ಲಭ್ಯವಾಗಲಿದೆ. ಕಡತವು ಒಬ್ಬ ಅಧಿಕಾರಿ ಬಳಿ 7 ದಿನಗಳಿಗೂ ಹೆಚ್ಚು ಸಮಯ ಇದ್ದರೆ ಸ್ವಯಂ ಅನೋಮೋದನೆ (ಡೀಮ್ಡ್ ಅಪ್ರೂವ್ಡ್) ಸಿಗಲಿದೆ. ಇದರಿಂದ ನಗರದಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಯಾವುದೇ ತೊಂದರೆ ಆಗದೆ ತ್ವರಿತವಾಗಿ ನಕ್ಷೆ ಮಂಜೂರಾತಿ ಸಿಗಲಿದೆ’ ಎಂದರು.

‘ಪರಿಣತ ಸಾಫ್ಟ್‌ವೇರ್ ಸಂಸ್ಥೆಗೆ ಈ ಜವಾಬ್ದಾರಿ ವಹಿಸಿ ಆದಷ್ಟು ಬೇಗ ಈ ಪದ್ಧತಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್ ಮಾತನಾಡಿ, ‘ದೇಶದ ವ್ಯಾಪಾರ ವಾತಾವರಣದ ಸಮಗ್ರ ವರದಿ ಆಧಾರಿಸಿ ವಿಶ್ವ ಬ್ಯಾಂಕ್ ‘ದೇಶದ ವ್ಯಾಪಾರದಲ್ಲಿ ಸರಳತೆ’ ಶ್ರೇಯಾಂಕ ನಿರ್ಧರಿಸಿ ಪ್ರಕಟಿಸುತ್ತಿದೆ. ಸದ್ಯ ಭಾರತ 63ನೇ ಸ್ಥಾನದಲ್ಲಿದ್ದು, ಕಟ್ಟಡ ನಿರ್ಮಾಣ ಮಂಜೂರಾತಿಯ ಅಂಶದಲ್ಲಿ 27ನೇ ಸ್ಥಾನದಲ್ಲಿದೆ’ ಎಂದರು.

‘ದೆಹಲಿ ಮತ್ತು ಮುಂಬೈ ನಗರಗಳ ಜೊತೆಗೆ ಪ್ರಸಕ್ತ ಸಾಲಿನಿಂದ ಕೋಲ್ಕತ್ತ ಮತ್ತು ಬೆಂಗಳೂರು ನಗರಗಳನ್ನು ಈ ವ್ಯಾಪ್ತಿಗೆ ವಿಶ್ವ ಸಂಸ್ಥೆ ಸೇರಿಸಿಕೊಂಡಿದೆ. ಕಟ್ಟಡ ನಿರ್ಮಾಣ ಮಂಜೂರಾತಿ ಸರಳೀಕರಣಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಮೂರು ಹಂತದಲ್ಲಿ ಅನುಮತಿ
‘ಕಟ್ಟಡ ನಕ್ಷೆ ಮಂಜೂರಾತಿಯನ್ನು ಮೂರು ಹಂತಗಳಲ್ಲಿ ನೀಡಲಾಗುವುದು’ ಎಂದು ಮೇಯರ್ ತಿಳಿಸಿದರು.

‘600 ಚದರಡಿ ಒಳಗಿನ ಅಳತೆಯಲ್ಲಿ ನಿರ್ಮಾಣ ಮಾಡುವ ಮನೆಗೆ ಆಯಾ ವಾರ್ಡ್ ಸಹಾಯಕ ಎಂಜಿನಿಯರ್, 11 ರಿಂದ 15 ಚದರ ಮೀಟರ್ ಕಟ್ಟಡಗಳಿಗೆ ವಲಯಮಟ್ಟದಲ್ಲಿ ಹಾಗೂ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಕಚೇರಿಯಲ್ಲಿ ಅನುಮತಿ ಪಡೆಯುವ ಪದ್ಧತಿ ಜಾರಿಗೊಳಿಸಲು ಚರ್ಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT