ಮಂಗಳವಾರ, ಮೇ 11, 2021
28 °C
15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ಪಡೆಯಲು ಈ ಮಾರ್ಪಾಡು ಅಗತ್ಯ

ಬದಲಾಗಲಿದೆ ಆಸ್ತಿ ತೆರಿಗೆ ಲೆಕ್ಕಾಚಾರ, ಬಂಡವಾಳಮೌಲ್ಯ ವ್ಯವಸ್ಥೆ ಜಾರಿಗೆ ಸಿದ್ಧತೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರ ಪದ್ಧತಿ ತುಸು ಬದಲಾಗಲಿದೆ. ಪ್ರಸ್ತುತ ಘಟಕ ವಿಸ್ತೀರ್ಣದ ಮೌಲ್ಯ (ಯೂನಿಟ್‌ ಏರಿಯಾ ವ್ಯಾಲ್ಯು) ಆಧಾರದಲ್ಲಿ ವಾರ್ಷಿಕ ತೆರಿಗೆ ಪ್ರಮಾಣವನ್ನು ಲೆಕ್ಕ ಹಾಕುವ ವಿಧಾನ ಅನುಸರಿಸಲಾಗುತ್ತಿದೆ. ಇನ್ನು ಮುಂದೆ ಬಂಡವಾಳ ಮೌಲ್ಯದ ಆಧಾರದಲ್ಲಿ ತೆರಿಗೆ ಎಷ್ಟೆಂಬುದನ್ನು ಲೆಕ್ಕಾಚಾರ ಹಾಕುವ ವಿಧಾನ ಅನುಸರಿಸಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ.

ಬಂಡವಾಳ ಮೌಲ್ಯ ವ್ಯವಸ್ಥೆ ಆಧರಿತ ಆಸ್ತಿ ತೆರಿಗೆ ಲೆಕ್ಕಾಚಾರ ಪದ್ಧತಿ ಜಾರಿಗೆ ತರಲು ಪೂರ್ವಭಾವಿ ಸಿದ್ಧತಾ ಕಾರ್ಯಗಳು ಪ್ರಾರಂಭವಾಗಿವೆ ಎಂದು ಬಿಬಿಎಂಪಿಯ 2021–22ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಉಳಿದೆಲ್ಲ ಮಹಾನಗರ ಪಾಲಿಕೆಗಳಲ್ಲಿ ಬಂಡವಾಳ ಮೌಲ್ಯದ ಆಧಾರದಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರ ಹಾಕುವ ಪದ್ಧತಿ ಈಗಾಗಲೇ ಜಾರಿಯಾಗಿದೆ. ಇದಕ್ಕಾಗಿಯೇ 1976ರ ಕರ್ನಾಟಕ ಪೌರನಿಗಮಗಳ (ಕೆಎಂಸಿ) ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿಯನ್ನೂ ತಂದಿದೆ. ಬಿಬಿಎಂಪಿಯಲ್ಲಿ ಪ್ರಸ್ತುತ 2020ರ ಬಿಬಿಎಂಪಿ ಕಾಯ್ದೆ ಅನ್ವಯ ಆಡಳಿತ ಜಾರಿಯಲ್ಲಿದೆ. ವಾರ್ಷಿಕ ಆಸ್ತಿ ತೆರಿಗೆಯ ಮೌಲ್ಯದ ಲೆಕ್ಕಾಚಾರ ಮಾಡುವ ಕುರಿತು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 144ರಲ್ಲಿ ವಿವರಿಸಲಾಗಿದೆ. ಬಿಬಿಎಂಪಿಯಲ್ಲೂ ಬಂಡವಾಳ ಮೌಲ್ಯದ ಆಧಾರದಲ್ಲಿ ಆಸ್ತಿ ತೆರಿಗೆ ಲೆಕ್ಕ ಹಾಕುವ ವಿಧಾನ ಅನುಸರಿಸಬೇಕಾದರೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 144ಕ್ಕೆ ತಿದ್ದುಪಡಿ ತರಬೇಕಾಗುತ್ತದೆ.

ಏನು ವ್ಯತ್ಯಾಸ?

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಈಗ ಅನುಸರಿಸುವ ಘಟಕದ ವಿಸ್ತೀರ್ಣ ಮೌಲ್ಯ ಆಧರಿತ ಲೆಕ್ಕಾಚಾರದಲ್ಲಿ ನಿರ್ದಿಷ್ಟ ಆಸ್ತಿಯ ಮೌಲ್ಯ ಸ್ಥಿರವಾಗಿರುತ್ತದೆ. ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಬಂಡವಾಳ ಮೌಲ್ಯದ ಆಧಾರದ ಲೆಕ್ಕಾಚಾರ ಅಳವಡಿಸಿಕೊಂಡಾಗ ಆಸ್ತಿ ತೆರಿಗೆ ಆ ಪ್ರದೇಶದ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತದೆ. ಸರ್ಕಾರವು ನಿರ್ದಿಷ್ಟ ಪ್ರದೇಶದ ಮಾರ್ಗಸೂಚಿ ದರವನ್ನು ಕಾಲಕಾಲಕ್ಕೆ ಬದಲಾಯಿಸುತ್ತದೆ. ಆಸ್ತಿಯ ಮಾರ್ಗಸೂಚಿ ಮೌಲ್ಯ ಹೆಚ್ಚಾದರೆ ತೆರಿಗೆಯೂ ಹೆಚ್ಚಳವಾಗುತ್ತದೆ ಹಾಗೂ ಮಾರ್ಗಸೂಚಿ ಮೌಲ್ಯ ಕಡಿಮೆಯಾದರೆ ತೆರಿಗೆಯೂ ಕಡಿಮೆಯಾಗುತ್ತದೆ.

‘ಪ್ರಸ್ತುತ ಆಸ್ತಿ ತೆರಿಗೆ ಲೆಕ್ಕ ಹಾಕುವಾಗ ಪ್ರದೇಶವಾರು ಎ,ಬಿ, ಸಿ, ಡಿ, ಇ, ಎಫ್‌ ಎಂಬ ಆರು ವಲಯಗಳನ್ನು ವರ್ಗೀಕರಣ ಮಾಡಿಕೊಂಡು ಅದರ ಆಧಾರದಲ್ಲಿ ಘಟಕ ವಿಸ್ತೀರ್ಣ ಮೌಲ್ಯ ನಿಗದಿಪಡಿಸುತ್ತೇವೆ. ಆಸ್ತಿಯು ಯಾವ ವಲಯದಲ್ಲಿ ಬರುತ್ತದೆ ಎಂಬುದನ್ನು ತೆರಿಗೆ ಲೆಕ್ಕಾಚಾರದ ವೇಳೆ ಖಾತರಿಪಡಿಸಿಕೊಳ್ಳಬೇಕಾಗುತ್ತದೆ. ಬಂಡವಾಳ ಮೌಲ್ಯ ಆಧರಿತ ವ್ಯವಸ್ಥೆಯಲ್ಲಿ  ಆಸ್ತಿ ತೆರಿಗೆಯ ಶೇ 85ರಷ್ಟು ಪ್ರಮಾಣವು ಮಾರ್ಗಸೂಚಿ ದರಕ್ಕೆ ಅನುಗುಣವಾಗಿರುತ್ತದೆ. ಅದರ ಲೆಕ್ಕಾಚಾರವೂ ತುಂಬಾ ಸರಳ. ಅದು ಆಸ್ತಿ ಇರುವ ಜಾಗದ ಮಾರ್ಗಸೂಚಿ ದರವನ್ನು ಆಧರಿಸಿರುವುದರಿಂದ ಆಸ್ತಿ ಇರುವ ಸ್ಥಳವನ್ನು ಗುರುತಿಸಿದರೆ ಅದರ ಮೌಲ್ಯವೂ ತನ್ನಿಂದ ತಾನೆ ತಿಳಿಯುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ವಿವರಿಸಿದರು.

‘ಬಂಡವಾಳ ಮೌಲ್ಯವು ಮಾರ್ಗಸೂಚಿ ದರವನ್ನು ಆಧರಿಸಿರುವುದರಿಂದ ಆಸ್ತಿ ಮಾಲೀಕರು ತಪ್ಪು ಲೆಕ್ಕಾಚಾರ ನೀಡುವ ಅವಕಾಶಗಳು ಕಡಿಮೆ. ತಪ್ಪು ಲೆಕ್ಕಾಚಾರ ಮಾಡಿದರೂ, ಅದು ಶೇ 15ಕ್ಕಿಂತೆ ಹೆಚ್ಚಾಗಲು ಸಾಧ್ಯವಿಲ್ಲ. ತಪ್ಪು ವರ್ಗೀಕರಣದಿಂದ ಪಾಲಿಕೆಗೆ ಆಗುವ ನಷ್ಟ ತಪ್ಪುತ್ತದೆ’ ಎಂದರು. 

‘15ನೇ ಕೇಂದ್ರ ಹಣಕಾಸು ಆಯೋಗದ ನಿಧಿಯಡಿ ಅನುದಾನ ಪಡೆಯುವುದಕ್ಕೆ ಎಲ್ಲ ಮಹಾನಗರ ಪಾಲಿಕೆಗಳು ಬಂಡವಾಳ ಮೌಲ್ಯ ಆಧರಿತ ತೆರಿಗೆ ಲೆಕ್ಕಾಚಾರ ಪದ್ಧತಿ ಅನುಸರಿಸಲೇ ಬೇಕು. ಹಾಗಾಗಿ, ಇಂದಲ್ಲ ನಾಳೆಯಾದರೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುತ್ತದೆ. ಈ ಸಂಬಂಧ ಕಾನೂನು ತಿದ್ದುಪಡಿ ತರುವುದಕ್ಕೆ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಕಳುಹಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಸದ್ಯಕ್ಕೆ ಜಾರಿ ಅಸಾಧ್ಯ’

‘ಬಂಡವಾಳ ಮೌಲ್ಯ ಆಧರಿತ ಆಸ್ತಿ ತೆರಿಗೆ ಲೆಕ್ಕಾಚಾರ ಪದ್ಧತಿ ಅಳವಡಿಸಲು ಇ–ಆಸ್ತಿ ತಂತ್ರಾಂಶದಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಸಲಹೆ ಹಾಗೂ ಅಭಿಪ್ರಾಯ ಪಡೆಯಬೇಕಾಗುತ್ತದೆ. ಇದೆಲ್ಲಕ್ಕೂ ಏನಿಲ್ಲವೆಂದರೂ 6 ತಿಂಗಳು ಕಾಲಾವಕಾಶಬೇಕು. ಈ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು  2022–23ನೇ ಸಾಲಿನಿಂದ ಹೊಸ ಪದ್ಧತಿ ಅನುಸರಿಸುವ ಸಾಧ್ಯತೆ ಹೆಚ್ಚು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

1976ರ ಕೆಎಂಸಿ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಚಾಲ್ತಿಯಲ್ಲಿರುವ ಪ್ರದೇಶವಾರು ಯೂನಿಟ್‌ ದರಗಳ ಮೇಲೆ ಕನಿಷ್ಠ ಶೇ 15ರಷ್ಟು ಹಾಗೂ ಗರಿಷ್ಠ ಶೇ 30ರಷ್ಟು ಹೆಚ್ಚಳ ಮಾಡಲು ಅವಕಾಶ ಇತ್ತು. ಬಿಬಿಎಂಪಿ ಕಾಯ್ದೆ ಪ್ರಕಾರ ಪ್ರತಿ ವರ್ಷ ಶೇ 5ರವರೆಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಅವಕಾಶ ಇದೆ.

‘ಬಂಡವಾಳ ಮೌಲ್ಯ ಆಧಾರಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೊಂಡರೂ ತೆರಿಗೆಯಲ್ಲಿ ಶೇಕಡಾವಾರು ಹೆಚ್ಚಳ ಮಾಡುವ ಅಧಿಕಾರ ಬಿಬಿಎಂಪಿಗೆ ಇದ್ದೇ ಇದೆ’ ಎಂದು ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

ಮುಖ್ಯಾಂಶ

ಪ್ರಸ್ತುತ ಘಟಕ ವಿಸ್ತೀರ್ಣದ ಮೌಲ್ಯ ಆಧಾರದಲ್ಲಿ ವಾರ್ಷಿಕ ಆಸ್ತಿ ತೆರಿಗೆ ಲೆಕ್ಕಾಚಾರ

ಇನ್ನು ನಿರ್ದಿಷ್ಟ ಪ್ರದೇಶದ ಮಾರ್ಗಸೂಚಿ ದರದ ಜೊತೆ ಜೋಡಣೆ ಆಗಲಿದೆ ತೆರಿಗೆ ಲೆಕ್ಕಾಚಾರ

ಮಾರ್ಗಸೂಚಿ ದರ ಬದಲಾದಂತೆ ತೆರಿಗೆ ಪ್ರಮಾಣವೂ ಮಾರ್ಪಾಡು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು