ಶನಿವಾರ, ಜುಲೈ 31, 2021
28 °C
ಜಲ್ಲಿ–ಬಿಸಿ ಡಾಂಬರು ಮಿಶ್ರಣ ಘಟಕವೂ ಕಾರ್ಯ ನಿರ್ವಹಿಸುತ್ತಿಲ್ಲ

ಬಗೆಹರಿಯದ ನಗರದ ರಸ್ತೆ ಗುಂಡಿ ಸಮಸ್ಯೆ: ಗುತ್ತಿಗೆದಾರರ ವಿರುದ್ಧವೂ ಕ್ರಮವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯು ಕಣ್ಣೂರಿನಲ್ಲಿ ಸ್ಥಾಪಿಸಿರುವ ಜಲ್ಲಿ– ಬಿಸಿ ಡಾಂಬರು ಮಿಶ್ರಣ (ಹಾಟ್‌ ಮಿಕ್ಸ್‌) ಘಟಕವು ನಗರದ ರಸ್ತೆಗುಂಡಿ ಸಮಸ್ಯೆ ನಿವಾರಿಸಲಿದೆ ಎಂಬ ಬಿಬಿಎಂಪಿಯ ಭರವಸೆ ಇನ್ನೂ ಈಡೇರಿಲ್ಲ. ಈ ಘಟಕ ಸ್ಥಾಪಿಸಲು ಕಾರ್ಯಾದೇಶ ನೀಡಿ ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳೇ ಕಳೆದರೂ ರಸ್ತೆ ಗುಂಡಿ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಾಗಿಲ್ಲ.

₹ 7.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಜಲ್ಲಿ– ಬಿಸಿ ಡಾಂಬರು ಮಿಶ್ರಣ (ಹಾಟ್‌ ಮಿಕ್ಸ್‌) ಘಟಕ ಗುತ್ತಿಗೆದಾರರ ಲೋಪದಿಂದಾಗಿ ಬಳಕೆಯಾಗುತ್ತಿಲ್ಲ. ನಗರದ ರಸ್ತೆಗಳ ಗುಂಡಿಗಳು ಹಾಗೆಯೇ ಇವೆ. ಈ ವೈಫಲ್ಯಕ್ಕೆ ಗುತ್ತಿಗೆದಾರರೇ ನೇರವಾಗಿ ಹೊಣೆಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ.

ಕಣ್ಣೂರಿನ ಜಲ್ಲಿ– ಬಿಸಿ ಡಾಂಬರು ಮಿಶ್ರಣ ಘಟಕದ ನಿರ್ವಹಣೆಗೆ ಗುತ್ತಿಗೆದಾರ ಎಂ.ಎಸ್‌. ವೆಂಕಟೇಶ್‌ (ಎಂಎಸ್‌ವಿ
ಕನ್‌ಸ್ಟ್ರಕ್ಷನ್) ಅವರಿಗೆ 2019ರ ಮಾ.08ರಂದೇ ಬಿಬಿಎಂಪಿ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಈ ಘಟಕ ಕಾರ್ಯಾರಂಭ ಮಾಡುವಾಗಲೇ 11 ತಿಂಗಳು (2020ರ ಫೆ.06ರಂದು) ತಡವಾಗಿತ್ತು. ಘಟಕದಲ್ಲಿ ಎರಡು
ದಿನ ಜಲ್ಲಿ–ಡಾಂಬರು ಮಿಶ್ರಣ ತಯಾರಿಸಿ ಮತ್ತೆ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು. ಘಟಕ ಮತ್ತೆ ಕಾರ್ಯಾರಂಭ ಮಾಡಿದ್ದು 2020ರ ಜೂನ್‌ 3ರಂದು.

ಕಣ್ಣೂರಿನ ಘಟಕವು ಗಂಟೆಗೆ 120 ಟನ್‌ನಂತೆ 10 ಗಂಟೆಗಳಲ್ಲಿ 50 ಟ್ರಕ್‌ಗಳಷ್ಟು 160 ಡಿಗ್ರಿ ಉಷ್ಣಾಂಶದ ಹಾಟ್‌ ಮಿಕ್ಸ್‌ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ. ಜಲ್ಲಿ ಡಾಂಬರು ಮಿಶ್ರಣಕ್ಕೆ ಗುತ್ತಿಗೆದಾರನಿಗೆ ಬಿಬಿಎಂಪಿ ಪ್ರತಿ ಕ್ಯೂಬಿಕ್‌ ಮೀಟರ್‌ಗೆ ₹ 5 ಸಾವಿರದಂತೆ ಪಾವತಿಸುತ್ತಿತ್ತು. ಆದರೂ ಅವರು ಷರತ್ತಿನ ಪ್ರಕಾರ ಬಿಬಿಎಂಪಿಯ ಬೇಡಿಕೆಯಷ್ಟು ಜಲ್ಲಿ– ಡಾಂಬರು ಮಿಶ್ರಣ ಪೂರೈಸುವಲ್ಲಿ ವಿಫಲವಾಗಿದ್ದರು. ಈ ಘಟಕವನ್ನು ಸಮರ್ಪಕವಾಗಿ ನಡೆಸದ ಕಾರಣ ಎಂ.ಎಸ್.ವೆಂಕಟೇಶ್‌ ಅವರಿಗೆ ನೀಡಿದ್ದ ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿದೆ. ಈ ಘಟಕದ ನಿರ್ವಹಣೆಗೆ ಹೊಸತಾಗಿ ಟೆಂಡರ್‌ ಆಹ್ವಾನಿಸಿದೆ.

ಹೊಸ ಟೆಂಡರ್‌ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿತ್ತು. ಈ ಬಗ್ಗೆ ’ಪ್ರಜಾವಾಣಿ‘ ವಿಶೇಷ ವರದಿ ಪ್ರಕಟಿಸಿತ್ತು. ಹಾಗಾಗಿ ಟೆಂಡರ್‌ ಪ್ರಕ್ರಿಯೆಯ ತನಿಖೆಯನ್ನು ಬಿಬಿಎಂಪಿ ಆಯುಕ್ತರ ತಾಂತ್ರಿಕ ಮತ್ತು ಜಾಗೃತ ಕೋಶಕ್ಕೆ (ಟಿವಿಸಿಸಿ) ವಹಿಸಲಾಗಿತ್ತು. ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ತನಿಖೆಯಲ್ಲಿ ಸಾಬೀತಾದ ಕಾರಣ ಹೊಸ ಟೆಂಡರ್‌ ಪ್ರಕ್ರಿಯೆ ರದ್ದುಪಡಿಸಿ ಮರು ಟೆಂಡರ್‌ ಕರೆಯಲಾಗಿದೆ.

ಈ ಅವಧಿಯಲ್ಲಿ ಘಟಕವು ಬಹುತೇಕ ನಿಷ್ಕ್ರಿಯವಾಗಿದೆ. ಬಿಬಿಎಂಪಿಯು 2021 ಮಾರ್ಚ್‌ ವೇಳೆಗೆ ನಗರದಲ್ಲಿ 7,272 ರಸ್ತೆ ಗುಂಡಿಗಳನ್ನು ಗುರುತಿಸಿದ್ದರೂ 4,034 ಗುಂಡಿಗಳನ್ನಷ್ಟೇ ಮುಚ್ಚಲು ಸಾಧ್ಯವಾಗಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಕುರಿತು ಸಮನ್ವಯ ಸಾಧಿಸುವ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ನೇತೃತ್ವದಲ್ಲಿ 2021ರ ಮಾ. 20ರಂದು ನಡೆದಿದ್ದ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರ ವಿಸ್ತಾರವಾಗಿ ಚರ್ಚೆಯಾಗಿತ್ತು.

‘ವಹಿಸಿಕೊಂಡ ಕೆಲಸವನ್ನು ಸರಿಯಾಗಿ ನಿರ್ವಹಿಸುವುದು ಗುತ್ತಿಗೆದಾರನ ಕರ್ತವ್ಯ. ಗುತ್ತಿಗೆ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚದಿರುವುದು ಅವರ ವೈಫಲ್ಯ. ಹಾಗಾಗಿ ಗುತ್ತಿಗೆ ಷರತ್ತು ಪಾಲಿಸದ ವೆಂಕಟೇಶ್‌ ವಿರುದ್ಧ ಕೆಟಿಪಿಪಿ ಕಾಯ್ದೆಯಡಿ ಕ್ರಮ ಕೈಗೊಳ್ಳಿ’ ಎಂದು ಮುಖ್ಯ ಕಾರ್ಯದರ್ಶಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಅವರ ವಿರುದ್ಧ ಇನ್ನೂ ಕ್ರಮವಾಗಿಲ್ಲ.

‘ಬಿಬಿಎಂಪಿಯು ವೆಂಕಟೇಶ್‌ ಅವರಿಗೆ ನೀಡಿದ ಟೆಂಡರ್‌ ರದ್ದುಪಡಿಸಿದ್ದು ಬಿಟ್ಟರೆ ಬೇರೆ ಕ್ರಮ ಕೈಗೊಂಡಿಲ್ಲ. ಅವರನ್ನು ಕಪ್ಪುಪಟ್ಟಿಗೆ ಸೇರಿಸದ ಕಾರಣ ಅವರು ಮತ್ತೆ ಈ ಘಟಕದ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಆದರೆ, ತಾಂತ್ರಿಕ ಕಾರಣಕ್ಕೆ ಅವರ ಬಿಡ್‌ ಅನರ್ಹಗೊಂಡಿತು. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ಗುತ್ತಿಗೆ ಷರತ್ತು ಪಾಲಿಸದವರ ವಿರುದ್ಧ ಕಠಿಣ ಕ್ರಮಕೈಗೊಂಡರೆ ಮಾತ್ರ ಭವಿಷ್ಯದಲ್ಲಿ ಗುತ್ತಿಗೆ ವಹಿಸಿಕೊಳ್ಳುವವರು ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ಟೆಂಡರ್‌ ಷರತ್ತು ಪಾಲಿಸದಿದ್ದರೆ ಏನೂ ಆಗದು ಎಂಬ ಅಸಡ್ಡೆ ಬೆಳೆಯುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿಯೇ ನಿರ್ವಹಿಸಲಿ’
‘ಮೂರು ದಶಕಗಳ ಹಿಂದೆ ಕೋರಮಂಗಲದಲ್ಲಿ ಡಾಂಬರು ಮಿಶ್ರಣ ಘಟಕವನ್ನು ಪಾಲಿಕೆಯೇ ನಿರ್ವಹಿಸುತ್ತಿತ್ತು. ಅಂತೆಯೇ ಕಣ್ಣೂರಿನ ಜಲ್ಲಿ– ಬಿಸಿ ಡಾಂಬರು ಘಟಕವನ್ನು ಸ್ವತಃ ನಿರ್ವಹಿಸುವ ಸಾಮರ್ಥ್ಯ ಬಿಬಿಎಂಪಿಗೆ ಇದೆ. ಅದಕ್ಕೆ ಅಗತ್ಯವಿರುಷ್ಟು ಮಾನವ ಸಂಪನ್ಮೂಲವೂ ಪಾಲಿಕೆ ಬಳಿ ಇದೆ. ಈ ಘಟಕ ನಿರ್ವಹಣೆಯನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ಬಿಸಿ ಜಲ್ಲಿ– ಡಾಂಬರು ಮಿಶ್ರಣಕ್ಕಾಗಿ ಅವರಿಗೆ ಕೈಚಾಚುವುದು ಇದರಿಂದ ತಪ್ಪಲಿದೆ. ಟೆಂಡರ್ ಅಕ್ರಮಗಳಿಗೂ ಆಸ್ಪದ ಇರುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ಸಲಹೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು