ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯ ಮತ್ತೊಂದು ಹಗರಣದ ತನಿಖೆ ಎಸಿಬಿಗೆ

Last Updated 29 ಫೆಬ್ರುವರಿ 2020, 7:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಸಂಚಾರಿ ಎಂಜಿನಿಯರಿಂಗ್‌ ಕೋಶದಲ್ಲಿ (ಟಿ.ಇ.ಸಿ) ನಡೆದಿರುವ ಹಗರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

‘ರಸ್ತೆ ಹಾಗೂ ಪಾದಚಾರಿ ಸುರಕ್ಷತಾ ಕಾಮಗಾರಿಗಳನ್ನು ನಿರ್ವಹಿಸುವುದು ಟಿ.ಇ.ಸಿ ಜವಾಬ್ದಾರಿ. 2016-17 ಮತ್ತು 2017-18ನೇ ಸಾಲುಗಳಲ್ಲಿ ₹119 ಕೋಟಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಟಿಇಸಿ ಹೇಳಿದ್ದು, ₹108 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ನಗರದ 1,400 ಕಿ.ಮೀ ಉದ್ದದ ಮುಖ್ಯ ರಸ್ತೆಗಳಲ್ಲಿ ಶೇ 20ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು.

‘ಟಿಇಸಿ ₹65 ಕೋಟಿ ಮೊತ್ತದ 71 ಕಾಮಗಾರಿಗಳನ್ನು ಕಾನೂನುಬಾಹಿರವಾಗಿಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್‌) ವಹಿಸಿದೆ. ಘಟಕದ ಎಂಜಿನಿಯರ್‌ಗಳು ರಾಜಕಾರಣಿಗಳಿಗೆ ಆಪ್ತರಾಗಿರುವ ಗುತ್ತಿಗೆದಾರರಿಗೆ ಇವುಗಳ ಉಪಗುತ್ತಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. ₹54 ಕೋಟಿ ಮೊತ್ತದ ಕಾಮಗಾರಿಗಳನ್ನು ತಮ್ಮ ಆಪ್ತ ಗುತ್ತಿಗೆದಾರರಿಗೇ ನೀಡಿದ್ದಾರೆ’ ಎಂದು ದೂರಲಾಗಿತ್ತು. ಈ ಬಗ್ಗೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು.

ಅವ್ಯವಹಾರ ನಡೆದಿದೆ ಎಂದು ಬಿಬಿಎಂಪಿಯ ತಾಂತ್ರಿಕ ಹಾಗೂ ಜಾಗೃತ ಕೋಶವು (ಟಿವಿಸಿಸಿ) ವರದಿ ನೀಡಿತ್ತು. ಈ ಪ್ರಕರಣವನ್ನು ಎಸಿಬಿಗೆ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಾಲಿಕೆಯ ಆಯುಕ್ತರಿಗೆ 2019ರ ಅಕ್ಟೋಬರ್‌ನಲ್ಲಿ ನಿರ್ದೇಶನ ನೀಡಿದ್ದರು.

ಟಿವಿಸಿಸಿ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಆಯುಕ್ತರು, ಈ ಹಗರಣವನ್ನು ಎಸಿಬಿ ತನಿಖೆಗೆ ವಹಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಈ ವರ್ಷದ ಜನವರಿಯಲ್ಲಿ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT