ಬುಧವಾರ, ಮಾರ್ಚ್ 3, 2021
18 °C
ಸಂಸದ ಶ್ರೀನಿವಾಸ ಪ್ರಸಾದ್‌ ವಿರೋಧ * ವಸತಿ ಬದಲು ನಿವೇಶನ ಹಂಚಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ

ಪರಿಶಿಷ್ಟರಿಗೆ ನಿವೇಶನಕ್ಕೆ ಕಾಯ್ದಿಟ್ಟ ಜಾಗದಲ್ಲಿ ವಸತಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 1,110 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕಾಯ್ದಿರಿಸಿದ್ದ ಜಮೀನನ್ನು ಮುಖ್ಯಮಂತ್ರಿಯವರ ವಸತಿ ಯೋಜನೆ ಅನುಷ್ಠಾನಕ್ಕೆ ಬಳಸುವುದಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬುಧವಾರ ಪತ್ರ ಬರೆದಿರುವ ಶ್ರೀನಿವಾಸ ಪ್ರಸಾದ್‌, ‘ಈಗಾಗಲೇ ಆಯ್ಕೆಯಾಗಿರುವ 1,110 ಫಲಾನುಭವಿಗಳಿಗೆ ನಿವೇಶನ ನೀಡುವುದಕ್ಕೆ ಮಾತ್ರ ಈ ಜಮೀನನ್ನು ಉಪಯೋಗಿಸಿಕೊಳ್ಳಬೇಕು. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಬಡಾವಣೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ನಿವೇಶನ ಹಂಚಲು ಆದೇಶ ಮಾಡಬೇಕು. ಈ ಜಮೀನನ್ನು ವಸತಿ ನಿರ್ಮಾಣಕ್ಕೆ ಬಳಸುವ ನಿರ್ದೇಶನವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮುಖ್ಯಮಂತ್ರಿಯವರ ವಸತಿ ಯೋಜನೆಗೆ ಸಾವಿರಾರು ಎಕರೆ ಸರ್ಕಾರಿ ಜಮೀನುಗಳು ಬೆಂಗಳೂರು ಸುತ್ತಮುತ್ತಲು ಲಭ್ಯ ಇವೆ. ಈ ಜಮೀನುಗಳನ್ನು ವರ್ಗಾಯಿಸಿಕೊಂಡು ವಸತಿ ಇಲಾಖೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟರಿಗೆ ನಿವೇಶನ ಹಂಚಿಕೆ ಮಾಡಲು ಪಾಲಿಕೆಯ ಪಶ್ಚಿಮ ವಲಯ, ದಕ್ಷಿಣ ವಲಯ ಮತ್ತು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಜಮೀನು ಲಭ್ಯ ಇರಲಿಲ್ಲ.

ಶ್ರೀನಿವಾಸ ಪ್ರಸಾದ್ ಕಂದಾಯ ಸಚಿವರಾಗಿದ್ದಾಗ ಅವರ ಅಧ್ಯಕ್ಷತೆಯಲ್ಲಿ 2014ರ ಜು 18ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ವಸತಿರಹಿತರಿಗೆ ನಿವೇಶನ ಒದಗಿಸಲು ಜಮೀನುಗಳನ್ನು ಗುರುತಿಸಿ ಪಾಲಿಕೆಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಈ ಉದ್ದೇಶಕ್ಕೆ ದಾಸನಪುರ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಸರ್ವೇ ನಂಬರ್‌ 24 ಮತ್ತು 25ರಲ್ಲಿ ಹಾಗೂ ಕೆಂಗೇರಿ ಹೋಬಳಿಯ ಅಗರ ಗ್ರಾಮದ ಸರ್ವೇ
ನಂ.28ರಲ್ಲಿ  ಸೇರಿ ಒಟ್ಟು 29 ಎಕರೆ 7 ಗುಂಟೆ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು.

‘ಪರಿಶಿಷ್ಟರಿಗೆ ನಿವೇಶನ ನೀಡಲು ನಗರಾಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ನಿಮ್ಮ ಮುಂದೆ ಕಡತ ಮಂಡಿಸಲು ಸಿದ್ಧತೆ ನಡೆದಿತ್ತು. ಈ ನಡುವೆ ವಸತಿ ಸಚಿವರು ಈ ಫಲಾನುಭವಿಗಳ ಜೊತೆಗೆ ಇನ್ನಷ್ಟು ಫಲಾನುಭವಿಗಳನ್ನು ಸೇರಿಸಿ ಎಲ್ಲರಿಗೂ ನಿವೇಶನದ ಬದಲು ವಸತಿ ನೀಡುವ ಯೋಜನೆಗೆ ತಮ್ಮಿಂದ ಅನುಮತಿ ಪಡೆದಿದ್ದಾರೆ.’

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂ ಒಡೆತನದ ಹಕ್ಕು ನೀಡುವುದು ಅತ್ಯಂತ ಪರಿಣಾಮಕಾರಿ ಮತ್ತು ದೂರದೃಷ್ಟಿಯ ಕಾರ್ಯಕ್ರಮ. ನಿವೇಶನದ ಬದಲು ವಸತಿ ನೀಡುವುದು ಈ ಕಾರ್ಯಕ್ರಮದ ಮೂಲ ಆಶಯಕ್ಕೆ ಧಕ್ಕೆ ತರುತ್ತದೆ. ಇದು ಒಂದು ದಶಕದಿಂದ ನಿವೇಶನ ಪಡೆಯಲು ಕಾಯುತ್ತಿರುವ 1,110 ಫಲಾನುಭವಿಗಳ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ’ ಎಂದೂ ಅವರು ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು