ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎ ಹನುಮಂತಯ್ಯ ಅಮಾನತು

ಬಿಬಿಎಂಪಿ: ಗೋಪ್ಯ ಮಾಹಿತಿ ಸೋರಿಕೆ
Last Updated 2 ಮೇ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಆಯುಕ್ತರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಹನುಮಂತಯ್ಯ ಅವರನ್ನು ಗೋಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ.

ಬಿಬಿಎಂಪಿಯಲ್ಲಿ ಸಹಾಯಕ ಎಂಜಿನಿಯರ್‌ ಆಗಿದ್ದ ಕೃಷ್ಣಲಾಲ್‌ ಅವರು ಪ್ರಸ್ತುತ ಎರವಲು ಸೇವೆ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಬಿಬಿಎಂಪಿ ಕೌದೇನಹಳ್ಳಿಯಲ್ಲಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಭೂಮಿಯ ಅಭಿವೃದ್ಧಿ ಹಕ್ಕು ವರ್ಗಾವಣೆಯ (ಟಿಡಿಆರ್‌) ಮೊತ್ತ ನಿಗದಿಪಡಿಸುವಾಗ ವಾಸ್ತವಕ್ಕಿಂತ ಹೆಚ್ಚು ಬೆಲೆ ನಮೂದಿಸಿದ ಸಂಬಂಧ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧ ವಿಚಾರಣೆ ನಡೆಸಲು ಪಾಲಿಕೆ ಆಯುಕ್ತರಿಂದ ಎಸಿಬಿ ಅಧಿಕಾರಿಗಳು ಪೂರ್ವಾನುಮತಿ ಪಡೆದಿದ್ದರು.

ಕೃಷ್ಣಲಾಲ್‌ ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳು ಏ. 26ರಂದು ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರ ವಿರುದ್ಧ ತನಿಖೆಗೆ ಪಾಲಿಕೆ ಆಯುಕ್ತರು ಪೂರ್ವಾನುಮತಿ ನೀಡಿದ್ದ ಪತ್ರದ ಪ್ರತಿ ಪತ್ತೆಯಾಗಿತ್ತು. ಅದನ್ನು ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಹನುಮಂತಯ್ಯ ನೀಡಿದ್ದರು ಎಂದು ಕೃಷ್ಣಲಾಲ್‌ ತಿಳಿಸಿದ್ದರು.

ಗೋಪ್ಯ ದಾಖಲೆಯ ಪ್ರತಿಯನ್ನು ಭ್ರಷ್ಟಾಚಾರ ಪ್ರಕರಣ ಆರೋಪಿಗೆ ನೀಡಿ, ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಹನುಮಂತಯ್ಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಎಸಿಬಿಯ ಬೆಂಗಳೂರು ನಗರ ವಿಭಾಗದ ಎಸ್‌ಪಿ ಅವರು ಪಾಲಿಕೆಗೆ ಶಿಫಾರಸು ಮಾಡಿದ್ದರು.

ಕರ್ತವ್ಯದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಹನುಮಂತಯ್ಯ ಅವರನ್ನು ಅಮಾನತು ಮಾಡಿರುವುದಾಗಿ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತರು ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT