ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಹಳೇ ಕಂಬಕ್ಕೆ ಹೊಸ ಕೊಂಬು; ಸ್ಮಾರ್ಟ್‌ ದೀಪ!

ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ ಯೋಜನೆ–ಬೆಳಕು ಸಾಲದು, ಸುರಕ್ಷತೆಗೂ ಸವಾಲು: ಸ್ಥಳೀಯರ ಅಳಲು
Last Updated 21 ಸೆಪ್ಟೆಂಬರ್ 2021, 22:21 IST
ಅಕ್ಷರ ಗಾತ್ರ

ಬೆಂಗಳೂರು: ಹಳೇ ವಿದ್ಯುತ್‌ ಕಂಬ. ಅದಕ್ಕೆ ಹೊಸತೊಂದು ಕೊಂಬು. ಆ ಕೊಂಬಿನಲ್ಲಿ ಅಳವಡಿಸಿರುವ ಬೀದಿದೀಪ ರಾತ್ರಿ ವೇಳೆ ಬೆಳಕನ್ನೇನೋ ನೀಡುತ್ತದೆ. ಆದರೆ, ಅದರ ಪ್ರಖರತೆ ಬಹಳ ಕಡಿಮೆ ಇದೆ.

ಟೆಂಡರ್‌ ಅನುಮೋದನೆಗೊಂಡು ಬರೋಬ್ಬರಿ ಮೂರು ವರ್ಷಗಳ ಬಳಿಕ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ ಯೋಜನೆಯಡಿ (ಸ್ಮಾರ್ಟ್‌ ಎಲ್‌ಇಡಿ ಸ್ಟ್ರೀಟ್‌ ಲೈಟಿಂಗ್‌) ವಸಂತನಗರ ವಾರ್ಡ್‌ನಲ್ಲಿ ಅಳವಡಿಸಿರುವ ‘ಸ್ಮಾರ್ಟ್‌ ಬೀದಿ ದೀಪಗಳ’ ವಸ್ತುಸ್ಥಿತಿ ಇದು.

‘ಬೀದಿ ದೀಪದ ಜೊತೆ ವಿದ್ಯುತ್‌ ಕಂಬದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಮಾಲಿನ್ಯ ಸಂವೇದಕ ಅಳವಡಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ದೀಪಕ್ಕೂ ನಿಸ್ತಂತು ಸಂವೇದಕ ಅಳವಡಿಸಲಾಗುತ್ತದೆ. ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಮೂಲಕ ಬೀದಿದೀಪಗಳ ಮೇಲೆ ನಿಗಾ ಸಾಧ್ಯ. ಬೀದಿದೀಪಗಳ ವಿದ್ಯುತ್‌ ಬಳಕೆಯಲ್ಲಿ ಶೇ 85.50ರಷ್ಟು ಉಳಿತಾಯವಾಗುವುದರ ಜೊತೆಗೆ ಹೆಚ್ಚಿನ ಸುರಕ್ಷತೆಗೂ ಇದು ನೆರವಾಗಲಿದೆ’ ಎಂದು ಬಿಬಿಎಂಪಿ ಪ್ರತಿಪಾದಿಸಿತ್ತು.

‘ಈ ಬೀದಿದೀಪಗಳು ಬಿಬಿಎಂಪಿ ಈ ಹಿಂದೆ ಬಣ್ಣಿಸಿದಂತೆ ‘ಸ್ಮಾರ್ಟ್‌’ ಆಗಿಯೂ ಇಲ್ಲ. ಇವುಗಳಿಂದ ಹೆಚ್ಚಿನ ಸುರಕ್ಷತೆಯನ್ನೂ ನಿರೀಕ್ಷಿಸುವಂತಿಲ್ಲ’ ಎಂದು ದೂರುತ್ತಾರೆ ವಸಂತನಗರ ನಿವಾಸಿಗಳು.

‘ನಮ್ಮ ವಾರ್ಡ್‌ನಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯ ಎರಡು ತಿಂಗಳಿನಿಂದ ನಡೆಯುತ್ತಿದೆ. ನಮ್ಮ ವಾರ್ಡ್‌ನಲ್ಲಿದ್ದ ಸೋಡಿಯಂ ದೀಪಗಳ ಬದಲು ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಿದ್ದಾರೆ. ವಿದ್ಯುತ್‌ ಉಳಿತಾಯ ಮಾಡುವ ಬಿಬಿಎಂಪಿಯ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ, ನಮ್ಮ ಮನೆ ಬಳಿ ಅಳವಡಿಸಿರುವ ಬೀದಿ ದೀಪಗಳ ಬೆಳಕು ಏನೇನೂ ಸಾಲದು’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ನ ಸಂಸ್ಥಾಪಕ ಹಾಗೂ ವಸಂತನಗರ ನಿವಾಸಿಯಾಗಿರುವ ರಾಜ್‌ಕುಮಾರ್‌ ದುಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ ಈ ಎಲ್‌ಇಡಿ ಬೀದಿದೀಪಗಳು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿವೆ. ಹೆಚ್ಚು ವಿದ್ಯುತ್‌ ಉಳಿಸಬೇಕು ಎಂಬ ಕಾರಣಕ್ಕೆ ರಾತ್ರಿ 1 ಗಂಟೆ ಬಳಿಕ ಈ ದೀಪಗಳ ಬೆಳಕಿನ ತೀವ್ರತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ರಸ್ತೆಗಳಲ್ಲಿ ಕತ್ತಲು ಆವರಿಸಿರುತ್ತದೆ. ಆಗ ಅಪರಾಧ ಕೃತ್ಯಗಳು ನಡೆದರೆ ಅದಕ್ಕೆ ಯಾರು ಹೊಣೆ. ಬೀದಿ ದೀಪಗಳನ್ನು ಅಳವಡಿಸುವ ಉದ್ದೇಶವೇ ಸುರಕ್ಷತೆ. ಅಪರಾಧ ಕೃತ್ಯಗಳನ್ನು ತಡೆಯಲು ಇವು ನೆರವಾಗಬೇಕು. ಬೀದಿದೀಪದ ಬೆಳಕು ಕತ್ತಲನ್ನು ಹೋಗಲಾಡಿಸದಿದ್ದರೆ, ಅದರಿಂದ ಪ್ರಯೋಜನ ಏನು’ ಎಂದು ಅವರು ಪ್ರಶ್ನಿಸಿದರು.

ಎಲ್‌ಇಡಿ ಬೀದಿದೀಪ ಅಳವಡಿಸುವ ಯೋಜನೆಗೆ ಬಿಬಿಎಂಪಿ 2018ರ ಜ.11ರಂದು ಟೆಂಡರ್‌ ಆಹ್ವಾನಿಸಿತ್ತು. ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕ್ರೊ) ಗುತ್ತಿಗೆ ನೀಡಲಾಗಿದೆ. 2018ರ ಆಗಸ್ಟ್‌ನಲ್ಲಿ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆಯೂ ಸಿಕ್ಕಿತ್ತು. ವರ್ಷ ಕಳೆದರೂ ಈ ಯೋಜನೆ ಅನುಷ್ಠಾನವಾಗದ ಬಗ್ಗೆ ಹಾಗೂ ಅದರಿಂದ ಎದುರಾಗಿದ್ದ ತೊಂದರೆಗಳ ಪಾಲಿಕೆಯ ಕೆಲವು ಸದಸ್ಯರು ಕೌನ್ಸಿಲ್‌ ಸಭೆಯಲ್ಲಿ ಧ್ವನಿ ಎತ್ತಿದ್ದರು.

ಈ ಯೋಜನೆಯನ್ನು ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಮಾದರಿಯಲ್ಲಿ ಜಾರಿಗೆ ತರಲಾಗುತ್ತಿದೆ. ಹೊಸ ಬೀದಿದೀಪಗಳನ್ನು ಐದು ಹಂತಗಳಲ್ಲಿ ಅಳವಡಿಸಲು ಗುತ್ತಿಗೆ ಸಂಸ್ಥೆಗೆ 30 ತಿಂಗಳ ಕಾಲಾವಕಾಶ ನೀಡಲಾಗಿದೆ. ದಾಸರಹಳ್ಳಿ, ಆರ್‌.ಆರ್‌.ನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಆಯ್ದ ವರ್ಡ್‌ಗಳಲ್ಲಿ ಹತ್ತು ವರ್ಷಗಳ ಅವಧಿಗೆ ಬೀದಿ ದೀಪಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನೂ ಗುತ್ತಿಗೆ ಸಂಸ್ಥೆಯೇ ನಿರ್ವಹಿಸಬೇಕಿದೆ. ನಗರದಲ್ಲಿ 4.85 ಲಕ್ಷ ಸಾಂಪ್ರದಾಯಿಕ ಬೀದಿದೀಪಗಳನ್ನು ಬದಲಿಸಿ ಎಲ್‌ಇಡಿ ಬೀದಿದೀಪಗಳನ್ನು ಈ ಒಕ್ಕೂಟವೇ ಅಳವಡಿಸಬೇಕು. ಅವುಗಳನ್ನು 10 ವರ್ಷ ನಿರ್ವಹಣೆ ಮಾಡಬೇಕಿದೆ.

‘ಸ್ಮಾರ್ಟ್‌ ಬೆಳಕು– ನೋಟ ಕೊಳಕು’
‘ಹಳೆಯ ವಿದ್ಯುತ್‌ ಕಂಬಗಳಿಗೆ ಕಬ್ಬಿಣದ ಕೊಳವೆ ಮೂಲಕ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಓರೆ ಕೋರೆಯಾಗಿ ಅಳವಡಿಸಿರುವ ಬೀದಿ ದೀಪಗಳು ನೋಡುವುದಕ್ಕೂ ಕೆಟ್ಟದಾಗಿ ಕಾಣಿಸುತ್ತಿವೆ’ ಎಂಬ ಬಗ್ಗೆಯೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ‘ಸ್ಮಾರ್ಟ್‌ ಬೀದಿ ದೀಪ ಎಂದು ಹೆಸರಿಟ್ಟರೆ ಸಾಕೇ, ಅವು ನೋಡುವುದಕ್ಕೂ ಚೆಂದವಾಗಿರಬೇಕಲ್ಲವೇ. ಸ್ಮಾರ್ಟ್‌ಬೆಳಕು– ನೋಟ ಕೊಳಕು ಎಂಬಂತೆ ಆಗಬಾರದಲ್ಲವೇ’ ಎಂದು ವಸಂತ ನಿಗರದ ನಿವಾಸಿಗಳು ಪ್ರಶ್ನಿಸಿದರು.

‘ವಿದ್ಯುತ್‌ ಉಳಿತಾಯಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಗುತ್ತಿಗೆ ಕರಾರಿನ ಪ್ರಕಾರ ಗುತ್ತಿಗೆ ಸಂಸ್ಥೆಯು ಹಳೆಯ ವಿದ್ಯುತ್‌ ಕಂಬಗಳಿಗೆ ಎಲ್ಇಡಿ ದೀಪ ಅಳವಡಿಸುವುದಕ್ಕೆ ಅವಕಾಶ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ಮನೋಜ್‌ ಜೈನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT